ಬ್ರಿಸ್ಬೇನ್(ಜ.14)‌: ಗಾಯಾಳುಗಳಿಂದಲೇ ಕೂಡಿರುವ ಭಾರತ ತಂಡ ಶುಕ್ರವಾರದಿಂದ ಇಲ್ಲಿ ನಡೆಯಲಿರುವ 4ನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾದ ಸವಾಲು ಸ್ವೀಕರಿಸಲಿದೆ. 

ಸದ್ಯದ ಪರಿಸ್ಥಿತಿಯಲ್ಲಿ ಅಂತಿಮ 11ರ ಪಟ್ಟಿಯನ್ನು ಸಿದ್ಧಪಡಿಸುವುದು ನಾಯಕ ರಹಾನೆ ಹಾಗೂ ಕೋಚ್‌ ರವಿಶಾಸ್ತ್ರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿ 1-1ರಲ್ಲಿ ಸಮಗೊಂಡಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ವಶಪಡಿಸಿಕೊಳ್ಳಲು ಆಸೀಸ್‌ ಎದುರು ನೋಡುತ್ತಿದೆ. ಆದರೆ ಈ ಮಟ್ಟದ ಹೋರಾಟ ಪ್ರದರ್ಶಿಸಿ ಟ್ರೋಫಿ ಇಲ್ಲದೆ ಹಿಂದಿರುಗಲು ಭಾರತ ತಂಡ ಸಿದ್ಧವಿಲ್ಲ. ಹೀಗಾಗಿ, ಈ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.

ಭಾರತ ತಂಡದಲ್ಲಿ ಗೆಲ್ಲುವ ಉತ್ಸಾಹ ಕಾಣುತ್ತಿದೆಯಾದರೂ, ಅದಕ್ಕೆ ಬೇಕಿರುವ ಬಲಿಷ್ಠ ತಂಡ ಇಲ್ಲ. ಬೌಲಿಂಗ್‌ ಟ್ರಂಪ್‌ ಕಾರ್ಡ್‌ಗಳಾದ ಜಸ್‌ಪ್ರೀತ್‌ ಬುಮ್ರಾ, ಆರ್‌.ಅಶ್ವಿನ್‌ ಆಡುವುದು ಅನುಮಾನ. ಬುಮ್ರಾ ಶೇ.50ರಷ್ಟು ಫಿಟ್‌ ಇದ್ದಾರಷ್ಟೇ. ತಂಡ ಅವರನ್ನು ಆಡಿಸುವ ಧೈರ್ಯ ಮಾಡುತ್ತಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಒಂದೊಮ್ಮೆ ಬುಮ್ರಾ ಹೊರಬಿದ್ದರೆ ಅವರ ಬದಲು ಶಾರ್ದೂಲ್‌ ಠಾಕೂರ್‌ ಇಲ್ಲವೇ ಟಿ.ನಟರಾಜನ್‌ ಆಡಬಹುದು. ಗಾಬಾ ಕ್ರೀಡಾಂಗಣದ ಪಿಚ್‌ನಲ್ಲಿ ಹೆಚ್ಚು ಬೌನ್ಸ್‌ ಇರುವ ಕಾರಣ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ್ಲ. ಆಗ ಸಿರಾಜ್‌, ಸೈನಿ, ಶಾರ್ದೂಲ್‌ ಹಾಗೂ ನಟರಾಜನ್‌ ನಾಲ್ವರೂ ಆಡಲಿದ್ದಾರೆ.

ಅಶ್ವಿನ್‌ ಹೊರಗುಳಿದರೆ ತಮಿಳುನಾಡಿನವರೇ ಆದ ಸ್ಪಿನ್‌ ಬೌಲಿಂಗ್‌ ಆಲ್ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಟೆಸ್ಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆ ಇದೆ. ಇಲ್ಲವೇ ಕುಲ್ದೀಪ್‌ ಯಾದವ್‌ರನ್ನು ಆಡಿಸಿದರೂ ಅಚ್ಚರಿಯಿಲ್ಲ. ಇನ್ನು ಮಯಾಂಕ್‌ ಅಗರ್‌ವಾಲ್‌ ಫಿಟ್ನೆಸ್‌ ಬಗ್ಗೆಯೂ ಮಾಹಿತಿ ಇಲ್ಲ. ಅವರು ಹೊರಬಿದ್ದರೆ ಪೃಥ್ವಿ ಶಾಗೆ ಅವಕಾಶ ಸಿಗಲಿದೆ. ಶಾ 6ನೇ ಕ್ರಮಾಂಕದಲ್ಲಿ ಆಡಬಲ್ಲರಾ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ.

