* ಮೂರನೇ ಬಾರಿಗೆ ಮಹಿಳಾ ಮಿನಿ ಐಪಿಎಲ್ ಟ್ರೋಫಿ ಜಯಿಸಿದ ಸೂಪರ್‌ನೋವಾಸ್* ಮಹಿಳಾ ಟಿ20 ಚಾಲೆಂಜ್ ಫೈನಲ್‌ನಲ್ಲಿ ವೆಲಾಸಿಟಿ ಎದುರು ಸೂಪರ್‌ನೋವಾಸ್ ಜಯಭೇರಿ* ವೆಲಾಸಿಟಿ ತಂಡವನ್ನು ಕೇವಲ 4 ರನ್‌ಗಳ ಅಂತರದಲ್ಲಿ ಮಣಿಸಿದ ಹರ್ಮನ್‌ಪ್ರೀತ್ ಕೌರ್ ಪಡೆ

ಪುಣೆ(ಮೇ.29): 4ನೇ ಆವೃತ್ತಿಯ ಮಹಿಳಾ ಟಿ20 ಚಾಲೆಂಜ್‌(ಮಹಿಳಾ ಮಿನಿ ಐಪಿಎಲ್) (Women's T20 Challenge) ಟೂರ್ನಿಯಲ್ಲಿ ವೆಲಾಸಿಟಿ ತಂಡವನ್ನು (Velocity) ಮಣಿಸಿದ ಸೂಪರ್‌ನೋವಾಸ್ (Supernovas) ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮೊದಲೆರಡು ಆವೃತ್ತಿಯ ಮಿನಿ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಸೂಪರ್‌ನೋವಾಸ್ ತಂಡವು ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ವೆಲಾಸಿಟಿ ತಂಡವನ್ನು ಕೇವಲ 4 ರನ್‌ಗಳ ಅಂತರದಲ್ಲಿ ಮಣಿಸಿ, ಮೂರನೇ ಬಾರಿಗೆ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಚೊಚ್ಚಲ ಚಾಂಪಿಯನ್ ಆಗುವ ದೀಪ್ತಿ ಶರ್ಮಾ (Deepti Sharma) ಅವರ ನೇತೃತ್ವದ ವೆಲಾಸಿಟಿ ತಂಡದ ಕನಸು ಭಗ್ನವಾಗಿದೆ.

ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸೂಪರ್‌ನೋವಾಸ್ ಭರ್ಜರಿ ಆರಂಭದ ಹೊರತಾಗಿಯೂ 7 ವಿಕೆಟ್ ಕಳೆದುಕೊಂಡು 165 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನು ಸವಾಲಿನ ಗುರಿ ಬೆನ್ನತ್ತಿದ ವೆಲಾಸಿಟಿ ತಂಡವು 8 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿ ಕೇವಲ 4 ರನ್ ಅಂತರದಲ್ಲಿ ರೋಚಕ ಸೋಲು ಅನುಭವಿಸಿತು. ಶಫಾಲಿ ವರ್ಮಾ(15) ಹಾಗೂ ಯಾಶ್ತಿಕಾ ಭಾಟಿಯಾ(13) ಅಬ್ಬರಿಸಿದರೂ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಬಳಿಕ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ತಂಡಕ್ಕೆ ಲಾರಾ ವೊಲ್ವಾರ್ಟ್‌ ಆಸರೆಯಾದರು. ಕೊನೆಯ 3 ಓವರ್‌ಗಳಲ್ಲಿ ಗೆಲ್ಲಲು 48 ರನ್‌ಗಳಿಸಬೇಕಿತ್ತು. ವೊಲ್ವಾರ್ಟ್‌ಗೆ ಜತೆಯಾದ ಸಿಮ್ರನ್ ಬಹುದ್ದೂರ್ 18ನೇ ಓವರ್‌ನಲ್ಲಿ 14, 19ನೇ ಓವರ್‌ನಲ್ಲಿ 17 ರನ್ ಚಚ್ಚುವ ಮೂಲಕ ವೆಲಾಸಿಟಿ ತಂಡದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಇನ್ನು ಕೊನೆಯ ಓವರ್‌ನಲ್ಲಿ ವೆಲಾಸಿಟಿ ತಂಡಕ್ಕೆ ಗೆಲ್ಲಲು 17 ರನ್‌ಗಳ ಅಗತ್ಯವಿತ್ತು. ವೊಲ್ವಾರ್ಟ್ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು 6 ರನ್‌ಗಳ ಅಗತ್ಯವಿದ್ದಾಗ ಸಿಕ್ಸರ್ ಬಾರಿಸುವ ಸಿಮ್ರನ್ ಪ್ರಯತ್ನ ಯಶಸ್ವಿಯಾಗಲಿಲ್ಲ. ವೊಲ್ವಾರ್ಟ್‌ ಔಟಾಗದೇ 65 ರನ್ ಸಿಡಿಸಿದರೆ, ಸಿಮ್ರನ್ ಅಜೇಯ 20 ರನ್‌ ಗಳಿಸಿದರು.

Womens T20 Challenge: ಇಂದು ಸೂಪರ್‌ನೋವಾಸ್‌ vs ವೆಲಾಸಿಟಿ ಟಿ20 ಫೈನಲ್‌

Scroll to load tweet…

ಡಾಟಿನ್ ಅಬ್ಬರ: ಸೂಪರ್‌ನೋವಾಸ್ ಆರಂಭದಲ್ಲೇ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿತು. ದಿಯಾಂಡ್ರಾ ಡಾಟಿನ್ 44 ಎಸೆತಗಳಲ್ಲಿ 62 ರನ್ ಸಿಡಿಸಿದರೆ, ಹರ್ಮನ್‌ಪ್ರೀತ್ ಕೌರ್ 43 ರನ್ ಗಳಿಸಿದರು. ಮೊದಲ 13 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 108 ರನ್ ಗಳಿಸಿದ್ದ ಸೂಪರ್‌ನೋವಾಸ್, ಕೊನೆಯ 7 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 57 ರನ್ ಗಳಿಸಿತು. ವೆಲಾಸಿಟಿ ತಂಡದ ಪರ ದೀಪ್ತಿ, ಕೇಟ್ ಸಿಮ್ರನ್ ತಲಾ 2 ವಿಕೆಟ್ ಕಬಳಿಸಿದರು.