Asianet Suvarna News Asianet Suvarna News

ವಿಶ್ವಕಪ್ ಗೆಲ್ಲುವುದಕ್ಕಿಂತ IPL ಟ್ರೋಫಿ ಗೆಲ್ಲೋದು ಕಷ್ಟ: ಸೌರವ್ ಗಂಗೂಲಿ ಅಚ್ಚರಿ ಹೇಳಿಕೆ..!

ಟೆಸ್ಟ್ ವಿಶ್ವಕಪ್ ಗೆಲ್ಲಲು ವಿಫಲವಾದ ಟೀಂ ಇಂಡಿಯಾ
ಟೀಂ ಇಂಡಿಯಾ ನಾಯಕನ ಬೆನ್ನಿಗೆ ನಿಂತ ಸೌರವ್ ಗಂಗೂಲಿ
ವಿಶ್ವಕಪ್ ಗೆಲ್ಲುವುದಕ್ಕಿಂತ IPL ಟ್ರೋಫಿ ಗೆಲ್ಲೋದು ಕಷ್ಟವೆಂದ ಸೌರವ್ ಗಂಗೂಲಿ

Winning the IPL is more difficult than winning the World Cup Says Sourav Ganguly kvn
Author
First Published Jun 13, 2023, 1:10 PM IST

ಲಂಡನ್(ಜೂ.13): ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಗೆದ್ದು, ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಲಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ನಾಯಕತ್ವದ ಕುರಿತಂತೆಯೂ ಪ್ರಶ್ನೆಗಳು ಏಳಲಾರಂಭಿಸಿವೆ. ಈ ಮೊದಲ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮೀಸ್‌ನಲ್ಲೇ ಮುಗ್ಗರಿಸಿತ್ತು. ಇದೀಗ ಟೆಸ್ಟ್‌ ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಎದುರು 209 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಐಸಿಸಿ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಸೂಕ್ತ ವ್ಯಕ್ತಿಯೇ ಎನ್ನುವಂತಹ ಪ್ರಶ್ನೆಗಳು ಮೂಡಲಾರಂಭಿಸಿವೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರೋಹಿತ್ ಶರ್ಮಾ, ಭಾರತ ಕ್ರಿಕೆಟ್‌ನ ಯಶಸ್ವಿ ನಾಯಕರಲ್ಲಿ ಒಬ್ಬರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಅವರ ನಾಯಕತ್ವದಲ್ಲಿಯೇ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ.  ದಾದಾ ಪ್ರಕಾರ ವಿಶ್ವಕಪ್‌ ಗೆಲ್ಲುವುದಕ್ಕಿಂತ ಐಪಿಎಲ್ ಟ್ರೋಫಿ ಗೆಲ್ಲುವುದು ಅತ್ಯಂತ ಕಠಿಣವಾದ ಕೆಲಸ ಎಂದು ಹೇಳಿದ್ದಾರೆ.

ಆಜ್‌ತಕ್ ಹಿಂದಿ ವಾಹಿನಿಯ ಜತೆ ಈ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿರುವ ಸೌರವ್ ಗಂಗೂಲಿ, "ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಆ ಸಂದರ್ಭದಲ್ಲಿ ರೋಹಿತ್ ಶರ್ಮಾ ಭಾರತ ತಂಡಕ್ಕೆ ಸೂಕ್ತ ನಾಯಕರಾಗಿದ್ದರು. ಅವರ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಜತೆಗೆ ಅವರ ನಾಯಕತ್ವದಲ್ಲಿ ಭಾರತ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅದ್ಭುತ ಪ್ರದರ್ಶನ ತೋರಿದೆ. ರೋಹಿತ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಜಯಿಸಿದೆ. ನಾಯಕರಾಗಿ ಅವರೊಬ್ಬ ಉತ್ತಮ ಆಯ್ಕೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಸೋತಿರಬಹುದು, ಆದರೆ ಟೆಸ್ಟ್‌ ವಿಶ್ವಕಪ್ ಫೈನಲ್‌ಗೇರಿದ್ದೂ ಕೂಡಾ ಸಾಧನೆಯೇ ಆಗಿದೆ" ಎಂದು ದಾದಾ ಅಭಿಪ್ರಾಯಪಟ್ಟಿದ್ದಾರೆ. 

