12ನೇ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪರ್ತ್‌ ಸ್ಕಾರ್ಚರ್ಸ್‌ ಚಾಂಪಿಯನ್ಬ್ರಿಸ್ಬೇನ್ ಹೀಟ್ ಎದುರು 5 ವಿಕೆಟ್ ಜಯ ಸಾಧಿಸಿದ ಪರ್ತ್ ತಂಡಕೊನೆಯ ಓವರ್‌ನಲ್ಲಿ ರೋಚಕ ಜಯ ಕಂಡ ಆಸ್ಟನ್ ಟರ್ನರ್ ಪಡೆ

ಪರ್ತ್(ಫೆ.05): ಯುವ ಸ್ಪೋಟಕ ಬ್ಯಾಟರ್ ಕೂಪರ್ ಕಾನ್ನೊಲ್ಲೆ ಮಿಂಚಿನ ಬ್ಯಾಟಿಂಗ್ ಹಾಗೂ ನಾಯಕ ಆಸ್ಟನ್ ಟರ್ನರ್ ಸಮಯೋಚಿತ ಅರ್ಧಶತಕದ ನೆರವಿನಿಂದ ಬಿಗ್‌ಬ್ಯಾಶ್ ಲೀಗ್ ಟೂರ್ನಿಯ ಫೈನಲ್‌ನಲ್ಲಿ ಬ್ರಿಸ್ಬೇನ್ ಹೀಟ್ ಎದುರು ಪರ್ತ್‌ ಸ್ಕಾರ್ಚರ್ಸ್‌ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪರ್ತ್‌ ಸ್ಕಾರ್ಚರ್ಸ್‌ ಪಾಲಾದ ಐದನೇ ಟ್ರೋಫಿ ಎನಿಸಿಕೊಂಡಿತು.

ಸುಮಾರು 53,886 ಮಂದಿ ನೆರೆದಿದ್ದ ಪರ್ತ್‌ ಕ್ರಿಕೆಟ್‌ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬ್ರಿಸ್ಬೇನ್ ಹೀಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಪರ್ತ್‌ ಸ್ಕಾರ್ಚರ್ಸ್‌ ತಂಡವು 5 ವಿಕೆಟ್ ಕಳೆದುಕೊಂಡು ಇನ್ನೂ 4 ಎಸೆತ ಬಾಕಿ ಇರುವಂತೆಯೇ ರೋಚಕ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಪರ್ತ್‌ ಸ್ಕಾರ್ಚರ್ಸ್‌ ಮತ್ತೊಮ್ಮೆ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಳೆದ ಆವೃತ್ತಿಯ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಸಿಡ್ನಿ ಸಿಕ್ಸರ್ಸ್ ತಂಡವನ್ನು ಮಣಿಸಿ ಪರ್ತ್‌ ಸ್ಕಾರ್ಚರ್ಸ್‌ 4ನೇ ಬಾರಿಗೆ ಕಪ್ ಗೆದ್ದು ಬೀಗಿತ್ತು. ಕಳೆದ 12 ಆವೃತ್ತಿಯ ಬಿಗ್‌ಬ್ಯಾಶ್ ಲೀಗ್ ಟೂರ್ನಿಯಲ್ಲಿ ಪರ್ತ್‌ ಸ್ಕಾರ್ಚರ್ಸ್‌ ತಂಡವು 5 ಬಾರಿ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ.

ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಬಳಿಕ ಮಾತನಾಡಿದ ಪರ್ತ್‌ ಸ್ಕಾರ್ಚರ್ಸ್‌ ತಂಡದ ನಾಯಕ ಆಸ್ಟನ್ ಟರ್ನರ್, "ಇದೊಂದು ಅತ್ಯಂತ ಅದ್ಭುತ ಕ್ಷಣ. ನಾನು ಈಗಾಗಲೇ ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನಾಡಿದ್ದೇನೆ. ಆದರೆ ಪಂದ್ಯ ಯಾವಾಗ, ಏನಾಗಲಿದೆ ಎಂದು ಊಹಿಸಲು ಸಾಧ್ಯವಿಲ್ಲ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಗೆಲುವಿನ ರೋಚಕತೆಯನ್ನು ವಿವರಿಸಿದರು.

