'ಉರ್ಫಿ ನೋಡೋಕೆ ಇದಕ್ಕಿಂತ ಜಾಸ್ತಿ ಜನ ಸೇರ್ತಾರೆ..' ಪ್ಯಾಟ್ ಕಮಿನ್ಸ್‌ಗೆ ಆಸೀಸ್‌ನಲ್ಲಿ ನೀರಸ ಸ್ವಾಗತಕ್ಕೆ ಭಾರತೀಯರ ಬೇಸರ!
2023 ರ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್, ಸಿಡ್ನಿ ವಿಮಾನ ನಿಲ್ದಾಣದಲ್ಲಿ ನೀರಸ ಸ್ವಾಗತವನ್ನು ಸ್ವೀಕರಿಸುವ ವೈರಲ್ ವೀಡಿಯೊ ಭಾರತೀಯ ಕ್ರಿಕೆಟ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.
ಬೆಂಗಳೂರು (ನ.23): ಭಾರತದಲ್ಲಿ ಕ್ರಿಕೆಟ್ ಎಷ್ಟು ದೊಡ್ಡ ಕ್ರೀಡೆ ಎನ್ನುವುದು ಮೂರು ದಿನಗಳ ಹಿಂದೆ ನಡೆದ ಏಕದಿನ ವಿಶ್ವಕಪ್ ಫೈನಲ್ ವೇಳೆ ಗೊತ್ತಾಗಿದೆ. ದಾಖಲೆಯ ಪ್ರೇಕ್ಷಕರು, ದಾಖಲೆಯ ವೀಕ್ಷಕರು ಈ ಪಂದ್ಯವನ್ನು ನೋಡಿದ್ದರು. ಆದರೆ, ಭಾರತ ವಿಶ್ವಕಪ್ ಗೆಲ್ಲುವುದನ್ನು ಕಣ್ತುಂಬಿಕೊಳ್ಳುವ ಆಸೆ ಮಾತ್ರ ಈಡೇರಲಿಲ್ಲ. ಹಾಗೇನಾದರೂ ಭಾರತ ವಿಶ್ವಕಪ್ ಗೆದ್ದಿದ್ದರೆ, ಏನಾಗುತ್ತಿತ್ತು? ಬಹುಶಃ ಅದರ ಸಂಭ್ರಮಾಚರಣೆಯೇ ಒಂದು ತಿಂಗಳು ನಡೆಯುತ್ತಿತ್ತು. ಆದರೆ, ವಿಶ್ವಕಪ್ ವಿಜೇತ ಆಸೀಸ್ ತಂಡದ ಪಾಲಿಗೆ ಮಾತ್ರ ಹಾಗಾಗಲಿಲ್ಲ. ಒಂದು ತಿಂಗಳ ಕಾಲ ವಿಶ್ವಕಪ್ ರಣಾಗಂಣದಲ್ಲಿ ಹೋರಾಟ ಮಾಡಿ ಟ್ರೋಫಿ ಗೆದ್ದ ಆಸೀಸ್ ತಂಡಕ್ಕೆ ಸಿಡ್ನಿ ವಿಮಾನ ನಿಲ್ದಾಣದಲ್ಲಿ ನೀರಸ ಸ್ವಾಗತ ಸಿಕ್ಕಿದೆ. ನಾಯಕ ಪ್ಯಾಟ್ ಕಮಿನ್ಸ್ ಏರ್‌ಪೋರ್ಟ್‌ನಿಂದ ಹೊರಬರುವಾಗ ಬೆರಳೆಣಿಕೆಯಷ್ಟು ಮಾಧ್ಯಮದವರು ಮಾತ್ರವೇ ಅಲ್ಲಿದ್ದರು. ಕ್ರಿಕೆಟ್ ಫ್ಯಾನ್ಸ್‌ಗಳಂತೂ ಕಾಣುತ್ತಲೇ ಇರಲಿಲ್ಲ. ದಾಖಲೆಯ ಆರನೇ ಬಾರಿಗೆ ಆಸ್ಟ್ರೇಲಿಯಾ ಟ್ರೋಫಿ ಗೆದ್ದಿರಬಹುದು. ಆದರೆ, ವಿಶ್ವಕಪ್ ಟ್ರೋಫಿ ಗೆದ್ದ ಉತ್ಸಾಹ ಸಣ್ಣ ಮಟ್ಟಿಗೂ ಆಸೀಸ್ ಪ್ರಜೆಗಳಲ್ಲಿ ಇದ್ದಿರಲಿಲ್ಲ ಎನ್ನುವುದು ಪ್ಯಾಟ್ ಕಮಿನ್ಸ್‌ಗೆ ಸಿಕ್ಕಿ ಸ್ವಾಗತದಿಂದಲೇ ಕಾಣುತ್ತಿತ್ತು. ಈ ವಿಡಿಯೋವನ್ನು ನೋಡಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತರೇಹವಾರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಕಮಿನ್ಸ್ ಸ್ವಾಗತಕ್ಕೆ ಕ್ರಿಕೆಟ್ ಆಸ್ಟ್ರೇಲಿಯಾದ ಸಿಬ್ಬಂದಿ ಕೂಡ ಇದ್ದಿರಲಿಲ್ಲ. ತನ್ನೆಲ್ಲಾ ಲಗೇಜ್‌ಗಳನ್ನು ಟ್ರಾಲಿಯಲ್ಲಿ ತುಂಬಿಕೊಂಡ ಕಮಿನ್ಸ್, ಎದುರಿಗಿದ್ದ ಕೆಲ ಫೋಟೋ ಜರ್ನಲಿಸ್ಟ್‌ಗಳಿಗೆ ಪೋಸ್ಟ್ ನೀಡಿ ನಿಧಾನವಾಗಿ ಏರ್‌ಪೋರ್ಟ್‌ನಿಂದ ಹೊರನಡೆದಿದ್ದಾರೆ. ಆರನೇ ಬಾರಿಗೆ ವಿಶ್ವಚಾಂಪಿಯನ್ ಆದ ತಂಡದ ಆಟಗಾರರನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಯಾವ ಉತ್ಸಾಹ ಕೂಡ ಅಲ್ಲಿನ ಪ್ರಜೆಗಳಿಗೆ ಇದ್ದಿರಲಿಲ್ಲ.
