ಭಾರತ ವಿರುದ್ದದ ಕೊನೆಯ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕ್ಯಾನ್‌ಬೆರ್ರಾ(ಜ.14): ಭಾರತ-ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಕೊನೆಯ ಘಟ್ಟ ತಲುಪಿದ್ದು, ಜನವರಿ 15ರಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಬ್ರಿಸ್ಬೇನ್‌ನ ಗಾಬಾ ಮೈದಾನ ಆತಿಥ್ಯ ವಹಿಸಿದೆ. ಗಾಬಾ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಬಾಕಿ ಇರುವಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ 11 ಆಟಗಾರರನ್ನೊಳಗೊಂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಬ್ರಿಸ್ಬೇನ್ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಪುಕೂವ್ಸ್ಕಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಮಾರ್ಕಸ್ ಹ್ಯಾರಿಸ್‌ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ಸಿಡ್ನಿ ಟೆಸ್ಟ್ ಪಂದ್ಯವನ್ನಾಡಿದ ಆಟಗಾರರೇ ಬ್ರಿಸ್ಬೇನ್ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನೇಥನ್ ಲಯನ್‌ಗೆ ಸ್ಮರಣೀಯ ಟೆಸ್ಟ್: ಆಸ್ಟ್ರೇಲಿಯಾ ತಂಡದ ಏಕೈಕ ತಜ್ಞ ಸ್ಪಿನ್ನರ್ ನೇಥನ್ ಲಯನ್ ಪಾಲಿಗೆ ಬ್ರಿಸ್ಬೇನ್ ಟೆಸ್ಟ್ ವೃತ್ತಿ ಜೀವನದ 100 ಟೆಸ್ಟ್ ಪಂದ್ಯ ಎನಿಸಿಕೊಳ್ಳಲಿದೆ. ಆಸ್ಟ್ರೇಲಿಯಾ 100+ ಟೆಸ್ಟ್ ಪಂದ್ಯವನ್ನಾಡಿದ 13ನೇ ಆಟಗಾರ ಎನ್ನುವ ಗೌರವಕ್ಕೆ ಅನುಭವಿ ಆಫ್‌ಸ್ಪಿನ್ನರ್ ಭಾಜನರಾಗಲಿದ್ದು, ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಭಾರತಕ್ಕೀಗ ಆಸೀಸ್ ಎದುರು ಫೈನಲ್ ಟೆಸ್ಟ್..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯವನ್ನು ಜಯಿಸಿದ್ದವು. ಇನ್ನು ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಸರಣಿಯ ಕೊನೆಯ ಟೆಸ್ಟ್ ಪಂದ್ಯವನ್ನು ಜಯಿಸಿದ ತಂಡ ಸರಣಿ ಕೈವಶ ಮಾಡಿಕೊಳ್ಳಲಿದೆ.
ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮರೋನ್ ಗ್ರೀನ್, ಟಿಮ್ ಪೇನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಸ್ ಹೇಜಲ್‌ವುಡ್.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 14, 2021, 9:49 AM IST