Scroll to load tweet…

ಗಾಯದ ಮೇಲೆ ಮತ್ತೊಂದು ಬರೆ, ಆಸೀಸ್‌ಗೆ ಡಬಲ್‌ ಶಾಕ್‌, ಮತ್ತೋರ್ವ ವೇಗಿ ಔಟ್..!

ಬಿಗ್‌ಬ್ಯಾಶ್ ಲೀಗ್ ಫೈನಲ್ ಪಂದ್ಯವು ಅಕ್ಷರಶಃ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ತಂಡಕ್ಕೆ ಕೊನೆಯ 19 ಎಸೆತಗಳಲ್ಲಿ 39 ರನ್‌ಗಳ ಅಗತ್ಯವಿದ್ದಾಗ, ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ನಾಯಕ ಆಸ್ಟನ್ ಟರ್ನರ್ ರನೌಟ್ ಆಗಿ ಪೆವಿಲಿಯನ್ ಸೇರಿದ್ದರು. ಹೀಗಾಗಿ ಪರ್ತ್‌ ಸ್ಕಾರ್ಚರ್ಸ್‌ ಪಾಳಯದಲ್ಲಿ ಆತಂಕ ಮನೆ ಮಾಡಿತ್ತು. ಆದರೆ 19 ವರ್ಷದ ಕಾನ್ನೊಲ್ಲೇ ಕೇವಲ 11 ಎಸೆತಗಳಲ್ಲಿ 25 ರನ್ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಪರ್ತ್‌ ಸ್ಕಾರ್ಚರ್ಸ್‌ ತಂಡವು 18ನೇ ಓವರ್‌ನಲ್ಲಿ 18 ರನ್ ಗಳಿಸಿತು. ಹೀಗಾಗಿ ಕೊನೆಯ ಎರಡು ಓವರ್‌ಗಳಲ್ಲಿ 20 ರನ್‌ಗಳ ಅಗತ್ಯವಿತ್ತು. 19ನೇ ಓವರ್‌ನಲ್ಲಿ 10 ರನ್ ಕಲೆಹಾಕಿದ ಪರ್ತ್‌ ಸ್ಕಾರ್ಚರ್ಸ್‌ ತಂಡವು, 20 ಓವರ್‌ನಲ್ಲಿ ಸಿಕ್ಸ್ ಹಾಗೂ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

Scroll to load tweet…

ಬಿಗ್‌ಬ್ಯಾಶ್ ಲೀಗ್ ಫೈನಲ್‌ನಲ್ಲಿ ಎರಡು ತಂಡವು ಹಲವು ತಾರಾ ಆಟಗಾರರಿಲ್ಲದೇ ಕಣಕ್ಕಿಳಿದಿದ್ದರೂ, ರೋಚಕತೆಗೇನೂ ಕೊರತೆಯಾಗಲಿಲ್ಲ. ಬ್ರಿಸ್ಬೇನ್ ಹೀಟ್ ತಂಡದ ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ಮ್ಯಾಟ್ ರೆನ್‌ಶೋ ಹಾಗೂ ಮಿಚೆಲ್ ಸ್ವೆಪ್ಸನ್‌ ಅವರಿಲ್ಲದೇ ಕಣಕ್ಕಿಳಿದಿತ್ತು. ಇನ್ನೊಂದೆಡೆ ಪರ್ತ್ ಸ್ಕಾರ್ಚರ್ಸ್ ತಂಡವು ವೇಗಿ ಲಾನ್ಸ್ ಮೋರಿಸ್ ಹಾಗೂ ಆಸ್ಟನ್ ಅಗರ್ ಅವರಿಲ್ಲದೇ ಕಣಕ್ಕಿಳಿದಿತ್ತು. ಈ ಎಲ್ಲಾ ಕ್ರಿಕೆಟಿಗರು, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಭಾರತಕ್ಕೆ ಬಂದಿಳಿದಿದ್ದಾರೆ.