Asianet Suvarna News Asianet Suvarna News

Women's Asia Cup: ಇಂದಿನಿಂದ ಏಷ್ಯಾಕಪ್‌ ಮಹಿಳಾ ಟಿ20 ಟೂರ್ನಿ..!

* ಮಹಿಳಾ ಏಷ್ಯಾಕಪ್‌ ಟೂರ್ನಿ ಇಂದಿನಿಂದ ಬಾಂಗ್ಲಾದೇಶದಲ್ಲಿ ಆರಂಭ
*  ಹರ್ಮನ್‌ಪ್ರೀತ್‌ ಕೌರ್ ಪಡೆಗಿಂದು ಶ್ರೀಲಂಕಾ ಎದುರಾಳಿ
* 2018ರ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿತ್ತು
 

All Cricket Fans need to know about the Womens Asia Cup 2022 kvn
Author
First Published Oct 1, 2022, 11:24 AM IST

ಸೈಲೆಟ್‌(ಅ.01): ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದ ಉತ್ಸಾಹದಲ್ಲಿರುವ ಭಾರತ ತಂಡ, ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಶನಿವಾರದಿಂದ ಆರಂಭಗೊಳ್ಳಲಿರುವ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.

ಟಿ20 ಮಾದರಿಯಲ್ಲಿ ಹರ್ಮನ್‌ಪ್ರೀತ್‌ ಪಡೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯಶಸ್ಸು ಕಾಣದಿದ್ದರೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡು ಈ ಟೂರ್ನಿಗೆ ಕಾಲಿಟ್ಟಿದೆ. ಕಳೆದ ಆವೃತ್ತಿಯನ್ನು ಹೊರತುಪಡಿಸಿ 2004ರಲ್ಲಿ ಟೂರ್ನಿ ಆರಂಭಗೊಂಡಾಗಿನಿಂದಲೂ ಭಾರತವೇ ಪ್ರಶಸ್ತಿ ಜಯಿಸಿದೆ. 4 ಬಾರಿ ಏಕದಿನ, 2 ಬಾರಿ ಟಿ20 ಮಾದರಿಯಲ್ಲಿ ಟ್ರೋಫಿ ಗೆದ್ದಿದೆ. 2018ರ ಆವೃತ್ತಿಯಲ್ಲಿ ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶಕ್ಕೆ ಶರಣಾಗಿತ್ತು.

2020ರಲ್ಲಿ ನಡೆಯಬೇಕಿದ್ದ ಪಂದ್ಯಾವಳಿ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆದರೆ 2021ರಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಬರದ ಕಾರಣ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದಿದ್ದ ಭಾರತ, ಇತ್ತೀಚೆಗೆ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಸರಣಿಯಲ್ಲಿ 1-2ರ ಅಂತರದಲ್ಲಿ ಸೋಲುಂಡಿತ್ತು.

ಭಾರತಕ್ಕೆ ಶುಭಾರಂಭ ನಿರೀಕ್ಷೆ

ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಶನಿವಾರ ಶ್ರೀಲಂಕಾವನ್ನು ಎದುರಿಸಲಿದೆ. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಪ್ರಚಂಡ ಲಯದಲ್ಲಿದ್ದು ಸ್ಮೃತಿ ಮಂಧನಾ ಸಹ ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಶಫಾಲಿ ವರ್ಮಾ, ಎಸ್‌.ಮೇಘನಾ ಮತ್ತು ದಯಾಲನ್‌ ಹೇಮಲತಾ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ. ಗಾಯದಿಂದ ಚೇತರಿಸಿಕೊಂಡಿರುವ ಜೆಮಿಮಾ ರೋಡ್ರಿಗಸ್‌ ತಂಡಕ್ಕೆ ಮರಳಿದ್ದು, ಬ್ಯಾಟಿಂಗ್‌ಗೆ ಬಲ ತುಂಬಲಿದ್ದಾರೆ.

ICC T20 World Cup: 'ಮೊಹಮ್ಮದ್ ಶಮಿ ಪವರ್‌ ಪ್ಲೇನಲ್ಲೇ ವಿಕೆಟ್‌ ಕಬಳಿಸಬಲ್ಲರು'

ರೇಣುಕಾ ಸಿಂಗ್‌ ತಂಡದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದು, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌, ದೀಪ್ತಿ ಶರ್ಮಾ ಸ್ಪಿನ್‌ ದಾಳಿ ನಡೆಸಲಿದ್ದಾರೆ. ಮತ್ತೊಂದೆಡೆ ಶ್ರೀಲಂಕಾ ತನ್ನ ನಾಯಕಿ ಚಾಮರಿ ಅಟಾಪಟ್ಟು ಮೇಲೆ ಹೆಚ್ಚಾಗಿ ಅವಲಂಬಿತಗೊಂಡಿದೆ. ಹಾಸಿನಿ ಪೆರೇರಾ, ಹರ್ಷಿತಾ ಸಮರವಿಕ್ರಮ, ಇನೊಕ ರಣವೀರ, ಒಶಾಡಿ ರಣಸಿಂಘೆ ಪ್ರಮುಖ ಆಟಗಾರ್ತಿಯರೆನಿಸಿದ್ದಾರೆ.

ಟೂರ್ನಿ ಮಾದರಿ ಹೇಗೆ?

ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌, ಯುಎಇ ಮತ್ತು ಮಲೇಷ್ಯಾ ತಂಡಗಳು ಕಣದಲ್ಲಿವೆ. ರೌಂಡ್‌ ರಾಬಿನ್‌ ಮಾದರಿಯಲ್ಲಿ ಲೀಗ್‌ ಹಂತ ನಡೆಯಲಿದ್ದು, ಪ್ರತಿ ತಂಡವು ಉಳಿದ 6 ತಂಡಗಳ ವಿರುದ್ಧ ಒಮ್ಮೆ ಸೆಣಸಲಿದೆ. ಲೀಗ್‌ ಹಂತದಲ್ಲಿ ಪ್ರತಿ ತಂಡ ತಲಾ 6 ಪಂದ್ಯ ಆಡಲಿದ್ದು, ಅಗ್ರ 4 ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಪಂದ್ಯ: ಮಧ್ಯಾಹ್ನ 1ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios