ಕರ್ನಾಟಕ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಫೈನಲ್‌ಗೆ ಲಗ್ಗೆರಾಜಸ್ಥಾನ ವಿರುದ್ಧ ರಾಜ್ಯ ತಂಡ 57 ರನ್‌ ಗೆಲುವುಮಂಗಳವಾರ ಕರ್ನಾಟಕ ತಂಡ ರೈಲ್ವೇಸ್‌ ವಿರುದ್ಧ ಸೆಣಸಾಡಲಿದೆ

ರಾಂಚಿ: ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಸತತ 2ನೇ ಬಾರಿ ಫೈನಲ್‌ ಪ್ರವೇಶಿಸಿದೆ. ಶನಿವಾರ ಸೆಮಿಫೈನಲ್‌ನಲ್ಲಿ ರಾಜಸ್ಥಾನ ವಿರುದ್ಧ ರಾಜ್ಯ ತಂಡ 57 ರನ್‌ ಗೆಲುವು ದಾಖಲಿಸಿತು.

ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 8 ವಿಕೆಟ್‌ಗೆ 256 ರನ್‌ ಕಲೆಹಾಕಿತು. ವೃಂದಾ(81), ದಿವ್ಯಾ(71) ತಲಾ ಅರ್ಧಶತಕಗಳ ಕೊಡುಗೆ ನೀಡಿದರೆ, ನಾಯಕಿ ವೇದಾ ಕೃಷ್ಣಮೂರ್ತಿ 37, ಶಿಶಿರಾ ಗೌಡ 32 ರನ್‌ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ರಾಜಸ್ಥಾನ ಕರ್ನಾಟಕದ ಬೌಲರ್‌ಗಳ ದಾಳಿಗೆ ತುತ್ತಾಗಿ 45 ಓವರ್‌ಗಳಲ್ಲಿ 199 ರನ್‌ಗೆ ಆಲೌಟಾಯಿತು. ಎ.ಡಿ.ಗಾಗ್‌ರ್‍(71), ನಾಯಕಿ ಜಾಸಿಯಾ ಅಕ್ತರ್‌(49) ಹೋರಾಟ ಪ್ರದರ್ಶಿಸಿದರೂ ತಂಡಕ್ಕೆ ಗೆಲುವು ತಂದುಕೊಡಲು ಆಗಲಿಲ್ಲ. ಸಹನಾ ಪವಾರ್‌ 41ಕ್ಕೆ 4 ವಿಕೆಟ್‌ ಕಿತ್ತರು. ಮೋನಿಕಾ ಪಟೇಲ್‌ 33ಕ್ಕೆ 2 ವಿಕೆಟ್‌ ಪಡೆದರು.

ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಮಂಗಳವಾರ ಕರ್ನಾಟಕ ತಂಡ ರೈಲ್ವೇಸ್‌ ವಿರುದ್ಧ ಸೆಣಸಾಡಲಿದೆ. ಕಳೆದ ಆವೃತ್ತಿಯಲ್ಲೂ ಉಭಯ ತಂಡಗಳು ಫೈನಲ್‌ನಲ್ಲಿ ಆಡಿತ್ತು. ರೈಲ್ವೇಸ್‌ ಪ್ರಶಸ್ತಿ ಗೆದ್ದಿತ್ತು.

ಮಹಿಳಾ ಐಪಿಎಲ್‌: ಮುಂಬೈ ತಂಡಕ್ಕೆ ಜೂಲನ್‌ ಮೆಂಟರ್‌

ಮುಂಬೈ: ಕಳೆದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತದ ತಾರಾ ವೇಗಿ ಜೂಲನ್‌ ಗೋಸ್ವಾಮಿ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಮೆಂಟರ್‌ ಹಾಗೂ ಬೌಲಿಂಗ್‌ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 350ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಕೆಟ್‌ ಪಡೆದಿರುವ ಜೂಲನ್‌ ಮಹಿಳಾ ಏಕದಿನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ. 

Big Bash League: 5ನೇ ಬಾರಿಗೆ ಕಪ್ ಮುಡಿಗೇರಿಸಿಕೊಂಡ ಪರ್ತ್‌ ಸ್ಕಾರ್ಚರ್ಸ್‌..!