WTC Final ಸೋಲಿನ ಬೆನ್ನಲ್ಲೇ 3 ಪಂದ್ಯಗಳ ಫೈನಲ್ ಸಲಹೆ ಕೊಟ್ಟ ರೋಹಿತ್ ಶರ್ಮಾ..! ಆಸೀಸ್ ನಾಯಕ ತಿರುಗೇಟು

"ನಾನು ರೋಹಿತ್ ಶರ್ಮಾ ಅವರ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟಿದ್ದೇನೆ. ಅವರು ಹಾಗೂ ಎಂ ಎಸ್ ಧೋನಿ ಮಾತ್ರ 5 ಬಾರಿ ಐಪಿಎಲ್ ಟ್ರೋಫಿ ಜಯಿಸಿದ್ದಾರೆ. ಐಪಿಎಲ್ ಟ್ರೋಫಿ ಜಯಿಸುವುದು ಅಂದುಕೊಂಡಷ್ಟು ಸುಲಭವಲ್ಲ, ಯಾಕೆಂದರೆ ಅದೊಂದಿ ಕಠಿಣವಾದ ಟೂರ್ನಿಯಾಗಿದೆ. ವಿಶ್ವಕಪ್ ಗೆಲ್ಲುವುದಕ್ಕಿಂತ ಐಪಿಎಲ್ ಟ್ರೋಫಿ ಗೆಲ್ಲುವುದು ಸಾಕಷ್ಟು ಕಠಿಣವಾದ ಕೆಲಸವಾಗಿದೆ. ಐಪಿಎಲ್‌ನಲ್ಲಿ ಪ್ಲೇ ಆಫ್‌ಗೇರುವ ಮುನ್ನ 14 ಪಂದ್ಯಗಳನ್ನು ಆಡಬೇಕಾಗುತ್ತದೆ. ಆದರೆ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕೈದು ಪಂದ್ಯಗಳನ್ನಾಡಿದ ಬಳಿಕ ಸೆಮಿಫೈನಲ್‌ ಪಂದ್ಯಗಳಿರುತ್ತವೆ. ಆದರೆ ಐಪಿಎಲ್‌ನಲ್ಲಿ ಚಾಂಪಿಯನ್ ಆಗಬೇಕೆಂದರೆ 17 ಪಂದ್ಯಗಳನ್ನು ಆಡಬೇಕಾಗುತ್ತದೆ" ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾಗಲೇ, ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಭಾರತದ ಮೂರು ಮಾದರಿಯ ಕ್ರಿಕೆಟ್ ನಾಯಕರನ್ನಾಗಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಗಿದೆ. ರೋಹಿತ್ ನೇತೃತ್ವದಲ್ಲಿ ಎರಡು ಐಸಿಸಿ ಟೂರ್ನಿಗಳನ್ನಾಡಿದ್ದು, ಕಪ್ ಗೆಲ್ಲಲು ಸಫಲವಾಗಿಲ್ಲ. ಇನ್ನು ಭಾರತ ತಂಡವು 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಟ್ರೋಫಿ ಜಯಿಸಿತ್ತು. ಇಂಗ್ಲೆಂಡ್‌ನಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಜಯಿಸಿತ್ತು. ಇದಾಗಿ ಕಳೆದೊಂದು ದಶಕ ಕಳೆದರೂ ಐಸಿಸಿ ಟ್ರೋಫಿ ಟೀಂ ಇಂಡಿಯಾ ಪಾಲಿಗೆ ಗಗನ ಕುಸುಮವಾಗಿಯೇ ಉಳಿದಿದೆ. ಇನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಭಾರತದಲ್ಲಿಯೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಆಯೋಜನೆಗೊಂಡಿದ್ದು, ತವರಿನಲ್ಲಾದರೂ ಟೀಂ ಇಂಡಿಯಾ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios