ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿಗೆ ಭರ್ಜರಿ ಚಾಲನೆಮಹಿಳಾ ಹರಾಜಿನಲ್ಲಿ 409 ಆಟಗಾರ್ತಿಯರು ಅದೃಷ್ಟ ಪರೀಕ್ಷೆವಿಶ್ವಕಪ್ ಹೀರೋ ಜೆಮಿಯಾ ರೋಡ್ರಿಗ್ಸ್‌ ಡೆಲ್ಲಿ ಕ್ಯಾಪಿಟಲ್ಸ್ ಪಾಲು

ಬೆಂಗಳೂರು(ಫೆ.13): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಭರ್ಜರಿಯಾಗಿ ಸಾಗುತ್ತಿದ್ದು, ಭಾರತದ ತಾರಾ ಆಲ್ರೌಂಡರ್‌ ದೀಪ್ತಿ ಶರ್ಮಾ ಅವರನ್ನು ಯುಪಿ ವಾರಿಯರ್ಸ್‌ ಖರೀದಿಸುವಲ್ಲಿ ಯಶಸ್ವಿಯಾದರೆ, ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ನಥಾಲಿ ಶೀವರ್ ಅವರನ್ನು ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿ ಯಶಸ್ವಿಯಾಗಿದೆ.

50 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ದೀಪ್ತಿ ಶರ್ಮಾ ಅವರನ್ನು ಖರೀದಿಸಲು ಮುಂಬೈ ಹಾಗೂ ಯುಪಿ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತಾದರೂ ಕೊನೆಗೂ 2.60 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯುಪಿ ವಾರಿಯರ್ಸ್‌ ಯಶಸ್ವಿಯಾಯಿತು. ದೀಪ್ತಿ ಶರ್ಮಾ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಇನ್ನು ಇಂಗ್ಲೆಂಡ್‌ ಉಪನಾಯಕಿ ನಥಾಲಿ ಶೀವರ್ ಮೂಲ ಬೆಲೆ 50 ಲಕ್ಷ ರುಪಾಯಿ ಹೊಂದಿದ್ದರು. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿರುವ ನಥಾಲಿಯನ್ನು 3.20 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನು ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್‌ ಆಶ್ಲೆ ಗಾರ್ಡ್ನರ್‌ ಅವರನ್ನು ಬರೋಬ್ಬರಿ 3.20 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಗುಜರಾತ್ ಜೈಂಟ್ಸ್‌ ಯಶಸ್ವಿಯಾಯಿತು. ಹಲವು ವಿಶ್ವಕಪ್ ವಿಜೇತ ತಂಡದ ಸದಸ್ಯೆ ಗಾರ್ಡ್ನರ್ ಅವರನ್ನು ಗುಜರಾತ್ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 

ಇನ್ನುಳಿದಂತೆ ಇಂಗ್ಲೆಂಡ್ ಆಲ್ರೌಂಡರ್ ಸೋಫಿ ಎಕ್ಲೆ​ಸ್ಟೋನ್‌ ಅವರನ್ನು 1.80 ಕೋಟಿ ರುಪಾಯಿ ನೀಡಿ ಯುಪಿ ವಾರಿಯರ್ಸ್‌ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಅವರನ್ನು 1.50 ಕೋಟಿ ರುಪಾಯಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ತನ್ನತ್ತ ಖರೀದಿಸುವಲ್ಲಿ ಯಶಸ್ವಿಯಾಗಿದೆ. 

ಇನ್ನು ಯುಪಿ ವಾರಿಯರ್ಸ್‌, ಆಸ್ಟ್ರೇಲಿಯಾದ ತಾಹಿಲಾ ಮೆಗ್ರಾಥ್‌ ಅವರನ್ನು 1.40 ಕೋಟಿ ರುಪಾಯಿ ನೀಡಿ ಖರೀದಿಸಿದರೆ, ದಕ್ಷಿಣ ಆಫ್ರಿಕಾದ ವೇಗಿ ಶಬ್ನಮ್‌ ಇಸ್ಮಾಯಿಲ್ ಅವರಿಗೆ 1 ಕೋಟಿ ರುಪಾಯಿ ನೀಡಿ ಯುಪಿ ತನ್ನತ್ತ ಸೆಳೆದುಕೊಂಡಿದೆ. ಇನ್ನು ಆಸ್ಟ್ರೇಲಿಯಾದ ಬೆತ್ ಮೂನಿ 2 ಕೋಟಿ ರುಪಾಯಿಗೆ ಗುಜರಾತ್ ಜೈಂಟ್ಸ್‌ ಪಾಲಾಗಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಅಜೇಯ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದ ಜೆಮಿಮಾ ರೋಡ್ರಿಗ್ಸ್‌ ಅವರನ್ನು 2.2 ಕೋಟಿ ರುಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್‌ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇನ್ನು ಲೆಗ್‌ಸ್ಪಿನ್ ಆಲ್ರೌಂಡರ್ ಅಮೆಲಿಯಾ ಕೆರ್ರ್ ಅವರನ್ನು ಒಂದು ಕೋಟಿ ರುಪಾಯಿ ನೀಡಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತನ್ನ ತೆಕ್ಕೆಗೆ ಸೆಳೆದುಕೊಂಡಿದೆ.

ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಿಗ್ಗಜ ನಾಯಕಿ ಮೆಗ್‌ ಲ್ಯಾನಿಂಗ್‌ ಅವರಿಗೆ 1.10 ಕೋಟಿ ರುಪಾಯಿ ನೀಡಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.