ದೇಶದಲ್ಲಿ ಐಪಿಎಲ್‌ ಬಂದ ಬಳಿಕ ದೇಶೀಯ ಕ್ರಿಕೆಟಿಗರ ಅದೃಷ್ಟವೇ ಬದಲಾಗಿ ಹೋಯಿತು. ಅಲ್ಲಿಯವರೆಗೂ ರಾಷ್ಟ್ರೀಯ ತಂಡದ ಕನಸು ಕಾಣುತ್ತಿದ್ದವರು. ಐಪಿಎಲ್‌ ಬಂದ ಬಳಿಕ ಕನಿಷ್ಠ ಐಪಿಎಲ್‌ ಟೀಮ್‌ ಒಪ್ಪಂದ ಸಿಕ್ಕರೆ ಸಾಕು ಎನ್ನುವ ಮಟ್ಟಕ್ಕೆ ಬಂದು ಬಿಟ್ಟಿತ್ತು. ಮಹಿಳಾ ಐಪಿಎಲ್‌ ಆರಂಭವಾಗುವುದರೊಂದಿಗೆ ಮಹಿಳಾ ಕ್ರಿಕೆಟ್‌ನಲ್ಲಿ ಸಣ್ಣಪುಟ್ಟ ನಗರದ ಪ್ರತಿಭೆಗಳು ಕಾಣುವಂತಾಗಿದೆ.  

ನವದೆಹಲಿ (ಫೆ.15): ಅಂದಾಜು ಒಂದು ದಶಕದ ಹಿಂದೆ ಕೇರಳ ವಯನಾಡ್‌ ಜಿಲ್ಲೆಯ ಮನಂತವಾಡಿಯ ಬುಡಕಟ್ಟು ಸಮುದಾಯದ ಹುಡುಗಿಯೊಬ್ಬಳು ಬಹಳ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದ್ದಳು. ತನ್ನ ಹೃದಯಕ್ಕೆ ಹತ್ತಿರವಾದ ಆಟದಿಂದ ಬದುಕುವ ನಿರ್ಧಾರ ಮಾಡಿದ್ದರು. ಆದರೆ, ಅವರು ಇಷ್ಟಪಟ್ಟ ಕ್ರೀಡೆಯಲ್ಲಿ ಮಹಿಳೆಯರಿಗೆ ಅಷ್ಟಾಗಿ ಅವಕಾಶವಿರಲಿಲ್ಲ. ಆದರೆ, ಆಕೆ ನಿರ್ಧಾರ ಮಾಡಿದ್ದಳು. ಈ ಹುಡುಗಿಯ ಹೆಸರು ಮಿನ್ನಿ ಮಣಿ. ಆಕೆ ಆಯ್ದುಕೊಂಡಿದ್ದ ಕ್ರೀಡೆ ಕ್ರಿಕೆಟ್‌. ಮಂಗಳವಾರ 23 ವರ್ಷದ ಮಿನ್ನು ಮಣಿ ಮುಂಬೈನಲ್ಲಿ ನಡೆದ ಮಹಿಳಾ ಪ್ರೀಮಿಯರ್‌ ಲೂಗ್‌ ಉದ್ಘಾಟನಾ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬರೋಬ್ಬರಿ 30 ಲಕ್ಷ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದ್ದರು. ಲೀಗ್‌ನ ಹರಾಜು ಪಟ್ಟಿಯಲ್ಲಿ 10 ಲಕ್ಷದ ಮೂಲಬೆಲೆಯೊಂದಿಗೆ ಇದ್ದಿದ್ದೇ ತನ್ನ ಸಾಧನೆ ಎಂದು ಹೇಳಿಕೊಂಡಿದ್ದ ಮಿನ್ನು ಈವರೆಗೂ ತಾವು ನಿರೀಕ್ಷೆಯೇ ಮಾಡದ 30 ಲಕ್ಷ ರೂಪಾಯಿ ಮೊತ್ತಕ್ಕೆ ಈಗ ಒಡತಿಯಾಗಿದ್ದಾರೆ.

