ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಪತನಗೊಂಡ ಘಟನೆಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಸಂತಾಪ ಸೂಚಿಸಲಾಗಿದೆ. ಆಟಗಾರರು ಮತ್ತು ಅಂಪೈರ್‌ಗಳು ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದರು. ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರೀಡಾ ತಾರೆಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಲಾರ್ಡ್ಸ್: ಗುರುವಾರ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ಡ್ರೀಂಲೈನರ್ ವಿಮಾನ, ಪ್ರಯಾಣ ಆರಂಭಿಸಿ ಕೆಲ ಹೊತ್ತಿನಲ್ಲೇ ಪತನಗೊಂಡ ಭೀಕರ ಘಟನೆ ನಡೆದಿದೆ. ಸುಮಾರು 230 ಪ್ರಯಾಣಿಕರು, ಪೈಲೆಟ್, ಗಗನ ಸಖಿಯರು ಸೇರಿದಂತೆ 12 ಸಿಬ್ಬಂದಿಗಳು ಇದ್ದ ಈ ವಿಮಾನ ಟೇಕ್‌ಆಫ್ ಆಗಿ ಕೇವಲ 40 ಸೆಕೆಂಡ್ ಅಂತರದಲ್ಲಿ ವಿಮಾನ ಪತನಗೊಂಡಿತು. ಇದು ಭಾರತದಲ್ಲಿ ಅನುಭವಿಸಿದ ಎರಡನೇ ವೈಮಾನಿಕ ದುರಂತ ಎನಿಸಿಕೊಂಡಿದೆ. ಈ ಘಟನೆಗೆ ಕೇವಲ ಭಾರತ ಮಾತ್ರವಲ್ಲದೇ ಜಗತ್ತಿನಾದ್ಯಂತ ಜನರು ಕಂಬನಿ ಮಿಡಿದಿದ್ದಾರೆ. ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲೂ ಈ ದುರ್ಘಟನೆಗೆ ಸಂತಾಪ ವ್ಯಕ್ತವಾಗಿದೆ.
ಕಪ್ಪುಪಟ್ಟಿ ತೊಟ್ಟು ಕಣಕ್ಕಿಳಿದ ಆಟಗಾರರು, ಅಂಪೈರ್ಸ್!
ಬಹುನಿರೀಕ್ಷಿತ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 11ರಿಂದ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿದೆ. ಚಾಂಪಿಯನ್ ಪಟ್ಟ ಅಲಂಕರಿಸಲು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಾಡುತ್ತಿವೆ. ಇದೀಗ ಅಹಮದಾಬಾದ್ ವಿಮಾನ ದುರಂತಕ್ಕೆ ಈ ಎರಡು ತಂಡಗಳ ಆಟಗಾರರು ಸಂತಾಪ ಸೂಚಿಸಿದ್ದು, ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿಯುವ ಮೂಲಕ ಮಡಿದ ಜೀವಗಳಿಗೆ ಗೌರವಸಂತಾಪ ಸೂಚಿಸಿದ್ದಾರೆ. ಇನ್ನು ಆಟಗಾರರು ಮಾತ್ರವಲ್ಲದೇ ಆನ್‌ಫೀಲ್ಡ್ ಅಂಪೈರ್‌ಗಳು ಕೂಡಾ ಕಪ್ಪುಪಟ್ಟಿ ತೊಟ್ಟು ಮೈದಾನದಲ್ಲಿ ಕಾಣಿಸಿಕೊಂಡರು. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರ ನಡೆಗೆ ಭಾರತದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 212 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡವು ಪ್ಯಾಟ್ ಕಮಿನ್ಸ್ ಮಾರಕ ದಾಳಿಗೆ ತತ್ತರಿಸಿ ಕೇವಲ 138 ರನ್‌ಗಳಿಗೆ ಸರ್ವಪತನ ಕಂಡಿತು. ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ 28 ರನ್ ನೀಡಿ 6 ವಿಕೆಟ್ ಕಬಳಿಸಿದರು. ಇನ್ನು 74 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಎರಡನೇ ದಿನದಾಟದಂತ್ಯಕ್ಕೆ 8 ವಿಕೆಟ್‌ಗೆ 144 ರನ್ ಗಳಿಸಿತ್ತು. ಈ ಮೂಲಕ ಕಾಂಗರೂ ಪಡೆ ಒಟ್ಟು 218 ರನ್ ಮುನ್ನಡೆಯಲ್ಲಿತ್ತು. ಇನ್ನು ಮೂರನೇ ದಿನದಾಟದಲ್ಲಿ ನೆಲಕಚ್ಚಿ ಆಡಿದ ಮಿಚೆಲ್ ಸ್ಟಾರ್ಕ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಹರಿಣಗಳ ಪಡೆಯನ್ನು ಕಾಡಿದರು. ಸ್ಟಾರ್ಕ್ 136 ಎಸೆತಗಳನ್ನು ಎದುರಿಸಿ 5 ಬೌಂಡರಿ ಸಹಿತ ಅಜೇಯ 58 ರನ್ ಸಿಡಿಸಿದರು. ಅಂತಿಮವಾಗಿ ಆಸೀಸ್ 207 ರನ್ ಗಳಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ಸರ್ವಪತನ ಕಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆಲ್ಲಲು ದಕ್ಷಿಣ ಆಫ್ರಿಕಾ ತಂಡಕ್ಕೆ 282 ರನ್‌ಗಳ ಕಠಿಣ ಗುರಿ ನೀಡಿದೆ.
ವಿಮಾನ ದುರಂತಕ್ಕೆ ವಿರಾಟ್ ಸೇರಿ ಕ್ರೀಡಾ ತಾರೆಗಳ ಕಂಬನಿ
ಗುಜರಾತ್‌ನ ಅಹಮದಾಬಾದ್ ನಲ್ಲಿ ಗುರುವಾರ ಉಂಟಾದ ಭೀಕರ ವಿಮಾನ ದುರಂತಕ್ಕೆ ಕ್ರೀಡಾಲೋಕ ಕಂಬನಿ ಮಿಡಿದಿದೆ. ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ವಿಮಾನ ದುರಂತ ಸುದ್ದಿ ಕೇಳಿ ಆಘಾತವಾಯಿತು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕಾಗಿ ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯ, ಮಾಜಿ ಕ್ರಿಕೆಟಿಗರಾದ ಯುಜರಾಜ್ ಸಿಂಗ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಟೆನಿಸ್ ತಾರೆ ಸಾನಿಯಾ ಮಿರ್ಜಾ, ಜಾವೆಲಿನ್ ತಾರೆ ನೀರಜ್ ಚೋಪ್ರಾ, ಬಾಕ್ಸರ್ ವಿಜೇಂದರ್ ಸಿಂಗ್, ಬಿಲಿಯಾರ್ಡ್ ಪಟು ಪಂಕಜ್ ಅಡ್ವಾಣಿ ಎಕ್ಸ್ ಖಾತೆಗಳನ್ನು ಈ ಬಗ್ಗೆ ಬರೆದುಕೊಂಡಿದ್ದು, ಆಘಾತಕಾರಿ ಘಟನೆಯಿಂದ ಹೃದಯ ಒಡೆದು ಹೋಗಿದೆ ಎಂದಿದ್ದಾರೆ.
