ರಿಷಭ್ ಪಂತ್ ಗಾಯಗೊಂಡ ಬೆನ್ನಲ್ಲೇ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರಾ ಎಂಬ ಕುತೂಹಲ ಮನೆಮಾಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿದ್ದ ಪಂತ್, ಎರಡನೇ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿಯುವರೇ ಎಂಬುದು ಚರ್ಚೆಯ ವಿಷಯವಾಗಿದೆ.  

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಕೂಡಾ ಇದೀಗ ರೋಚಕ ಘಟ್ಟ ತಲುಪಿದ್ದು, ಕ್ರಿಕೆಟ್ ಅಭಿಮಾನಿಗಳ ಚಿತ್ತ ಕೊನೆಯ ದಿನದಾಟದ ಮೇಲೆ ನೆಟ್ಟಿದೆ. ಮೊದಲ ಇನ್ನಿಂಗ್ಸ್‌ನ 311 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ 4ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 174 ರನ್‌ ಕಲೆಹಾಕಿದೆ. ತಂಡ ಇನ್ನೂ 137 ರನ್‌ ಹಿನ್ನಡೆಯಲ್ಲಿದೆ. ಹೀಗಿರುವಾಗಲೇ ಕಾಲ್ಬೆರಳಿನ ಗಾಯಕ್ಕೆ ತುತ್ತಾಗಿರುವ ರಿಷಭ್ ಪಂತ್, ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯುತ್ತಾರಾ ಎನ್ನುವ ಕುತೂಹಲ ಜೋರಾಗಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಕ್ರಿಸ್ ವೋಕ್ಸ್‌ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಚೆಂಡು ರಿಷಭ್ ಪಂತ್ ಪಾದಕ್ಕೆ ಅಪ್ಪಳಿಸಿತ್ತು. ಇದರ ಬೆನ್ನಲ್ಲೇ ಪಂತ್ ಕಾಲಿನಿಂದ ರಕ್ತ ಜಿನುಗಿತ್ತು. ಬಳಿಕ ಪಂತ್ ಅವರನ್ನು ಕಾರ್ಟ್ ಮೂಲಕ ಪೆವಿಲಿಯನ್‌ಗೆ ಕರೆದೊಯ್ಯಲಾಗಿತ್ತು. ಆ ನಂತರ ಅವರನ್ನು ಗಾಯದ ತೀವ್ರತೆ ತಿಳಿಯಲು ಸ್ಕ್ಯಾನ್‌ಗಾಗಿ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು. ಇನ್ನು ಗಾಯದ ಹೊರತಾಗಿಯೂ ಎರಡನೇ ದಿನ ರಿಷಭ್ ಪಂತ್ ಕ್ರೀಸ್‌ಗಿಳಿದು ಆಕರ್ಷಕ ಅರ್ಧಶತಕ ಸಿಡಸಿದ್ದರು. ಇದೀಗ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಸೋಲು ತಪ್ಪಿಸಿಕೊಳ್ಳಲು ಹೋರಾಡುತ್ತಿರುವ ಭಾರತಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯುತ್ತಾರಾ ಎನ್ನುವ ಚರ್ಚೆ ಜೋರಾಗಿದೆ.

ರಿಷಭ್ ಪಂತ್ ಗಾಯದ ಬಗ್ಗೆ ಮಹತ್ವದ ಅಪ್‌ಡೇಟ್:

ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಯಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಶೂನ್ಯ ಸುತ್ತಿ ಪೆವಿಲಿಯನ್ ಪೆರೇಡ್ ನಡೆಸಿದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ನಾಯಕ ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ ಮುರಿಯದ 174 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಇದೀಗ ಕೊನೆಯ ದಿನದಾಟದಲ್ಲಿ ಒಂದು ವೇಳೆ ರಾಹುಲ್ ಇಲ್ಲವೇ ಗಿಲ್ ವಿಕೆಟ್ ಪತನದ ಬಳಿಕ ರಿಷಭ್ ಪಂತ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಾರಾ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

Scroll to load tweet…

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ರಿಷಭ್ ಪಂತ್ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿಯುತ್ತಾರೆ. ಒಂದು ವೇಳೆ ಭಾರತ ತಂಡಕ್ಕೆ ಅನಿವಾರ್ಯವಾದರೆ ರಿಷಭ್ ಪಂತ್ ಪ್ಯಾಡ್ ಕಟ್ಟಿ ಮೈದಾನಕ್ಕಿಳಿಯಲು ಸಿದ್ದರಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿ ಮಾಡಿದೆ.

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ಮೊದಲ ಇನ್ನಿಂಗ್ಸ್‌ನಲ್ಲಿ 68ನೇ ಓವರ್‌ನಲ್ಲಿ ಗಾಯಗೊಂಡು ರಿಟೈರ್ ಹರ್ಟ್ ಆಗಿ ಪೆವಿಲಿಯನ್ ಸೇರಿದ್ದರು. ಇದಾದ ಬಳಿಕ ಮೊದಲ ದಿನ ಬ್ಯಾಟ್ ಮಾಡಲು ಕ್ರೀಸ್‌ಗೆ ಇಳಿದಿರಲಿಲ್ಲ. ಆದರೆ ಎರಡನೇ ದಿನ ಭಾರತ ವಿಕೆಟ್ ಕಳೆದುಕೊಂಡ ಬಳಿಕ ಅನಿವಾರ್ಯವಾಗಿ ಕುಂಟುತ್ತಲೇ ಮೈದಾನಕ್ಕಿಳಿದು ಆಕರ್ಷಕ ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ರಿಷಭ್ ಪಂತ್ 75 ಎಸೆತಗಳನ್ನು ಎದುರಿಸಿ ಆಕರ್ಷಕ 54 ರನ್ ಸಿಡಿಸಿದ್ದರು. ಭಾರತ ತಂಡವು ಇನ್ನೂ 137 ರನ್‌ಗಳ ಹಿನ್ನಡೆಯಲ್ಲಿರುವುದರಿಂದ ಕೊನೆಯ ದಿನವೂ ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸಬೇಕಾದ ಒತ್ತಡಕ್ಕೆ ಸಿಲುಕಿದೆ. ಶುಭ್‌ಮನ್ ಗಿಲ್ ಹಾಗೂ ಕೆ ಎಲ್ ರಾಹುಲ್ ಜತೆಯಾಟದ ಮೇಲೆ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.