'ಇಲ್ಲ ನನ್ನ ಜೀವನದಲ್ಲಿ ಹಿಂದೆಂದೂ 30 ಲಕ್ಷ ರೂಪಾಯಿ ಬಗ್ಗೆ ಕೇಳಿಲ್ಲ. ನೋಡಿಯೂ ಇಲ್ಲ. ನನ್ನ ಭಾವನೆಗಳನ್ನು ಈ ಕ್ಷಣದಲ್ಲಿ ವಿವರಿಸಲು ಸಾಧ್ಯವಿಲ್ಲ' ಎಂದು ಹೈದರಾಬಾದ್‌ನಲ್ಲಿದ್ದ ಮಿನ್ನು ಮಣಿ ಮಾತನಾಡಿದರು. ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಅಂತರ ವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಮಿನ್ನು ಮಣಿ ದಕ್ಷಿಣ ವಲಯ ತಂಡದ ಭಾಗವಾಗಿದ್ದಾರೆ. ಹಾಗಂತ ಮಿನ್ನು ಮಣಿ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಮಿನ್ನು ಮಣಿ ಕುಟುಂಬ ವಯ್ನಾಡ್‌ನ ಚೋಯಿಮೂಲಾದ ಕುರಿಚಿಯಾ ಬುಡಕಟ್ಟು ಸಮುದಾಯದವರು. ಅವರ ತಂದೆ ಸಿಕೆ ಮಣಿ ದಿನಗೂಲಿ ಕೆಲಸಗಾರರಾಗಿದ್ದರೆ, ತಾಯಿಗೆ ಮನೆ ಬಿಟ್ಟು ಬೇರೇನೂ ಗೊತ್ತಿಲ್ಲ. 10 ವರ್ಷವಾಗಿದ್ದಾಗ ಮಿನ್ನು ಮಣಿ ಮನೆಯ ಸಮೀಪದ ಗದ್ದೆಗಳಲ್ಲಿ ತನ್ನ ಸೋದರರು ಹಾಗೂ ಸಂಬಂಧಿಗಳೊಂದಿಗೆ ಕ್ರಿಕೆಟ್‌ ಆಡುತ್ತಿದ್ದರು. ಆದರೆ, ಆಗ ಹುಡುಗರೊಂದಿಗೆ ಕ್ರಿಕೆಟ್‌ ಆಡುವುದು ಬರೀ ಕ್ರೇಜ್‌ ಆಗಿತ್ತು. ಆದರೆ, ಯಾವಾಗ ಇಡಪ್ಪಾಡಿಯ ಸರ್ಕಾರಿ ಹೈ ಸ್ಕೂಲ್‌ ಸೇರಿದರೂ ಅಲ್ಲಿಂದ ಕ್ರಿಕೆಟ್‌ಅನ್ನು ಗಂಭೀರವಾಗಿ ಪರಿಗಣಿಸಿದ್ದರು. 8ನೇ ತರಗತಿಯಲ್ಲಿರುವಾಗ ಶಾಲೆಯ ದೈಹಿಕ ಶಿಕ್ಷಕಿ ಎಲ್ಸಮ್ಮ ಬೇಬಿ ಅವರ ಕಣ್ಣಿಗೆ ಬಿದ್ದಿದ್ದು ಮಿನ್ನು ಮಣಿ ಅದೃಷ್ಟವನ್ನೇ ಬದಲಿಸಿತು.

ಮಿನ್ನು ಮಣಿ ಅವರ ಪ್ರತಿಭೆಯನ್ನು ನೋಡಿದ ಎಲ್ಸಮ್ಮ ಬೇಬಿ, ವಯ್ನಾಡ್‌ ಜಿಲ್ಲೆ 13 ವಯೋಮಿತಿ ತಂಡದ ಆಯ್ಕೆ ಟ್ರಯಲ್ಸ್‌ಗೆ ಕರೆದುಕೊಂಡು ಹೋಗಿದ್ದರು. ಆದರೆ, ಮಿನ್ನು ಮಣಿಯ ಪೋಷಕರು ಮಾತ್ರ ಇದಕ್ಕೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದರು. 'ನನ್ನ ತಂದೆಗೆ ದಿನನಿತ್ಯದ ಕೆಲಸ ಇದ್ದಿರಲಿಲ್ಲ. ಮೊದಲಿಗೆ ಅವರು ಕ್ರಿಕೆಟ್‌ ಆಡೋದಕ್ಕೆ ತಡೆದಿದ್ದರು. ಕ್ರಿಕೆಟ್‌ ಹುಡುಗರ ಆಟ. ನೀನ್‌ ಆಡೋದು ಬೇಡ ಎನ್ನುತ್ತಿದ್ದರು. ತಂದೆಗೆ ಪರಿ ಪರಿಯಾಗಿ ಬೇಡಿಕೊಂಡ ಬಳಿಕವೇ ಅವರು ನನಗೆ ಟ್ರಯಲ್ಸ್‌ಗೆ ಹೋಗಲು ಅನುಮತಿ ನೀಡಿದ್ದರು. ಆದರೆ, ನಾನು ಟ್ರಯಲ್ಸ್‌ನಲ್ಲಿ ಆಯ್ಕೆಯಾದ ಬಳಿಕ ಹಾಗೂ ಕೆಸಿಎ ಅಕಾಡೆಮಿಯಲ್ಲಿ ಜೂನಿಯರ್‌ ಬಾಲಕಿಯರ ಶಿಬಿರಕ್ಕೆ ಆಯ್ಕೆಯಾದ ಬಳಿಕ ಅವರು ನನಗೆ ಸಂಪೂರ್ಣವಾಗಿ ಬೆಂಬಲಿಸಲು ಆರಂಭಿಸಿದ್ದರು' ಎನ್ನುವ ಮೂಲಕ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. 15 ವರ್ಷವಾಗಿದ್ದಾಗ ಕೇರಳ 16 ವಯೋಮಿತಿ ತಂಡದಲ್ಲಿ ಛಾಪು ಮೂಡಿಸಿದ್ದ ಮಿನ್ನು ಮಣಿ ಒಂದೇ ವರ್ಷದಲ್ಲಿ ಕೇರಳ ರಾಜ್ಯದ ಸೀನಿಯರ್‌ ಟೀಮ್‌ಗೆ ಆಯ್ಕೆಯಾಗಿದ್ದರು.

WPL 2023: ಆರ್‌ಸಿಬಿ ತಂಡಕ್ಕೆ ಬೆನ್ ಸಾಯರ್ ಮುಖ್ಯ ಕೋಚ್‌!

ತಮ್ಮ ಕ್ರಿಕೆಟ್‌ ಜೀವನದಲ್ಲಿ ಯಶಸ್ಸು ಸಾಧಿಸಲು ಮಿನ್ನು ಮಣಿ ಸಾಕಷ್ಟು ಅಡೆತಡೆಗಳನ್ನು ದಾಟಿ ಬಂದಿದ್ದಾರೆ. ಮಿನ್ನು ಮನೆಗೆ ತೀರಾ ಸಮೀಪದಲ್ಲಿದ್ದ ತರಬೇತಿ ಸ್ಟೇಡಿಯಂ ಎಂದರೆ ಅದು ಕೃಷ್ಣಗಿರಿಯಲ್ಲಿದ್ದ ಕೆಸಿಎ ಸ್ಟೇಡಿಯಂ. ಇದು ಒಂದೂವರೆ ಗಂಟೆ ಪ್ರಯಾಣದ ದೂರದಲ್ಲಿತ್ತು. 'ನನ್ನ ದಿನ ಬೆಳಗ್ಗೆ 4 ಗಂಟೆಗೆ ಆರಂಭವಾಗುತ್ತಿತ್ತು. ನನಗೆ ಆಹಾರ ತಯಾರಿಸಲು ತಾಯಿಗೆ ಸಹಾಯ ಮಾಡುತ್ತಿದ್ದೆ. ಬಳಿಕ ನನ್ನ ಮನೆಯಿಂದ ಒಂದೂವರೆಗೆ ಗಂಟೆ ಪ್ರಯಾಣದ ದೂರದಲ್ಲಿದ್ದ ಕೃಷ್ಣಗಿರಿಗೆ ತೆರಳುತ್ತಿದ್ದೆ. ನನ್ನ ಮನೆಯಿಂದ ಕೃಷ್ಣಗಿರಿಗೆ ಬಸ್‌ ಇದ್ದಿರಲಿಲ್ಲ. ನಾಲ್ಕು ಬಸ್‌ಗಳನ್ನು ಚೇಂಜ್‌ ಮಾಡಿಕೊಂಡು 9 ಗಂಟೆಯ ವೇಳೆಗೆ ಕೃಷ್ಣಗಿರಿಗೆ ಹೋಗುತ್ತಿದ್ದೆ. ತರಬೇತಿ ಮುಗಿಸಿ ಸಂಜೆ 7 ಗಂಟೆಗೆ ಮನೆಗೆ ವಾಪಾಸಾಗುವಾಗ ಸುಸ್ತಾಗಿ ಹೋಗುತ್ತಿತ್ತು' ಎಂದಿದ್ದಾರೆ.
ಆದರೆ, ಮಿನ್ನು ಟ್ರಯಲ್ಸ್‌ ಅಲ್ಲಿಗೆ ಕೊನೆಯಾಗಲಿಲ್ಲ. ಆರಂಭದ ದಿನಗಳಲ್ಲಿ ಅಕಾಡೆಮಿಯ ಶುಲ್ಕ ಕಟ್ಟಲು ತಂದೆ ಬೇರೆಯವರ ಬಳಿ ಹಣ ಸಾಲ ಕೇಳುತ್ತಿದ್ದರು. ನನಗೆ ಹಣ ಬರಲು ಆರಂಭಿಸಿದ ಬಳಿಕ ನಾನು ಈ ಸಾಲವನ್ನೆಲ್ಲಾ ತೀರಿಸಿದೆ. ಬಳಿಕ ಮನೆ ಕೂಡ ಕಟ್ಟಿದೆ. ಆದರೆ, ಈ ವೇಳೆ ಬಂದ ಪ್ರವಾಹ ನಮ್ಮ ಬಹುಪಾಲು ಮನೆಯನ್ನು ಹಾಳು ಮಾಡಿತ್ತು. ಆದರೆ, ಕ್ರಿಕೆಟ್‌ನ ಸಹಾಯದಿಂದ ಮತ್ತೆ ನಾನು ಮನೆಯನ್ನು ಪುನಃ ಕಟ್ಟಲು ಸಾಧ್ಯವಾಯಿತು ಎನ್ನುತ್ತಾರೆ' ಮಿನ್ನು.

