WTC Final: ಟೆಸ್ಟ್‌ ವಿಶ್ವಕಪ್‌ಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು? ರವಿಶಾಸ್ತ್ರಿ ಕೊಟ್ರು ಸುಳಿವು

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 07ರಿಂದ ಆರಂಭ
ಚಾಂಪಿಯನ್ ಪಟ್ಟಕ್ಕಾಗಿ ಭಾರತ-ಆಸ್ಟ್ರೇಲಿಯಾ ಫೈಟ್
ಟೀಂ ಇಂಡಿಯಾ ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್- ಕೆ ಎಸ್ ಭರತ್ ಪೈಪೋಟಿ

Ravi Shastri Insight On Team India Wicketkeeper Conundrum In WTC Final against Australia kvn

ನವದೆಹಲಿ(ಜೂ.02): ಬಹುನಿರೀಕ್ಷಿತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಜೂನ್ 07ರಂದು ಲಂಡನ್‌ನ ದಿ ಓವಲ್‌ ಮೈದಾನದಲ್ಲಿ ಚಾಂಪಿಯನ್‌ ಪಟ್ಟಕ್ಕಾಗಿ ಬಲಿಷ್ಠ ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು ಕಾದಾಡಲಿವೆ. ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈ ಪ್ರಶಸ್ತಿ ಜಯಿಸಿ, ಕಳೆದೊಂದ ದಶಕದಿಂದ ಭಾರತ ಅನುಭವಿಸುತ್ತಾ ಬಂದಿರುವ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಎದುರು ನೋಡುತ್ತಿದೆ.

2013ರಿಂದೀಚೆಗೆ ಭಾರತ ತಂಡವು ಹಲವು ಬಾರಿ ಐಸಿಸಿ ಟ್ರೋಫಿ ಸಮೀಪ ಬಂದು ಮುಗ್ಗರಿಸಿದೆ. 2013ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಬಳಿಕ ಟೀಂ ಇಂಡಿಯಾ ಐಸಿಸಿ ಟೂರ್ನಿಯಲ್ಲಿ ಕಪ್ ಗೆಲ್ಲಲು ಪದೇ ಪದೇ ವಿಫಲವಾಗುತ್ತಲೇ ಬಂದಿದೆ. ಕಳೆದ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲೂ ಭಾರತ ತಂಡವು ಫೈನಲ್‌ ಪ್ರವೇಶಿಸಿತ್ತು. ಸೌಥಾಂಪ್ಟನ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು 8 ವಿಕೆಟ್‌ಗಳ ಸೋಲು ಅನುಭವಿಸುವ ಮೂಲಕ ಭಾರತ ತಂಡವು ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವು ತನ್ನ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯುತ್ತಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯ ಹೊರತಾಗಿಯೂ ಭಾರತ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಸದೃಢವಾಗಿಯೇ ಕಾಣಿಸುತ್ತಿದೆ. ಆದರೆ ರಿಷಭ್ ಪಂತ್ ಅನುಪಸ್ಥಿತಿ ತಂಡಕ್ಕೆ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಟೆಸ್ಟ್ ವಿಶ್ವಕಪ್ ಫೈನಲ್‌ಗೆ ವಿಕೆಟ್ ಕೀಪರ್ ರೂಪದಲ್ಲಿ ಭಾರತ ತಂಡದಲ್ಲಿ ಇಶಾನ್ ಕಿಶನ್ ಹಾಗೂ ಕೆ ಎಸ್ ಭರತ್ ಸ್ಥಾನ ಪಡೆದಿದ್ದಾರೆ.

ಇದೀಗ ಟೀಂ ಇಂಡಿಯಾ ಮಾಜಿ ಹೆಡ್ ಕೋಚ್ ರವಿಶಾಸ್ತ್ರಿ, ಮುಂಬರುವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಸಂಭಾವ್ಯ 12ರ ಭಾರತ ತಂಡವನ್ನು ಪ್ರಕಟಿಸಿದ್ದು, ವಿಕೆಟ್‌ ಕೀಪರ್ ಯಾರಾದರೇ ಒಳಿತು ಎನ್ನುವುದನ್ನು ವಿವರಿಸಿದ್ದಾರೆ.

ನೀವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಹೇಳಲು ಹೊರಟರೆ, ನನಗೆ ಕಳೆದ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನೆನಪಾಗುತ್ತದೆ. ಆ ಬಾರಿ ಆದ ಪ್ರಮಾದದಿಂದ ನಾವು ಪಾಠ ಕಲಿಯಬೇಕಿದೆ. ವಾತಾವರಣಕ್ಕೆ ಅನುಗುಣವಾಗಿ ತಂಡವನ್ನು ಆಯ್ಕೆ ಮಾಡಬೇಕಾಗುತ್ತದೆ. ಕಳೆದ ಬಾರಿ ಸೌಥಾಂಪ್ಟನ್‌ನಲ್ಲಿ ನಡೆದ ಫೈನಲ್‌ನಲ್ಲಿ ತುಂಬಾ ಮೋಡ ಕವಿದ ವಾತಾವರಣವಿತ್ತು ಹೀಗಾಗಿ ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ನಾನು ನನ್ನ 12 ಆಟಗಾರರನ್ನೊಳಗೊಂಡ ಭಾರತ ತಂಡವನ್ನು ವಿವರಿಸುತ್ತಿದ್ದೇನೆ.

WTC Final: ಟೆಸ್ಟ್‌ ಫೈನಲ್‌ಗೆ ಟೀಂ ಇಂಡಿಯಾ ಕಠಿಣ ಅಭ್ಯಾಸ

ನನ್ನ 12 ಆಟಗಾರರ ತಂಡ ತುಂಬಾ ಸ್ಪಷ್ಟವಾಗಿದೆ. ಆರಂಭಿಕರಾಗಿ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ, ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 5ನೇ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಇರಲಿದ್ದಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯೊಂದರಲ್ಲಿ ವಿವರಿಸಿದ್ದಾರೆ.

ಈಗ ಇಶಾನ್ ಕಿಶನ್ ಹಾಗೂ ಕೆ ಎಸ್ ಭರತ್ ಇಬ್ಬರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಯಾರಾಗಬೇಕು ಎನ್ನುವ ಸವಾಲು ನಮ್ಮ ಮುಂದಿದೆ.  ನನ್ನ ಪ್ರಕಾರ ಭಾರತ ತಂಡವು ಯಾವ ಬೌಲಿಂಗ್ ಕಾಂಬಿನೇಷನ್‌ನೊಂದಿಗೆ ಕಣಕ್ಕಿಳಿಯಲಿದೆ ಎನ್ನುವುದರ ಆಧಾರದಲ್ಲಿ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ. ಭಾರತ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದರೆ, ಕೆ ಎಸ್ ಭರತ್ ಸ್ಥಾನ ಪಡೆಯಬಹುದು. ಒಂದು ವೇಳೆ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದರೆ ಇಶಾನ್‌ ಕಿಶನ್ ಸ್ಥಾನ ಪಡೆಯಬಹುದು. ಹೀಗಾದಲ್ಲಿ ಆರನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ, ಏಳನೇ ಕ್ರಮಾಂಕದಲ್ಲಿ ಮೊಹಮ್ಮದ್ ಶಮಿ, 8ನೇ ಕ್ರಮಾಂಕದಲ್ಲಿ ಮೊಹಮ್ಮದ್ ಸಿರಾಜ್, 9ನೇ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್, 10 ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್‌ 12ನೇ ಆಟಗಾರನಾಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ರವಿಶಾಸ್ತ್ರಿ ವಿವರಿಸಿದ್ದಾರೆ.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್‌.ಭರತ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜಯದೇವ್‌ ಉನಾದ್ಕತ್‌, ಇಶಾನ್‌ ಕಿಶನ್‌.

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್‌, ಮುಕೇಶ್‌ ಕುಮಾರ್‌, ಸೂರ್ಯಕುಮಾರ್‌ ಯಾದವ್‌.
 

Latest Videos
Follow Us:
Download App:
  • android
  • ios