ಭಾರತ ವಿರುದ್ದ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಐಸಿಸಿ ಬರೆ ಹಾಕಿದೆ. ಯಾಕೆ ಹೀಗೆ? ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತೆ...

ದುಬೈ(ಡಿ.17): ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯ ಗೆದ್ದು ಬೀಗುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಐಸಿಸಿ ಬಿಗ್ ಶಾಕ್ ನೀಡಿದ್ದು, ನಿಧಾನಗತಿ ಬೌಲಿಂಗ್‌ ಮಾಡಿದ್ದಕ್ಕೆ ವೆಸ್ಟ್‌ ಇಂಡೀಸ್‌ ನಾಯಕ ಪೊಲ್ಲಾರ್ಡ್‌ ಸೇರಿದಂತೆ ತಂಡದ ಎಲ್ಲಾ ಸದಸ್ಯರಿಗೆ ಪಂದ್ಯದ ಸಂಭಾವನೆಯ ಶೇ.80ರಷ್ಟುಮೊತ್ತವನ್ನು ಐಸಿಸಿ ದಂಡವಾಗಿ ವಿಧಿಸಿದೆ.

ಚೆನ್ನೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತ್ತು. 50 ಓವರ್‌ ಬೌಲ್‌ ಮಾಡಲು ವಿಂಡೀಸ್‌ ಮೂರುವರೆ ಗಂಟೆಯ ಬದಲು 4 ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತ್ತು. ಇದು ಐಸಿಸಿಯ ಸೆಕ್ಷನ್ 2.22 ನಿಯಮ ಉಲ್ಲಂಘನೆಯಾಗಿದ್ದರಿಂದ ಐಸಿಸಿ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಕಠಿಣ ಶಿಕ್ಷೆ ವಿಧಿಸಿದ್ದಾರೆ. ಪಂದ್ಯದ ಬಳಿಕ ಪೊಲ್ಲಾರ್ಡ್‌ ತಪ್ಪೊಪ್ಪಿಕೊಂಡರು ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

ಟಿ20 ಸೋಲಿಗೆ ತಿರುಗೇಟು, ಏಕದಿನದಲ್ಲಿ ವಿಂಡೀಸ್ ಶುಭಾರಂಭ!

ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್’ಗಳಲ್ಲಿ 8 ವಿಕೆಟ್ ಕಳೆದುಕೊಂಡು 287 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಶಿಮ್ರೋನ್ ಹೆಟ್ಮೇಯರ್ ಹಾಗೂ ಶಾಯ್ ಹೋಪ್ ಆಕರ್ಷಕ ಶತಕಗಳ ನೆರವಿನಿಂದ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿತ್ತು

ಮೊದಲ ಏಕದಿನ ಪಂದ್ಯದ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಏಕದಿನ ಪಂದ್ಯ ಡಿಸೆಂಬರ್ 18ರಂದು ವಿಶಾಖಪಪಟ್ಟಣಂನಲ್ಲಿ ನಡೆಯಲಿದ್ದು, ಮೂರನೇ ಪಂದ್ಯಕ್ಕೆ ಕಟಕ್[ಡಿ.20] ಆತಿಥ್ಯ ವಹಿಸಲಿದೆ. ಇನ್ನೊಂದು ಪಂದ್ಯವನ್ನು ಜಯಿಸಿದರೆ ವೆಸ್ಟ್ ಇಂಡೀಸ್ ತಂಡವು 2002ರ ಬಳಿಕ ಭಾರತದ ವಿರುದ್ಧ ಭಾರತ ಏಕದಿನ ಸರಣಿ ಜಯಿಸಿದ ಸಾಧನೆ ಮಾಡಲಿದೆ.