Asianet Suvarna News Asianet Suvarna News

WTC Final ಸೋಲಿನ ಬೆನ್ನಲ್ಲೇ 3 ಪಂದ್ಯಗಳ ಫೈನಲ್ ಸಲಹೆ ಕೊಟ್ಟ ರೋಹಿತ್ ಶರ್ಮಾ..! ಆಸೀಸ್ ನಾಯಕ ತಿರುಗೇಟು

ಆಸ್ಟ್ರೇಲಿಯಾ ಎದುರು ಟೆಸ್ಟ್ ವಿಶ್ವಕಪ್ ಫೈನಲ್ ಸೋತ ಟೀಂ ಇಂಡಿಯಾ
ಮೂರು ಪಂದ್ಯಗಳ ಟೆಸ್ಟ್ ವಿಶ್ವಕಪ್ ಫೈನಲ್ ಪ್ರಸ್ತಾಪವಿಟ್ಟ ರೋಹಿತ್ ಶರ್ಮಾ
ರೋಹಿತ್ ಹೇಳಿಕೆಗೆ ತಿರುಗೇಟು ಕೊಟ್ಟ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

Team India Skipper Rohit Sharma calls for 3 match WTC Final Would Be Ideal kvn
Author
First Published Jun 12, 2023, 2:24 PM IST

ಲಂಡನ್‌(ಜೂ.12): ವಿರಾಟ್ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ಅವರಿಗೆ ಟೀಂ ಇಂಡಿಯಾ ನಾಯಕತ್ವ ಪಟ್ಟ ಕಟ್ಟಲಾಯಿತು. ಐಪಿಎಲ್‌ನಲ್ಲಿ 5 ಟ್ರೋಫಿ ಗೆದ್ದು ಯಶಸ್ವಿ ನಾಯಕ ಎನಿಸಿಕೊಂಡಿದ್ದ ರೋಹಿತ್ ಶರ್ಮಾ, ಭಾರತ ಟೆಸ್ಟ್ ತಂಡದ ನಾಯಕರಾದ ಬಳಿಕ ಹಿಟ್‌ಮ್ಯಾನ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಇಲ್ಲಿಯವರೆಗೂ ರೋಹಿತ್ ಶರ್ಮಾ ಮೇಲಿಟ್ಟ ಎಲ್ಲಾ ನಿರೀಕ್ಷೆಗಳು ಹುಸಿಯಾಗಿವೆ. ವಿರಾಟ್ ಕೊಹ್ಲಿಯಂತೆ ರೋಹಿತ್ ಶರ್ಮಾ ಕೂಡಾ ಭಾರತಕ್ಕೆ ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ.

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 2022ರ ಐಸಿಸಿ ಟಿ20  ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇನ್ನು ಇದೀಗ ಲಂಡನ್‌ನ ದಿ ಓವಲ್ ಮೈದಾನದಲ್ಲಿ ನಡೆದ ಟೆಸ್ಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಎದುರು ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು 209 ರನ್ ಅಂತರದ ಹೀನಾಯ ಸೋಲು ಅನುಭವಿಸುವ ಮೂಲಕ ಮತ್ತೊಮ್ಮೆ ಐಸಿಸಿ ಟ್ರೋಫಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಈ ಸೋಲಿನ ಬೆನ್ನಲ್ಲೇ ಮಾತನಾಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೆಸ್ಟ್ ವಿಶ್ವಕಪ್ ಚಾಂಪಿಯನ್‌ ತಂಡವನ್ನು ಕೇವಲ ಒಂದು ಪಂದ್ಯದಲ್ಲಿ ನಿರ್ಧರಿಸುವುದಕ್ಕಿಂತ ಮೂರು ಪಂದ್ಯಗಳ ಮೂಲಕ ನಿರ್ಧರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

"ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಅನ್ನು ನಾನು 3 ಪಂದ್ಯಗಳ ಸರಣಿ ರೀತಿಯಲ್ಲಿ ಆಡಲು ಬಯಸುತ್ತೇನೆ. ನಾವು ಸಾಕಷ್ಟು ಪರಿಶ್ರಮ ಪಟ್ಟೆವು ಹಾಗೂ ಗೆಲುವಿಗಾಗಿ ಹೋರಾಡಿದೆವು. ಆದರೆ ಒಂದೇ ಪಂದ್ಯವನ್ನು ಆಡಿದೆವು. ಹೆಚ್ಚಿನ ಪಂದ್ಯಗಳನ್ನು ಆಡುವುದರಿಂದ ಅಭಿಮಾನಿಗಳು ಇನ್ನು ಹೆಚ್ಚಿನ ಪಂದ್ಯಗಳನ್ನು ಸವಿಯಲು ಸಾಧ್ಯವಾಗಲಿದೆ. ಕೇವಲ ಒಂದೇ ಪಂದ್ಯದಲ್ಲಿ ಟೆಸ್ಟ್‌ ವಿಶ್ವಕಪ್ ಫೈನಲ್ ಫಲಿತಾಂಶ ನಿರ್ಧರಿಸುವುದು ಆಟಗಾರರಿಗೆ ಆಗಲಿ, ಪ್ರೇಕ್ಷಕರಿಗೇ ಆಗಲಿ ಹೆಚ್ಚು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಟ್ ಕಮಿನ್ಸ್ ತಿರುಗೇಟು: ಇನ್ನು ಆಸ್ಟ್ರೇಲಿಯಾ ತಂಡವನ್ನು ಯಶಸ್ವಿಯಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ ಪಟ್ಟಕ್ಕೇರಿಸಿದ ನಾಯಕ ಪ್ಯಾಟ್‌ ಕಮಿನ್ಸ್‌, ರೋಹಿತ್ ಶರ್ಮಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಒಲಿಂಪಿಕ್ಸ್‌ ಫೈನಲ್‌ನಲ್ಲಿ ಕೇವಲ ಒಂದೇ ಫೈನಲ್‌ನಲ್ಲಿ ಪದಕ ಗೆಲ್ಲುತ್ತಾರೆ ಎಂದು ಹೇಳುವ ಮೂಲಕ ಈಗಿರುವ ಮಾದರಿಯೇ ಸರಿ ಎಂದು ಸಮರ್ಥಿಸಿಕೊಂಡಿದ್ದಾರೆ.

WTC Final ಸೋಲಿನ ಬೆನ್ನಲ್ಲೇ ಕಿಡಿಕಾರಿದ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್..!

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಹೇಳುವುದಾದರೇ, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೋಡಕವಿದ ವಾತಾವರಣವಿದ್ದಿದ್ದರಿಂದಾಗಿ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ಇನ್ನಿಂಗ್ಸಲ್ಲಿ ಆಸೀಸ್‌ 76ಕ್ಕೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಸ್ಪ್ರೇಲಿಯಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವ ಅವಕಾಶವನ್ನು ಭಾರತ ಕೈಚೆಲ್ಲಿತು. ಸ್ಮಿತ್‌-ಹೆಡ್‌ 295 ರನ್‌ ಜೊತೆಯಾಟವಾಡಿ ಆಸೀಸ್‌ ಬೃಹತ್‌ ಮೊತ್ತಕ್ಕೆ ಕಾರಣರಾದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್‌ನಲ್ಲಿ 469 ರನ್ ಬಾರಿಸಿ ಸರ್ವಪತನ ಕಂಡಿತು.

ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಲಿಲ್ಲ.ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಹಾಗೂ ಕೆಳ ಕ್ರಮಾಂಕದಲ್ಲಿ ಶಾರ್ದೂಲ್ ಠಾಕೂರ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಫಾಲೋ ಆನ್ ಭೀತಿಯಿಂದ ಪಾರಾಯಿತು. ಅಂತಿಮವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಸರ್ವಪತಕ ಕಂಡಿತು. ಈ ಮೂಲಕ ಆಸ್ಟ್ರೇಲಿಯಾ ತಂಡವು 173 ರನ್‌ಗಳ ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಅಲೆಕ್ಸ್ ಕ್ಯಾರಿ ಬಾರಿಸಿದ ಅರ್ಧಶತಕದ ನೆರವಿನಿಂದ 8 ವಿಕೆಟ್ ಕಳೆದುಕೊಂಡು 270 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಭಾರತಕ್ಕೆ 444 ರನ್ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಭಾರತ ಎರಡನೇ ಇನಿಂಗ್ಸ್‌ನಲ್ಲಿ 234 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಆಸ್ಟ್ರೇಲಿಯಾ ಎದುರು ಮಂಡಿಯೂರಿತು.

Follow Us:
Download App:
  • android
  • ios