Sania Mirza: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್‌!

ಕೇರಳ ತಂಡದ ಪ್ರಮುಖ ಭಾಗವಾಗಿರುವ ಮಿನ್ನು, ಚಾಲೆಂಜರ್‌ ಟ್ರೋಫಿಯಲ್ಲಿ ಇಂಡಿಯಾ ಎ ಹಾಗೂ ಭಾರತ ಎ ತಂಡದ ಪರವಾಗಿ ಆಡಿದ್ದಾರೆ. ಬಲಗೈ ಸ್ಪಿನ್ನರ್‌ ಹಾಗೂ ಎಡಗೈ ಬ್ಯಾಟ್ಸ್‌ಮನ್‌ ಆಗಿರುವ ಮಿನ್ನು ಇತ್ತೀಚೆಗೆ ನಡೆದ ಮಹಿಳೆಯರ ಅಖಿಲ ಭಾರತೀಯ ಏಕದಿನ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸಿದ ಬ್ಯಾಟರ್‌ ಎನಿಸಿದ್ದರು. 8 ಪಂದ್ಯಗಳಿಂದ 246 ರನ್‌ ಬಾರಿಸಿದ್ದ ಮಿನ್ನು 12 ವಿಕೆಟ್ ಕೂಡ ಸಂಪಾದಿಸಿದ್ದರು. ಇನ್ನು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಮಿನ್ನು, ಜೆಮಿಮಾ ರೋಡ್ರಿಗಸ್‌, ಮೆಗ್‌ ಲ್ಯಾನಿಂಗ್‌ ಹಾಗೂ ಶೆಫಾಲಿ ವರ್ಮರಂಥ ಸ್ಟಾರ್‌ ತಾರೆಯರ ಜೊತೆ ಆಡಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನೊಂದಿಗೆ ಭಾರತ ತಂಡದ ಪರವಾಗಿಯೂ ಆಡುವ ಕನಸು ಕಾಣುತ್ತಿದ್ದೇನೆ ಎಂದು ಹೇಳುತ್ತಾರೆ. ಡಬ್ಲ್ಯುಪಿಎಲ್‌ನಿಂದ ಬಂದ ಹಣದಲ್ಲಿ ಮೊದಲಿಗೆ ನಾನು ಸ್ಕೂಟರ್‌ ಖರೀದಿ ಮಾಡ್ತೇನೆ. ಇದರಿಂದಾಗಿ ಪ್ರ್ಯಾಕ್ಟೀಸ್‌ಗೆ ನಾಲ್ಕು ಬಸ್‌ ಚೇಂಜ್‌ ಮಾಡುವ ತಾಪತ್ರಯ ತಪ್ಪುತ್ತದೆ ಎಂದು ಹೇಳುತ್ತಾರೆ.