Asianet Suvarna News Asianet Suvarna News

World Cup 2023 "ನಾನು ಇಂಥ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ": ಮಾಧ್ಯಮದವರ ವಿರುದ್ದ ರೋಹಿತ್ ಶರ್ಮಾ ಕೆಂಡಾಮಂಡಲ..!

ಏಕದಿನ ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ಭಾರತ ತಂಡ ಪ್ರಕಟ
ಭಾರತ ತಂಡ ಪ್ರಕಟವಾದ ಬೆನ್ನಲ್ಲೇ ಮಾಧ್ಯಮದವರ ಜತೆ ಮಾತನಾಡಿದ ರೋಹಿತ್ ಶರ್ಮಾ
ಮಾಧ್ಯಮದವರ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಟೀಂ ಇಂಡಿಯಾ ನಾಯಕ

World Cup 2023 Rohit Sharma loses his cool with journalist during press conference kvn
Author
First Published Sep 5, 2023, 5:30 PM IST

ಕೊಲಂಬೊ(ಸೆ.05): ಬಹುನಿರೀಕ್ಷಿತ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಕೊನೆಗೂ 15 ಆಟಗಾರರನ್ನೊಳಗೊಂಡ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟವಾದ ಬಳಿಕ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹಾಗೂ ರೋಹಿತ್ ಶರ್ಮಾ, ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು, ವಿಶ್ವಕಪ್ ತಂಡದ ಆಯ್ಕೆಯ ಕುರಿತಂತೆ ಮನಬಿಚ್ಚಿ ಮಾತನಾಡಿದರು. ಇದೇ ವೇಳೆ ಒಂದು ಹಂತದಲ್ಲಿ ಮಾಧ್ಯಮದವರ ಪ್ರಶ್ನೆಗೆ ಸಿಟ್ಟಿಗೆದ್ದ ಹಿಟ್‌ಮ್ಯಾನ್, ತಾವು ಇಂತಹ ಪ್ರಶ್ನೆಗಳನ್ನು ಪುರಸ್ಕರಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.

ತಂಡದ ಆಯ್ಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ, "ನಾನು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದೇನೆ. ನಮ್ಮ ತಂಡದ ಬಗ್ಗೆ ಹೊರಗೇನು ಮಾತನಾಡುತ್ತಾರೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ತಂಡದಲ್ಲಿರುವ ಎಲ್ಲಾ ಆಟಗಾರರು ವೃತ್ತಿಪರತೆಯನ್ನು ಹೊಂದಿದ್ದಾರೆ. ಹೀಗಾಗಿ ಇಂತಹ ಪ್ರಶ್ನೆಗಳನ್ನು ನನ್ನ ಬಳಿ ಕೇಳಬೇಡಿ. ನಾನು ಕೂಡಾ ಇಂತಹ ಪ್ರಶ್ನೆಗಳನ್ನು ಕೇಳುವುದಿಲ್ಲ. ಈ ರೀತಿ ಮಾತನಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಮ್ಮ ಗಮನ ಬೇರೆಯದ್ದೇ ಆಗಿದೆ. ಹೊರಗಿನ ಕೆಲ ವಿಚಾರಗಳ ಬಗ್ಗೆ ನಾವು ಹೆಚ್ಚು ಆಲೋಚಿಸುವುದಿಲ್ಲ" ಎಂದು ರೋಹಿತ್ ಶರ್ಮಾ ಅಸಮಾಧಾನ ಹೊರಹಾಕಿದ್ದಾರೆ. 

Breaking News: ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ

ಭಾರತ ಕ್ರಿಕೆಟ್ ತಂಡವು ಸದ್ಯ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, 17 ಆಟಗಾರರ ಭಾರತ ತಂಡ ದ್ವೀಪರಾಷ್ಟ್ರದಲ್ಲಿ ಬೀಡುಬಿಟ್ಟಿದೆ. ಈ ಪೈಕಿ ಪ್ರಸಿದ್ಧ್ ಕೃಷ್ಣ ಹಾಗೂ ತಿಲಕ್ ವರ್ಮಾ ಅವರನ್ನು ಕೈಬಿಟ್ಟು ಉಳಿದ 15 ಆಟಗಾರರನ್ನು ವಿಶ್ವಕಪ್ ಟೂರ್ನಿಗೆ ಆಯ್ಕೆ ಮಾಡಿಕೊಂಡಿದೆ.

"ನೀವು ಕೇವಲ 15 ಜನರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕಾಗಿರುವುದರಿಂದ ಇಲ್ಲಿ ಹೆಚ್ಚಿನ ಅಚ್ಚರಿಗಳಿಲ್ಲ. ಈ ಪೈಕಿ ಆಯ್ಕೆಯಾಗದ ಕೆಲವರಿಗೆ ತುಂಬಾ ನಿರಾಸೆಯಾಗಿರಬಹುದು. ನಾನು ಆ ಸ್ಥಿತಿಯನ್ನು ಅನುಭವಿಸಿದ್ದೇನೆ. ಆ ಪರಿಸ್ಥಿತಿ ಹೇಗಿರುತ್ತದೆ ಎಂದು ನನಗೂ ಗೊತ್ತಿದೆ. ನಮ್ಮಲ್ಲಿ ಸಾಕಷ್ಟು ಒಳ್ಳೆಯ ಆಲ್ರೌಂಡ್ ಆಯ್ಕೆಗಳಿವೆ. ನಾವು ನಾವು ಆಯ್ಕೆ ಮಾಡಿಕೊಂಡ ಅತ್ಯುತ್ತಮ 15ರ ಬಳಗವಾಗಿದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

World Cup 2023: ಇವರೇ ನೋಡಿ ಏಕದಿನ ವಿಶ್ವಕಪ್ ಗೆಲ್ಲಲು ಹೊರಟಿರುವ ಭಾರತದ ಹುಲಿಗಳ ಪಡೆ..!

"ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ತಂಡದ ಪ್ಲಾನ್‌ ಕುರಿತಂತೆ ಈಗಲೇ ಆಲೋಚನೆ ಮಾಡಿಲ್ಲ. ನಮ್ಮ ಮುಂದೆ ಸಾಕಷ್ಟು ಒಳ್ಳೆಯ ಸಮಸ್ಯೆಗಳಿವೆ. ನಾವು ಎದುರಾಳಿ ಯಾರು ಹಾಗೂ ಫಾರ್ಮ್‌ನಲ್ಲಿರುವವರು ಯಾರು ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನಾವು ಯಾವುದು ಒಳ್ಳೆಯ ಕಾಂಬಿನೇಷನ್ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿಯಲಿದ್ದೇವೆ. ಕೆಲವೊಮ್ಮೆ ತಂಡವನ್ನು ಆಯ್ಕೆ ಮಾಡುವಾಗ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

"ನಾವು ಬ್ಯಾಟಿಂಗ್‌ನಲ್ಲಿ ಕೆಳಕ್ರಮಾಂಕದಲ್ಲೂ ಸುಧಾರಿತ ಪ್ರದರ್ಶನ ನೀಡಬೇಕಿದೆ. 8-9ನೇ ಕ್ರಮಾಂಕದವರೆಗೂ ನಾವು ಬ್ಯಾಟಿಂಗ್ ಮಾಡುವ ಸಾಮರ್ಥ್ಯವಿರುವ ತಂಡವಾಗಬೇಕು. ಬೌಲರ್‌ಗಳು ಕೇವಲ ಬೌಲಿಂಗ್ ಮಾಡಿದರಷ್ಟೇ ಸಾಲದು. ಕೆಳ ಕ್ರಮಾಂಕದಲ್ಲಿ ಗಳಿಸುವ 10-15 ರನ್ ಪಂದ್ಯದ ಸೋಲು-ಗೆಲುವನ್ನು ನಿರ್ಧರಿಸಲಿದೆ" ಎಂದು ರೋಹಿತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್‌ ಶರ್ಮಾ(ನಾಯಕ), ಹಾರ್ದಿಕ್‌ ಪಾಂಡ್ಯ(ಉಪನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್‌ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ಅಕ್ಷರ್‌ ಪಟೇಲ್, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್.

Follow Us:
Download App:
  • android
  • ios