ಈ ವಿಡಿಯೋವನ್ನು ನೋಡಿದ ಭಾರತದ ಕ್ರಿಕೆಟ್ ಅಭಿಮಾನಿಗಳು ಇದನ್ನು ನಂಬಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಇದಕ್ಕಿಂತ ಜಾಸ್ತಿ ಜನ, ನಮ್ಮೂರಿನ ಯಾವುದೇ ಆಫೀಸ್ ಟೀ ಸ್ಟಾಲ್‌ನಲ್ಲಿ ಯಾವುದೇ ಟೈಮ್‌ನಲ್ಲಿ ಕಾಣಸಿಗ್ತಾರೆ' ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಈತ ವಿಶ್ವಕಪ್ ಗೆದ್ದ ತಂಡದ ಕ್ಯಾಪ್ಟನ್.ಸ ಇದಕ್ಕಿಂತ ಜಾಸ್ತಿ ಜನ ನಮ್ಮಲ್ಲಿ ಉರ್ಫಿ ಜಾಧವ್ ಹಾಗೂ ರಾಖಿ ಸಾವಂತ್‌ರನ್ನು ನೋಡೋಕೆ ಭಾರತದ ಜನರು ರಸ್ತೆಯಲ್ಲಿರ್ತಾರೆ' ಎಂದು ಬರೆದಿದ್ದಾರೆ.
ಇನ್ನೂ ಕೆಲವರು ಆಸೀಸ್ ತಂಡದ ಆಟಗಾರರಿಗೆ ಅವರ ದೇಶದಲ್ಲಿಯೇ ಸಿಕ್ಕ ಸ್ವಾಗತವನ್ನು ಕಂಡು ಲೇವಡಿ ಮಾಡಿದ್ದಾರೆ. 'ಇದು ವಿಶ್ವಕಪ್ ವಿಜೇತ ತಂಡದ ನಾಯಕ ಪ್ಯಾಟ್ ಕಮಿನ್ಸ್‌ಗೆ ಏರ್‌ಪೋರ್ಟ್‌ನಲ್ಲಿ ಸಿಕ್ಕಿರುವ ಸ್ವಾಗತ. ನನ್ನ ಪ್ರಕಾರ ಆಸೀಸ್‌ನಲ್ಲಿ ವಿಶ್ವಕಪ್ ಟೂರ್ನಿ ನೇರಪ್ರಸಾರವಾಗಿರುವ ಸಾಧ್ಯತೆ ಕಡಿಮೆ' ಎಂದು ಟ್ವೀಡ್ ಮಾಡಿದ್ದಾರೆ. 'ವಿದೇಶದಲ್ಲಿ ಕಲಿತು ಊರಿಗೆ ವಾಪಾಸಾಗುವ ಹುಡುಗನ ಸ್ವಾಗತಕ್ಕೆ ಇದಕ್ಕಿಂತ ಹೆಚ್ಚಿನ ಜನ ನಮ್ಮೂರಲ್ಲಿ ಸೇರುತ್ತಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಡಿವೋರ್ಸ್ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ವೈಯುಕ್ತಿಕ ವಿಚಾರ ಹಂಚಿ ಕಣ್ಣೀರಿಟ್ಟ ಶೊಯೆಬ್ ಮಲಿಕ್!
ವಿಶ್ವಕಪ್ ಗೆದ್ದ ಬಳಿಕ ಭಾರತದ ಅಭಿಮಾನಿಯೊಬ್ಬರು ಇದೇ ರೀತಿಯಲ್ಲಿ ಪ್ರೆಡಿಕ್ಟ್ ಮಾಡಿದ್ದರು. ಆಸೀಸ್ ಅಭಿಮಾನಿಗಳು ಈ ವಿಶ್ವಕಪ್ ಗೆಲುವನ್ನು ತೀರಾ ಅಲ್ಪ ದಿನದಲ್ಲಿ ಮರೆತು ಬಿಡುತ್ತಾರೆ ಎಂದಿದ್ದರು. 'ಆಸ್ಟ್ರೇಲಿಯಾ ತಂಡ ಬಹುಶಃ ತಾವು ವಿಶ್ವಕಪ್ ಗೆದ್ದಿದ್ದೇವೆ ಅನ್ನೋದನ್ನು ಮರೆಯಲು 5 ದಿನಗಳು ಸಾಕಾಗುತ್ತದೆ. ಆದರೆ, ಆಸೀಸ್ ಅಭಿಮಾನಿಗಳು ತಾವು ವಿಶ್ವಕಪ್ ಗೆದ್ದಿದ್ದನ್ನು ಎರಡೇ ದಿನಗಳಲ್ಲಿ ಮರೆತು ಬಿಟ್ಟಿದ್ದಾರೆ' ಎಂದು ಬರೆದಿದ್ದಾರೆ.
Reports: ಐಪಿಎಲ್ ಕೋಚಿಂಗ್‌ನತ್ತ ಕಣ್ಣಿಟ್ಟ ದ್ರಾವಿಡ್, ಟೀಮ್ ಇಂಡಿಯಾಗೆ ವಿವಿಎಸ್ ಹೊಸ ಕೋಚ್?