4ನೇ ಟೆಸ್ಟ್‌ಗೂ ಮುನ್ನ ಭಾರತಕ್ಕೆ ಗಾಯಾಘಾತ..!

ಪುಕೋವ್ಸಿಕ್ ಔಟ್‌?: 3ನೇ ಟೆಸ್ಟ್‌ ವೇಳೆ ಗಾಯಗೊಂಡ ಆರಂಭಿಕ ಬ್ಯಾಟ್ಸ್‌ಮನ್‌ ವಿಲ್‌ ಪುಕೊವ್ಸಿಕ್ ಪಂದ್ಯದಿಂದ ಹೊರಬಿದ್ದರೆ ಮಾರ್ಕಸ್‌ ಹ್ಯಾರಿಸ್‌ ಆರಂಭಿಕರಾಗಿ ಆಡಲಿದ್ದಾರೆ ಎಂದು ಆಸ್ಪ್ರೇಲಿಯಾದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೇಳಿದ್ದಾರೆ. ಉಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆಯಾಗುವ ನಿರೀಕ್ಷೆ ಇಲ್ಲ.

1988ರಿಂದ ಸೋಲಿಲ್ಲ: ಆಸ್ಪ್ರೇಲಿಯಾ ತಂಡ 1988ರಿಂದ ಬ್ರಿಸ್ಬೇನ್‌ನಲ್ಲಿ ಸೋಲು ಕಂಡಿಲ್ಲ. ಹೀಗಾಗಿ ಅದೃಷ್ಟ ತಾಣದಲ್ಲಿ ಗೆದ್ದು ಬಾರ್ಡರ್‌-ಗವಾಸ್ಕರ್‌ ಟ್ರೋಫಿಯನ್ನು ಮರಳಿ ಪಡೆಯುವ ಉತ್ಸಾಹದಲ್ಲಿದೆ.

ಪಿಚ್‌ ರಿಪೋರ್ಟ್‌: ಬ್ರಿಸ್ಬೇನ್‌ ಪಿಚ್‌ನಲ್ಲಿ ಹೆಚ್ಚು ಬೌನ್ಸ್‌ ಇರಲಿದ್ದು, ವೇಗಿಗಳ ಪಾತ್ರ ಪ್ರಮುಖವಾಗಲಿದೆ. ಹೀಗಾಗಿ ಎರಡೂ ತಂಡಗಳು ನಾಲ್ವರು ವೇಗಿಗಳನ್ನು ಆಡಿಸಬಹುದು. ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವುದು ಅನಿವಾರ್ಯ. 4ನೇ ದಿನದಿಂದ ಪಿಚ್‌ ಗುಣಮಟ್ಟಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌, ಗಿಲ್‌, ಪೂಜಾರ, ರಹಾನೆ(ನಾಯಕ), ಪಂತ್‌, ಮಯಾಂಕ್‌/ಶಾ, ಅಶ್ವಿನ್‌/ವಾಷಿಂಗ್ಟನ್‌/ಕುಲ್ದೀಪ್‌, ಸಿರಾಜ್‌, ಸೈನಿ, ಶಾರ್ದೂಲ್‌, ನಟರಾಜನ್‌.

ಆಸ್ಪ್ರೇಲಿಯಾ: ವಾರ್ನರ್‌, ಪುಕೊವ್ಸಿಕ್/ಹ್ಯಾರಿಸ್‌, ಲಬುಶೇನ್‌, ಸ್ಮಿತ್‌, ವೇಡ್‌, ಗ್ರೀನ್‌, ಪೈನ್‌(ನಾಯಕ), ಕಮಿನ್ಸ್‌, ಸ್ಟಾರ್ಕ್, ಲಯನ್‌, ಹೇಜಲ್‌ವುಡ್‌.

ಪಂದ್ಯ ಆರಂಭ: ಬೆಳಗ್ಗೆ 5ಕ್ಕೆ, 
ನೇರ ಪ್ರಸಾರ: ಸೋನಿ ಟೆನ್‌