ಕೊಲಂಬೊ(ಜು.01): 2011ರ ಐಸಿಸಿ ಏಕ​ದಿನ ವಿಶ್ವ​ಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆ​ದಿದೆ ಎನ್ನುವ ಆರೋಪವನ್ನು ಗಂಭೀರವಾಗಿ ಪರಿ​ಗ​ಣಿ​ಸಿ​ರುವ ಶ್ರೀಲಂಕಾ ಸರ್ಕಾರ ತನಿಖೆಗೆ ಆದೇ​ಶಿ​ಸಿದ್ದು, ವಿಶೇಷ ಪೊಲೀಸ್‌ ತಂಡ ತನಿಖೆ ಆರಂಭಿ​ಸಿದೆ. 

ಮಾಜಿ ಕ್ರೀಡಾ ಸಚಿವ ಮಹೀಂದ್ರಾನಂದ ಅಲುತ್ಗಾಮಗೆ ಇತ್ತೀ​ಚೆಗೆ ಫಿಕ್ಸಿಂಗ್‌ ಆರೋ​ಪ ಮಾಡಿ​ದ್ದ​ರು. ಈ ಹಿಂದೆ 1996ರ ವಿಶ್ವ​ಕಪ್‌ ವಿಜೇತ ನಾಯಕ ಅರ್ಜುಜ ರಣ​ತುಂಗ ಸಹ ಫಿಕ್ಸಿಂಗ್‌ ನಡೆ​ದಿ​ರುವ ಶಂಕೆ ವ್ಯಕ್ತ​ಪ​ಡಿ​ಸಿ​ದ್ದರು. 2011ರ ವಿಶ್ವ​ಕಪ್‌ ತಂಡ​ವನ್ನು ಆಯ್ಕೆ ಮಾಡಿದ್ದ ಮಾಜಿ ಆಟ​ಗಾರ ಅರ​ವಿಂದ ಡಿ ಸಿಲ್ವಾರನ್ನೂ ಪೊಲೀ​ಸರು ವಿಚಾ​ರಣೆಗೆ ಕರೆ​ದಿ​ದ್ದಾರೆ ಎಂದು ತಿಳಿ​ದು​ಬಂದಿದೆ.

ಇನ್ನು ವಿಶೇಷ ತನಿಖಾ ತಂಡ ಲಂಕಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಉಪುಲ್ ತರಂಗಾ ಅವರನ್ನು ತನಿಖೆಗೆ ಕರೆಯುವ ಸಾಧ್ಯತೆಯಿದೆ. 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತರಂಗಾ 30 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು, 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಸಚಿನ್ ತೆಂಡುಲ್ಕರ್‌ಗೆ ಸ್ಮರಣೀಯ ಗೌರವವನ್ನು ಟೀಂ ಇಂಡಿಯಾ ಅರ್ಪಿಸಿತ್ತು.

ಕೊರೋನಾ ಟೆಸ್ಟ್‌ ಪಾಸಾದ ಇಂಗ್ಲೆಂಡ್‌,ಪಾಕ್‌ ಕ್ರಿಕೆ​ಟಿ​ಗ​ರು

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಮಹೆಲಾ ಜಯವರ್ಧನೆ ಆಕರ್ಷಕ ಶತಕದ ನೆರವಿನಿಂದ ನಿಗಧಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಬಾರಿಸಿತ್ತು. ಬಳಿಕ ಆರಂಭದಲ್ಲೇ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸುವ ಮೂಲಕ ಲಂಕಾ ಮೇಲುಗೈ ಸಾಧಿಸಿತ್ತು. ಆ ಬಳಿಕ ನಾಟಕೀಯವಾಗಿ ಲಂಕಾ ಹಿನ್ನೆಡೆ ಅನುಭವಿಸಿತ್ತು. ಧೋನಿ-ಗಂಭೀರ್ ಆಕರ್ಷಕ ಶತಕದ ಜತೆಯಾಟದ ನೆರವಿನಿಂದ ಭಾರತ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತ್ತು.