ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಶುಭಾರಂಭಶ್ರೀಲಂಕಾ ಎದುರು 41 ರನ್‌ಗಳ ಗೆಲುವು ಸಾಧಿಸಿದ ಹರ್ಮನ್‌ಪ್ರೀತ್ ಕೌರ್ ಪಡೆಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಜೆಮಿಯಾ ರೋಡ್ರಿಗಸ್

ಸೈಲೆಟ್‌(ಅ.01): ಜೆಮಿಯಾ ರೋಡ್ರಿಗಸ್‌ ಆಕರ್ಷಕ ಅರ್ಧಶತಕ ಹಾಗೂ ಡಿ ಹೇಮಲತಾ ಅವರ ಆಕರ್ಷಕ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಎದುರು ಭಾರತ ಮಹಿಳಾ ತಂಡವು 41 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮಹಿಳಾ ತಂಡವು ಭರ್ಜರಿ ಶುಭಾರಂಭ ಮಾಡಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ಮಹಿಳಾ ಕ್ರಿಕೆಟ್ ತಂಡವು 23 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಜೆಮಿಯಾ ರೋಡ್ರಿಗಸ್ ಹಾಗೂ ಹರ್ಮನ್‌ಪ್ರೀತ್ ಕೌರ್ ಸಮಯೋಚಿತ 92 ರನ್‌ಗಳ ಜತೆಯಾಟ ನಿಭಾಯಿಸಿದರು. ಹರ್ಮನ್‌ಪ್ರೀತ್ ಕೌರ್ 33 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರೆ, ರೋಡ್ರಿಗಸ್ ಆಕರ್ಷಕ 76 ರನ್ ಚಚ್ಚಿದರು. ಕೊನೆಯಲ್ಲಿ ಹೇಮಲತಾ ಅಜೇಯ 13 ರನ್ ಬಾರಿಸಿದರೆ, ರಿಚಾ ಘೋಷ್(9), ಪೂಜಾ ವಸ್ತ್ರಾಕರ್(1) ದೊಡ್ಡ ಮೊತ್ತ ಗಳಿಸಲು ವಿಫಲವಾದರು. ಅಂತಿಮವಾಗಿ ಭಾರತ ಮಹಿಳಾ ಕ್ರಿಕೆಟ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 150 ಕಲೆ ಹಾಕಿತು.

Women's Asia Cup: ಇಂದಿನಿಂದ ಏಷ್ಯಾಕಪ್‌ ಮಹಿಳಾ ಟಿ20 ಟೂರ್ನಿ..!

ಇನ್ನು ಸವಾಲಿನ ಗುರಿ ಬೆನ್ನತ್ತಿದ ಲಂಕಾ ತಂಡಕ್ಕೆ ಆರಂಭಿಕ ಬ್ಯಾಟರ್ ಹರ್ಷಿತಾ ಮಾದವಿ ಸ್ಪೋಟಕ ಆರಂಭ ಒದಗಿಸಿಕೊಡುವ ಯತ್ನ ನಡೆಸಿದರು. ಮಾದವಿ 20 ಎಸೆತಗಳಲ್ಲಿ 5 ಬೌಂಡರಿ ಸಹಿತ 26 ರನ್ ಬಾರಿಸಿದರೆ, ನಾಯಕ ಚಮಾರಿ ಅಟಪಟ್ಟು 5 ರನ್ ಬಾರಿಸಿ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಮಾದವಿ ಹಾಗೂ ಮಲ್ಷಾ ಶೆಹಾನಿ(9) ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಹಸಿನಿ ಪೆರೆರಾ 30 ರನ್‌ ಬಾರಿಸಿದರಾದರೂ ಉಳಿದ ಬ್ಯಾಟರ್‌ಗಳಿಂದ ನಿರೀಕ್ಷಿತ ಜತೆಯಾಟ ಮೂಡಿಬರಲಿಲ್ಲ. ಪೂಜಾ ವಸ್ತ್ರಾಕರ್ ಹಾಗೂ ಡಿ ಹೇಮಲತಾ ನಿರಂತರವಾಗಿ ಲಂಕಾ ಬ್ಯಾಟರ್‌ಗಳನ್ನು ಬಲಿ ಪಡೆಯುವ ಮೂಲಕ ಶಾಕ್ ನೀಡಿದರು. ಅಂತಿಮವಾಗಿ ಶ್ರೀಲಂಕಾ ತಂಡವು 18.2 ಓವರ್‌ಗಳಲ್ಲಿ ಕೇವಲ 109 ರನ್‌ ಬಾರಿಸಿ ಸರ್ವಪತನ ಕಂಡಿತು.

ಭಾರತ ಪರ ಡಿ ಹೇಮಲತಾ 15 ರನ್ ನೀಡಿ 3 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು. ಇನ್ನು ರಾಧಾ ಯಾದವ್ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಆಕರ್ಷಕ ಅರ್ಧಶತಕ ಚಚ್ಚಿದ ಜೆಮಿಯಾ ರೋಡ್ರಿಗಸ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್

ಭಾರತ ಮಹಿಳಾ ಕ್ರಿಕೆಟ್ ತಂಡ: 150/6
ಜೆಮಿಯಾ ರೋಡ್ರಿಗಸ್: 76
ಓ ರಣಸಿಂಘೆ: 32/3

ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ: 109/10
ಹಸಿನಿ ಪರೆರಾ: 30
ಡಿ ಹೇಮಲತಾ: 15/3