ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ 114 ರನ್ ಗುರಿ ನೀಡಿದ ಶ್ರೀಲಂಕಾ ತಂಡ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್ ಟಿಕೆಟ್ ಖಚಿತ ಪಡಿಸಿಕೊಂಡಿರುವ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಲಂಕಾ ವಿರುದ್ಧ ಬೌಲಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದೆ.ಈ ಕುರಿತಾದ ವಿವರ ಇಲ್ಲಿದೆ ನೋಡಿ.
ಮೆಲ್ಬೊರ್ನ್(ಫೆ.29): ರಾಧಾ ಯಾದವ್ ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಚಾಣಾಕ್ಷ ಬೌಲಿಂಗ್ ನೆರವಿನಿಂದ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು 113 ರನ್‌ಗಳಿಗೆ ನಿಯಂತ್ರಿಸಿದೆ.
ನ್ಯೂಜಿಲೆಂಡ್ ವಿರುದ್ಧ ರೋಚಕ ಗೆಲುವು, ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದ ಭಾರತ!
ಇಲ್ಲಿನ ಜಂಕ್ಷನ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡವು ಬ್ಯಾಟಿಂಗ್ ಮಾಡಲು ತೀರ್ಮಾನಿಸಿತು. ಆದರೆ ದೀಪ್ತಿ ಶರ್ಮಾ ಭಾರತಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಆ ಬಳಿಕ ಲಂಕಾ ನಾಯಕಿ ಚಮಾರಿ ಅಟ್ಟಪಟ್ಟು(33) ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ರನ್‌ಗಳಿಕೆಗೆ ಚುರುಕು ಮುಟ್ಟಿಸಿದರು. ಇವರಿಗೆ ಹರ್ಷಿತಾ(12) ಸಾಥ್ ನೀಡಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರಾಜೇಶ್ವರಿ ಗಾಯಕ್ವಾಡ್ ಯಶಸ್ವಿಯಾದರು. ಆ ಬಳಿಕ ರಾಧಾ ಯಾದವ್ ಬೌಲಿಂಗ್‌ನಲ್ಲಿ ಕಮಾಲ್ ಮಾಡಿದರು.
ಮಹಿಳಾ ಟಿ20 ವಿಶ್ವಕಪ್: ಪೂನಂ ಮಿಂಚಿನ ದಾಳಿಗೆ ಆಸೀಸ್ ಉಡೀಸ್
23 ರನ್‌ಗಳಿಗೆ 4 ವಿಕೆಟ್ ಕಬಳಿಸಿದ ರಾಧಾ: ಉತ್ತಮ ಮೊತ್ತದತ್ತ ಸಾಗುವ ಲಂಕಾ ಆಲೋಚನೆ ಸ್ಪಿನ್ನರ್ ರಾಧಾ ಯಾದವ್ ತಣ್ಣೀರೆರಚಿದರು. ಲಂಕಾ ಮಧ್ಯಮ ಕ್ರಮಾಂಕದ ಮೇಲೆ ಬಲವಾದ ಪೆಟ್ಟು ನೀಡಿದರು. ಈ ಮೂಲಕ ದೊಡ್ಡ ಜೊತೆಯಾಟವಾಡುವ ಕನಸಿನಲ್ಲಿದ್ದ ಲಂಕಾ ಬೃಹತ್ ಮೊತ್ತ ಕಲೆಹಾಕದಂತೆ ನೋಡಿಕೊಂಡರು. ಇದರ ಜತೆಗೆ ರಾಧಾ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನ ತೋರಿದರು.
ರಾಧಾ ಯಾದವ್ 4 ವಿಕೆಟ್ ಕಬಳಿಸಿ ಮಿಂಚಿದರೆ, ಅವರಿಗೆ ಉತ್ತಮ ಸಾಥ್ ನೀಡಿದ ರಾಜೇಶ್ವರಿ ಗಾಯಕ್ವಾಡ್ 2, ದೀಪ್ತಿ ಶರ್ಮಾ, ಪೂನಂ ಯಾದವ್ ಹಾಗೂ ಶಿಖಾ ಪಾಂಡೆ ತಲಾ ಒಂದೊಂದು ವಿಕೆಟ್ ಕಬಳಿಸಿದರು.