'ನಮ್ಮಲ್ಲಿ ಪ್ರತಿಭೆಗಳಿಲ್ಲ..' ಪಾಕಿಸ್ತಾನದ ಬ್ಯಾಟಿಂಗ್ ನೋಡಿಯೇ ನಿರಾಸೆಯಾದ ಶೋಯೆಬ್ ಅಖ್ತರ್!
ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ದಯನೀಯ ಬ್ಯಾಟಿಂಗ್ ವೈಫಲ್ಯಕ್ಕೆ ಪಾಕ್ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ದೊಡ್ಡ ಇನ್ನಿಂಗ್ಸ್ ಆಡುವಂಥ ಪ್ರತಿಭೆಗಳು ನಮ್ಮಲ್ಲಿಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು (ಅ.14): ಬ್ಯಾಟಿಂಗ್‌ಗೆ ನೆರವೀಯುವ ಪಿಚ್‌ನಲ್ಲಿ ಪಾಕಿಸ್ತಾನ ತಂಡದ ಬ್ಯಾಟಿಂಗ್ ವಿಭಾಗದ ದಯನೀಯ ನಿರ್ವಹಣೆಗೆ ಪಾಕಿಸ್ತಾನದ ಮಾಜಿ ಬೌಲರ್ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ನಮ್ಮಲ್ಲಿ ದೊಡ್ಡ ಇನ್ನಿಂಗ್ಸ್ ಆಡುವಂಥ ಪ್ರತಿಭೆಗಳೇ ಇಲ್ಲ ಎಂದಿರುವ ಅವರು, ಟೀಂ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಬಹುಪರಾಕ್ ಎಂದಿದ್ದಾರೆ. ಅದಲ್ಲದೆ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಪ್ರಮುಖ ಸಮಯದಲ್ಲಿ ತಮ್ಮ ಬೌಲರ್‌ಗಳಿಗೆ ಅವಕಾಶ ನೀಡುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು ಎಂದು ಹೇಳಿದ್ದಾರೆ. ಪಾಕಿಸ್ತಾನಕ್ಕೆ ಸಿಕ್ಕಿರುವ ಅವಕಾಶಗಳನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡಿತು ಎಂದು ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಖ್ತರ್ ಹೇಳಿದಂತೆ ಪಾಕಿಸ್ತಾನ ಕನಿಷ್ಠ 200 ರನ್ ಪೇರಿಸಲು ಕೂಡ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ 2 ವಿಕೆಟ್‌ಗೆ 155 ರನ್ ಬಾರಿಸಿದ್ದ ಪಾಕಿಸ್ತಾನ ನಂತರದ 8 ವಿಕೆಟ್‌ಗಳನ್ನು ಕೇವಲ 36 ರನ್‌ಗಳಿಗೆ ಕಳೆದುಕೊಳ್ಳುವ ಮೂಲಕ 191 ರನ್‌ಗೆ ಆಲೌಟ್ ಆಯಿತು.
ನೀವೆಲ್ಲರೂ ಮ್ಯಾಚ್ ನೋಡಿರುತ್ತೀರಿ. ಎಂಥಾ ಸುಂದರವಾದ ವಿಕೆಟ್ ಆಗಿತ್ತು. ನಮ್ಮ ಹುಡುಗರಿಗೆ ಎಂಥಾ ಜಬರ್ದಸ್ತ್ ಆಗಿದ್ದ ವೇದಿಕೆ ಸಿಕ್ಕಿತ್ತು. ಅಬ್ದುಲ್ಲಾ ಶಫೀಕ್, ಇಮಾಮ್, ಬಾಬರ್ ಸೇರಿದಂತೆ ಎಲ್ಲರಿಗೂ ತೀರಾ ಅದ್ಭುತವಾದ ವೇದಿಕೆ ಈ ಪಂದ್ಯದಿಂದ ಸಿಕ್ಕಿತ್ತು. ಆದರೆ, ಪಾಕಿಸ್ತಾನ ಈ ಅವಕಾಶವನ್ನು ಬಳಸಿಕೊಳ್ಳಲು ಯಶಸ್ವಿಯಾಗಲಿಲ್ಲ. ಪಾಕಿಸ್ತಾನದಲ್ಲಿ ದೀರ್ಘ ಇನ್ನಿಂಗ್ಸ್ ಆಡುವಂಥ ಪ್ರತಿಭೆ ಇಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳಬೇಕು. ದೊಡ್ಡ ಇನ್ನಿಂಗ್ಸ್ ಆಡುವ ಆಟಗಾರ ನಮಗೆ ಬೇಕು. ಇಂಥ ಪರಿಸ್ಥಿತಿಯನ್ನು ತನ್ನ ಪಾಲಿಗೆ ತಿರುಗಿಸಿಕೊಳ್ಳುವಂಥ ಆಟಗಾರ ಬೇಕು. ಇಂಥ ಆಟವನ್ನು ನೋಡುವಾಗ ನನಗಂತೂ ಬಹಳ ಬೇಸರವಾಗುತ್ತದೆ. ಇಂಥಾ ಅದ್ಭುತ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ಪಂದ್ಯದಲ್ಲಿ ಹಿನ್ನಡೆ ಕಾಣುವುದನ್ನು ನೋಡುವುದೇ ಬೇಸರವಾಗುತ್ತದೆ ಎಂದು ಶೋಯೆಬ್ ಅಖ್ತರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ತಿಳಿಸಿದ್ದಾರೆ.
ಪಿಚ್‌ನಲ್ಲಿ ಚೆಂಡು ತೀರಾ ಭಿನ್ನವಾಗಿ ವರ್ತನೆ ಮಾಡುತ್ತಿರಲಿಲ್ಲ. ತೀರಾ ಮೇಲೆ ಏಳುತ್ತಿರಲಿಲ್ಲ. ಕ್ರಾಸ್ ಬ್ಯಾಟಿಂಗ್ ಮಾಡುವ, ಕ್ರಾಸ್ ಸೀಮ್‌ನಲ್ಲಿ ಆಡುವ ಯಾವುದೇ ಅಗತ್ಯವಿರಲಿಲ್ಲ. ಇಂಥ ಆಟವನ್ನು ನೋಡುವಾಗ ಒಬ್ಬ ಪಾಕಿಸ್ತಾನಿಯಾಗಿ ಬಹಳ ಬೇಸರವಾಗುತ್ತದೆ. ಇಂಥ ಸ್ಥಿತಿಯನ್ನು ಉತ್ತಮವಾಗಿ ಬಳಸಿಕೊಳ್ಳದ ಬಗ್ಗೆ ಬೇಜಾರಾಗುತ್ತಿದೆ. ಈಗ ತಂಡ ಆಡುತ್ತಿರುವ ರೀತಿ ನೋಡಿದರೆ, 200 ಆಗುವುದು ಕೂಡ ಕಷ್ಟ ಎನಿಸುತ್ತದೆ. ಈಗಾಗಲೇ 6 ವಿಕೆಟ್ ಹೋಗಿದೆ. ಎಂಥಾ ಅದ್ಭುತ ಅವಕಾಶಗಳನ್ನು ನಮ್ಮ ಹುಡುಗರು ಹಾಳು ಮಾಡಿಕೊಂಡಿದ್ದಾರೆ. ಪಿಚ್ ನೋಡಿದರೆ, ಚೆನ್ನಾಗಿ ಆಡಬಹುದು ಎಂದು ಹೇಳಬಹುದಿತ್ತು ಎಂದು ಹೇಳಿದ್ದಾರೆ.
Asia Cup 2023 'ಟೀಂ ಇಂಡಿಯಾ ಮ್ಯಾಚ್ ಫಿಕ್ಸ್ ಮಾಡಿದೆ' ಎಂದ ಪಾಕ್ ಫ್ಯಾನ್ಸ್; ಅಖ್ತರ್ ಕೊಟ್ರು ಅಲ್ಟಿಮೇಟ್ ರಿಪ್ಲೇ..!
ಇನ್ನು ಭಾರತದ ಬೌಲಿಂಗ್ ವಿಭಾಗವನ್ನು ಶ್ಲಾಘನೆ ಮಾಡಿದ ಅಖ್ತರ್ ಅದರಲ್ಲೂ ಸ್ಪಿನ್ನರ್‌ಗಳನ್ನು ಹಾಗೂ ಬೌಲರ್‌ಗಳನ್ನು ಸರಿಯಾಗಿ ಬಳಸಿಕೊಂಡ ರೋಹಿತ್ ಶರ್ಮ ನಾಯಕತ್ವವನ್ನು ಮೆಚ್ಚಿದರು. ಭಾರತ ಅದ್ಭುತವಾಗಿ ದಾಳಿ ಮಾಡಿತು. ವೆಲ್ ಡನ್. ಅದ್ಭುತವಾಗಿ ತಂಡ ಕಮ್‌ಬ್ಯಾಕ್ ಮಾಡಿತು. ರೋಹಿತ್ ಶರ್ಮ ಅದ್ಭುತವಾಗಿ ನಾಯಕತ್ವ ನಿಭಾಯಿಸಿದರು. ಪ್ರಮುಖ ಸಮಯದಲ್ಲಿ ಅವರು ಬೌಲರ್‌ಗಳನ್ನು ತಂದ ರೀತಿ ಅದ್ಭುತವಾಗಿತ್ತು. ಬೌಲಿಂಗ್ ಚೇಂಜ್‌ಗಳು ಬಹಳ ಮೆಚ್ಚುವಂಥದ್ದಾಗಿತ್ತು. ಇದರಿಂದಾಗಿ ಟೀಮ್ ಇಂಡಿಯಾ ಯಶಸ್ವಿಯಾಗಿ ಕಮ್‌ಬ್ಯಾಕ್ ಮಾಡಿತು. ಈಗ ಏನಿಲ್ಲ, ಒಳ್ಳೆಯದಾಗಲಿ ಅಂತಾ ಹಾರೈಸೋದಷ್ಟೇ ಎಂದು ಅಖ್ತರ್ ಹೇಳಿದ್ದಾರೆ.
"ನಾನು ನಿನ್ನನ್ನು ಕೊಲ್ಲುತ್ತೇನೆ": ಶೋಯೆಬ್ ಅಖ್ತರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?