ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಸೋತಿದ್ದು, ದುಬಾರಿ ಆಟಗಾರ ಕ್ಯಾಮರೋನ್ ಗ್ರೀನ್ ಬೌಲಿಂಗ್ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ. ನಾಯಕ ಅಜಿಂಕ್ಯ ರಹಾನೆ ಈ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೇಳಿ ಎಂದಿದ್ದು, ಇದೀಗ ಗ್ರೀನ್ ಅವರ ಗಾಯದ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟನೆ ನೀಡಿದೆ.

ಮುಂಬೈ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ತಂಡವು ಹೀನಾಯ ಸೋಲು ಅನುಭವಿಸಿದೆ. ಕೆಕೆಆರ್ ತಂಡದ ಸೋಲಿಗೆ ದುಬಾರಿ ಆಟಗಾರ ಕ್ಯಾಮರೋನ್ ಗ್ರೀನ್ ಬೌಲಿಂಗ್ ಮಾಡದೇ ಇದ್ದಿದ್ದೇ ಪ್ರಮುಖ ಕಾರಣ ಎನ್ನುವ ಚರ್ಚೆ ಜೋರಾಗಿದೆ. ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಅವರನ್ನು ಬರೋಬ್ಬರಿ 25.20 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 4 ವಿಕೆಟ್‌ ಕಳೆದುಕೊಂಡು 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ದೊಡ್ಡ ಗುರಿಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಇನ್ನೂ 5 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು. ಮೊದಲೇ ತಾರಾ ಬೌಲರ್‌ಗಳ ಕೊರತೆ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಇದ್ದೂ ಬೌಲಿಂಗ್ ಮಾಡದೇ ಹೋದದ್ದು ನುಂಗಲಾರದ ತುತ್ತಾಗಿ ಪರಿಣಮಿಸಿತು.

ಪಂದ್ಯ ಮುಕ್ತಾಯದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆಗೆ, ನೀವ್ಯಾಕೆ ಕ್ಯಾಮರೋನ್ ಗ್ರೀನ್‌ಗೆ ಬೌಲಿಂಗ್ ಮಾಡಿಸಲಿಲ್ಲ ಎಂದು ಕೇಳಿದರು. ಅದಕ್ಕೆ ರಹಾನೆ, ಈ ಪ್ರಶ್ನೆಯನ್ನು ಕ್ರಿಕೆಟ್ ಆಸ್ಟ್ರೇಲಿಯಾವನ್ನು ಕೇಳಿ. ನಾನು ಈ ಪ್ರಶ್ನೆಗೆ ಉತ್ತರ ಕೊಡೊಲ್ಲ ಎಂದು ಹೇಳಿದ್ದರು. ರಹಾನೆಯ ಈ ಮಾತು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ರಹಾನೆ ಮಾತಿಗೆ ಖಡಕ್ ರಿಪ್ಲೆ ಕೊಟ್ಟ ಕ್ರಿಕೆಟ್ ಆಸ್ಟ್ರೇಲಿಯಾ!

'ಕ್ಯಾಮರೋನ್ ಗ್ರೀನ್ ಸೊಂಟ ನೋವಿನ ಸಮಸ್ಯೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಹೀಗಾಗಿ ಕ್ಯಾಮರೋನ್ ಗ್ರೀನ್ ಸ್ವಲ್ಪ ಸಮಯದವರೆಗೆ ಬೌಲಿಂಗ್‌ನಿಂದ ದೂರವಿರಬೇಕಾಗುತ್ತದೆ' ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು ತಿಳಿಸಿದ್ದಾರೆ.

'ಕ್ಯಾಮರೋನ್ ಗ್ರೀನ್ ಸದ್ಯ ಭಾರತದಲ್ಲಿ ತನ್ನ ಬೌಲಿಂಗ್ ಲೋಡ್‌ ನಿಭಾಯಿಸುವತ್ತ ಗಮನ ನೀಡುತ್ತಿದ್ದಾರೆ. ಸುಮಾರು 10-12 ದಿನಗಳಲ್ಲಿ ಸಂಪೂರ್ಣವಾಗಿ ಆಲ್ರೌಂಡರ್ ಆಗಿ ಕಮ್‌ಬ್ಯಾಕ್ ಮಾಡುವ ಗುರಿಯನ್ನು ಹೊಂದಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ಜತೆ ಕೂಡಾ ಈ ವಿಚಾರವಾಗಿ ಮಾಹಿತಿ ನೀಡಲಾಗಿದೆ. ಕೆಕೆಆರ್ ತಂಡಕ್ಕೆ ಈ ಬಗ್ಗೆ ಸಂಪೂರ್ಣವಾಗಿ ತಿಳಿದಿದೆ' ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ವಕ್ತಾರರು ತಿಳಿಸಿದ್ದಾರೆ.

ಕೆಕೆಆರ್ ಎದುರು ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಾಯಕ ಅಜಿಂಕ್ಯ ರಹಾನೆ(67) ಹಾಗೂ ಅಂಗ್‌ಕೃಷ್ ರಘುವಂಶಿ(51) ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಕೇವಲ 4 ವಿಕೆಟ್‌ ಕಳೆದುಕೊಂಡು 220 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಶಾರ್ದೂಲ್ ಠಾಕೂರ್ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ಸವಾಲಿನ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡಕ್ಕೆ ಮಾಜಿ ನಾಯಕ ರೋಹಿತ್ ಶರ್ಮಾ(78) ಹಾಗೂ ರಿಯಾನ್ ರಿಕೆಲ್ಟನ್(81) ಸ್ಪೋಟಕ ಅರ್ಧಶತಕಗಳ ನೆರವಿನಿಂದ ಇನ್ನೂ 5 ಎಸೆತ ಬಾಕಿ ಇರುವಂತೆಯೇ 6 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿತು.ಇದರ ಜತೆಗೆ 2012ರ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.