ಇದೇ ವೇಳೆ ಇಂಗ್ಲೆಂಡ್‌ ಪರ ಏಕದಿನ, ಟೆಸ್ಟ್‌ನಲ್ಲಿ 2ನೇ ಗರಿಷ್ಠ ರನ್‌ ಗಳಿಸಿರುವ ಶಾರ್ಲೊಟ್‌ ಎಡ್ವರ್ಡ್ಸ್ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ. ಭಾರತದ ಮಾಜಿ ಆಲ್ರೌಂಡರ್‌ ದೇವಿಕಾ ಪಾಲ್ಶಿಕಾರ್‌ ಬ್ಯಾಟಿಂಗ್‌ ಕೋಚ್‌, ತೃಪ್ತಿ ಭಟ್ಟಾಚಾರ್ಯ ವ್ಯವಸ್ಥಾಪಕರಾಗಿ ಕಾರ‍್ಯನಿರ್ವಹಿಸಲಿದ್ದಾರೆ.

ಮೊದಲ ಟೆಸ್ಟ್‌: ಜಿಂಬಾಬ್ವೆ ವಿರುದ್ಧ ವಿಂಡೀಸ್‌ 221/0

ಬುಲವಾಯೊ(ಜಿಂಬಾಬ್ವೆ): ಜಿಂಬಾಬ್ವೆ ವಿರುದ್ಧ ಮಳೆ ಪೀಡಿತ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ಭರ್ಜರಿ ಆರಂಭ ಪಡೆದಿದೆ. 2ನೇ ದಿನದಂತ್ಯಕ್ಕೆ ತಂಡ 89 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 221 ರನ್‌ ಗಳಿಸಿದೆ. ಕ್ರೇಗ್‌ ಬ್ರಾಥ್‌ವೇಟ್‌ 116 ಹಾಗೂ ತಗೆನರೈನ್‌ ಚಂದ್ರಪಾಲ್‌ 101 ರನ್‌ ಸಿಡಿಸಿ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. 

ಮಳೆಯಿಂದಾಗಿ ಕೇವಲ 51 ಓವರ್‌ ಆಟ ನಡೆದಿತ್ತು. 2ನೇ ದಿನವೂ ಮಳೆ ಅಡ್ಡಿಪಡಿಸಿದ್ದರಿಂದ ದಿನದಾಟ ಬೇಗನೇ ಕೊನೆಗೊಂಡಿತು. ಪಂದ್ಯಕ್ಕೆ ಇನ್ನೂ ಮಳೆ ಭೀತಿ ಇದ್ದು, ಡ್ರಾಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಪತ್ನಿಗೆ ಹಲ್ಲೆ: ವಿನೋದ್‌ ಕಾಂಬ್ಳಿ ವಿರುದ್ಧ ಎಫ್‌ಐಆರ್‌

ನವದೆಹಲಿ: ಪತ್ನಿ ಮೇಲೆ ಹಲ್ಲೆ ಹಾಗೂ ನಿಂದಿಸಿದ ಪ್ರಕರಣದಲ್ಲಿ ಭಾರತದ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ವಿರುದ್ಧ ಮುಂಬೈ ಪೊಲೀಸರು ಭಾನುವಾರ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಬಗ್ಗೆ ಶುಕ್ರವಾರ ವಿನೋದ್‌ ಪತ್ನಿ ಆ್ಯಂಡ್ರಿಯಾ ಬಾಂದ್ರಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಮಧ್ಯರಾತ್ರಿ ಕುಡಿದು ಬಂದ ವಿನೋದ್‌ ತನಗೆ ನಿಂದಿಸಿದ್ದಾರೆ. 

ಮಗನ ಮುಂದೆಯೇ ಅಡುಗೆ ಮನೆಯ ವಸ್ತುವೊಂದನ್ನು ತಮ್ಮ ಮೇಲೆ ಎಸೆದು ತಲೆಗೆ ಗಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಸಂಬಂಧ ಕಾಂಬ್ಳಿ ವಿರುದ್ಧ ಪೊಲೀಸರು ಸೆಕ್ಷನ್‌ 324ರ ಅಡಿ ಪ್ರಕರಣ ದಾಖಲಿಸಿದ್ದಾರೆ. ಕಾಂಬ್ಳಿ 1991ರಿಂದ 2000ದ ವರೆಗೆ ಭಾರತ ಪರ 17 ಟೆಸ್ಟ್‌, 104 ಏಕದಿನ ಪಂದ್ಯಗಳನ್ನಾಡಿದ್ದಾರೆ.