* ಕುತೂಹಲಘಟ್ಟದತ್ತ ಭಾರತ-ಇಂಗ್ಲೆಂಡ್ ಏಕೈಕ ಮಹಿಳಾ ಟೆಸ್ಟ್ ಪಂದ್ಯ* ಕೊನೆಯ ದಿನದಾಟದ ಚಹಾ ವಿರಾಮದ ವೇಳೆಗೆ ಭಾರತ 78 ರನ್‌ಗಳ ಮುನ್ನಡೆ* ಸ್ನೆಹ್ ರಾಣಾ 28 ರನ್‌ ಬಾರಿಸಿ ಅಜೇಯ ಬ್ಯಾಟಿಂಗ್ 

ಬ್ರಿಸ್ಟಲ್‌(ಜೂ.19): ಆಲ್ರೌಂಡರ್ ಸ್ನೆಹ್ ರಾಣಾ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್‌ನಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ದಿಟ್ಟ ಪ್ರತಿರೋಧ ತೋರುತ್ತಿದ್ದು, ಕೊನೆಯ ದಿನದಾಟದ ಚಹಾ ವಿರಾಮದ ವೇಳೆಗೆ 8 ವಿಕೆಟ್ ಕಳೆದುಕೊಂಡು 243 ರನ್‌ ಬಾರಿಸಿದ್ದು ಒಟ್ಟಾರೆ 78 ರನ್‌ಗಳ ಮುನ್ನಡೆ ಸಾಧಿಸಿದೆ.

ಹೌದು, ಒಂದು ಹಂತದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು 199 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿತ್ತು. ಈ ವೇಳೆ 8ನೇ ವಿಕೆಟ್‌ಗೆ ಜತೆಯಾದ ಶಿಖಾ ಪಾಂಡೆ ಹಾಗೂ ಸ್ನೆಹ್ ರಾಣಾ ಜೋಡಿ 41 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಶಿಖಾ ಪಾಂಡೆ 50 ಎಸೆತಗಳನ್ನು ಎದುರಿಸಿ 18 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ಸ್ನೆಹ್ ರಾಣಾ 61 ಎಸೆತಗಳನ್ನು ಎದುರಿಸಿ 27 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ದೀಪ್ತಿ ಶರ್ಮಾ ಚೊಚ್ಚಲ ಅರ್ಧಶತಕ; ಭಾರತಕ್ಕೆ ಕೊಂಚ ಮುನ್ನಡೆ

Scroll to load tweet…

ಕೈಕೊಟ್ಟ ಮಿಥಾಲಿ-ಹರ್ಮನ್‌ಪ್ರೀತ್: ಒಂದು ಹಂತದಲ್ಲಿ 170 ರನ್‌ಗಳ ವರೆಗೆ ಕೇವಲ 2 ವಿಕೆಟ್ ಕಳೆದುಕೊಂಡಿದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೇವಲ 4 ರನ್‌ಗಳ ಅಂತರದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ 3 ವಿಕೆಟ್ ಕಳೆದುಕೊಂಡಿತು. ನಾಯಕಿ ಮಿಥಾಲಿ ರಾಜ್ 4 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ಹರ್ಮನ್‌ಪ್ರೀತ್ ಕೌರ್ 8 ರನ್‌ ಬಾರಿಸಿ ಪೆವಿಲಿಯನ್ ಸೇರಿದರು. 

ಕೊನೆಯ ದಿನದಾಟದಲ್ಲಿ ಇನ್ನೂ 40 ಓವರ್‌ ಬಾಕಿ ಇದ್ದು, ಸ್ನೆಹ್ ರಾಣಾ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಸೋಲಿನಿಂದ ಪಾರು ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.