ಮೆಲ್ಬರ್ನ್‌(ಫೆ.27): ಸತತ 2 ಗೆಲುವುಗಳೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ಮಹಿಳಾ ತಂಡ, ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್‌ ಪ್ರವೇಶಿಸುವ ಉತ್ಸಾಹದಲ್ಲಿದೆ. ಗುರುವಾರ ಇಲ್ಲಿ ನಡೆಯಲಿರುವ ‘ಎ’ ಗುಂಪಿನ 3ನೇ ಪಂದ್ಯದಲ್ಲಿ, ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿರುವ ಭಾರತ ಮತ್ತೊಂದು ಗೆಲುವನ್ನು ಎದುರು ನೋಡುತ್ತಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. 

"

ಇದನ್ನೂ ಓದಿ: ಮಹಿಳಾ ಟಿ20 ವಿಶ್ವಕಪ್: ಬಾಂಗ್ಲಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು!

ಆಸ್ಪ್ರೇಲಿಯಾ ವಿರುದ್ಧ 17, ಬಾಂಗ್ಲಾದೇಶ ವಿರುದ್ಧ 18 ರನ್‌ಗಳಿಂದ ಗೆದ್ದಿದ್ದ ಭಾರತ 4 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ನ್ಯೂಜಿಲೆಂಡ್‌ ವಿರುದ್ಧ ಜಯ ಗಳಿಸಿದರೆ ಭಾರತ ಸೆಮಿಫೈನಲ್‌ ಪ್ರವೇಶಿಸುವುದು ಖಚಿತವಾಗಲಿದೆ.

ಕಳೆದೆರಡು ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಆಕರ್ಷಕ ಪ್ರದರ್ಶನ ತೋರಿತು. 16 ವರ್ಷದ ಶಫಾಲಿ ವರ್ಮಾ ತಂಡಕ್ಕೆ ಸ್ಫೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. 3ನೇ ಕ್ರಮಾಂಕದಲ್ಲಿ ಆಡುವ ಜೆಮಿಮಾ ರೋಡ್ರಿಗಸ್‌ ಸಹ ಉತ್ತಮ ಲಯದಲ್ಲಿದ್ದಾರೆ. ಜ್ವರದ ಕಾರಣ ಬಾಂಗ್ಲಾದೇಶ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಸ್ಮೃತಿ ಮಂಧನಾ, ತಂಡಕ್ಕೆ ವಾಪಸಾಗುವ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ದೀಪ್ತಿ ಶರ್ಮಾ ಜವಾಬ್ದಾರಿಯುತ ಆಟವಾಡುತ್ತಿದ್ದು, ಬಾಂಗ್ಲಾ ವಿರುದ್ಧ ವೇದಾ ಕೃಷ್ಣಮೂರ್ತಿ ಆಡಿದ ಆಟ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಬೌಲಿಂಗ್‌ ವಿಭಾಗವನ್ನು ಪೂನಂ ಯಾದವ್‌ ಮುನ್ನಡೆಸುತ್ತಿದ್ದು, ಶಿಖಾ ಪಾಂಡೆ ಉತ್ತಮ ಬೆಂಬಲ ನೀಡುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್‌ ಉತ್ತಮ ದಾಖಲೆ ಹೊಂದಿದೆ. ಕಳೆದ 3 ಮುಖಾಮುಖಿಗಳಲ್ಲಿ ಕಿವೀಸ್‌ ಜಯ ಗಳಿಸಿದೆ. ಅನುಭವಿ ಆಟಗಾರ್ತಿಯರಾದ ಸೋಫಿ ಡಿವೈನ್‌, ಸೂಜಿ ಬೇಟ್ಸ್‌, ಲೆ ತಹುಹು ಮೇಲೆ ನ್ಯೂಜಿಲೆಂಡ್‌ ತಂಡ ಹೆಚ್ಚು ನಿರೀಕ್ಷೆ ಇರಿಸಿದೆ.