ಸ್ಪಿನ್ನರ್‌ಗಳಾದ ವರುಣ್‌ ಚಕ್ರವರ್ತಿ ಮತ್ತು ಸುನಿಲ್‌ ನರೇನ್‌ ದಾಳಿಗೆ ನಲುಗಿದ ರಾಜಸ್ಥಾನ ರಾಯಲ್ಸ್‌ 155 ರನ್ ಗಳಿಸಿತು. ಈ ಗುರಿ ಬೆನ್ನತ್ತಿದ ಕೆಕೆಆರ್‌, ರಿಂಕು ಸಿಂಗ್‌ರ ಅಜೇಯ ಅರ್ಧಶತಕ ಹಾಗೂ ಅನುಕೂಲ್‌ ರಾಯ್‌ ಜೊತೆಗಿನ ಜೊತೆಯಾಟದ ಬಲದಿಂದ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ, ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು.

ಕೋಲ್ಕತಾ: ಮಿಸ್ಟ್ರಿ ಸ್ಪಿನ್ನರ್‌ಗಳಾದ ಸುನಿಲ್‌ ನರೇನ್‌, ವರುಣ್‌ ಚಕ್ರವರ್ತಿ ಹಾಗೂ ಫಿನಿಶರ್‌ ರಿಂಕು ಸಿಂಗ್‌ರ ಹೋರಾಟದ ಅರ್ಧಶತಕದ ನೆರವಿನಿಂದ ಕೋಲ್ಕತಾ ನೈಟ್‌ರೈಡರ್ಸ್‌ ಈ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಜಯ ಸಾಧಿಸಿದೆ. ಸತತ 6 ಪಂದ್ಯಗಳಲ್ಲಿ ಗೆಲುವನ್ನೇ ಕಾಣದೆ ಉಳಿದಿದ್ದ ಕೆಕೆಆರ್‌, ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್‌ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ ಗೆಲುವು ಸಾಧಿಸಿ, ಕೊನೆಗೂ ಖಾತೆ ತೆರೆಯಿತು.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ವೈಭವ್‌ ಸೂರ್ಯವಂಶಿ (28 ಎಸೆತದಲ್ಲಿ 46) ಹಾಗೂ ಯಶಸ್ವಿ ಜೈಸ್ವಾಲ್‌ (39)ರ ಉತ್ತಮ ಆಟದ ಹೊರತಾಗಿಯೂ 20 ಓವರಲ್ಲಿ 9 ವಿಕೆಟ್‌ಗೆ ಕೇವಲ 155 ರನ್ ಗಳಿಸಿತು. ವರುಣ್‌ 4 ಓವರಲ್ಲಿ 14 ರನ್‌ಗೆ 3, ನರೇನ್‌ 4 ಓವರಲ್ಲಿ 26 ರನ್‌ಗೆ 2 ವಿಕೆಟ್‌ ಕಬಳಿಸಿದರು. p

ಸುಲಭ ಗುರಿ ಬೆನ್ನತ್ತಿದ ಕೆಕೆಆರ್‌ 85 ರನ್‌ಗೆ 6 ವಿಕೆಟ್‌ ಕಳೆದುಕೊಂಡು ಮತ್ತೊಂದು ಸೋಲಿನತ್ತ ಮುಖ ಮಾಡಿತ್ತು. ಆದರೆ 7ನೇ ವಿಕೆಟ್‌ಗೆ ಜೊತೆಯಾದ ರಿಂಕು ಹಾಗೂ ಅನುಕೂಲ್‌ ರಾಯ್‌ ತಂಡಕ್ಕೆ ಆಸರೆಯಾದರು. ಇನ್ನಿಂಗ್ಸ್‌ ಆರಂಭದಲ್ಲಿ ಸಿಕ್ಕ ಜೀವದಾನದ ಲಾಭವೆತ್ತಿದ ರಿಂಕು 34 ಎಸೆತದಲ್ಲಿ ಔಟಾಗದೆ 53 ರನ್‌ ಗಳಿಸಿದರೆ, ರಾಯ್‌ 16 ಎಸೆತದಲ್ಲಿ 29 ರನ್ ಗಳಿಸಿದರು. 2 ಎಸೆತ ಬಾಕಿ ಇರುವಂತೆ ಕೆಕೆಆರ್‌ ಪಂದ್ಯ ಜಯಿಸಿತು.

ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 155/9 (ವೈಭವ್‌ 46, ಜೈಸ್ವಾಲ್‌ 39, ವರುಣ್‌ 3-14, ನರೇನ್‌ 2-26), ಕೆಕೆಆರ್‌ 19.4 ಓವರಲ್ಲಿ 161/6 (ರಿಂಕು 53*, ಅನುಕೂಲ್‌ 29*, ಜಡೇಜಾ 2-8) ಪಂದ್ಯಶ್ರೇಷ್ಠ: ವರುಣ್‌ ಚಕ್ರವರ್ತಿ

ಕರ್ನಾಟಕದ ಯಶ್‌ ಪುಂಜಾ ಪಾದಾರ್ಪಣೆ

ರಾಜಸ್ಥಾನ ರಾಯಲ್ಸ್‌ ತಂಡದ ಪರ ಇಂಪ್ಯಾಕ್ಟ್‌ ಆಟಗಾರನಾಗಿ ಕಣಕ್ಕಿಳಿಯುವ ಮೂಲಕ ಮಂಗಳೂರು ಮೂಲದ 19 ವರ್ಷದ ಯಶ್‌ ರಾಜ್‌ ಪುಂಜಾ, ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ಮೊದಲ ಪಂದ್ಯದಲ್ಲೇ 4 ಓವರಲ್ಲಿ ಕೇವಲ 25 ರನ್‌ ನೀಡಿ 1 ವಿಕೆಟ್‌ ಕಿತ್ತು ಗಮನ ಸೆಳೆದರು. ಮಹಾರಾಜ ಟ್ರೋಫಿಯಲ್ಲಿ ಯಶ್‌, ಹುಬ್ಬಳ್ಳಿ ಟೈಗರ್ಸ್‌ ಪರ ಆಡಿದ್ದರು.

ಪಂಜಾಬ್‌ ಅಜೇಯ ಓಟಕ್ಕಿಲ್ಲ ಬ್ರೇಕ್‌!

ಮುಲ್ಲಾನ್‌ಪುರ್‌: ಈ ಐಪಿಎಲ್‌ನಲ್ಲಿ ಪಂಜಾಬ್‌ ಕಿಂಗ್ಸ್‌ ಅಜೇಯ ಓಟಕ್ಕೆ ತಡೆಯಿಲ್ಲದಂತಾಗಿದೆ. ಭಾನುವಾರ ನಡೆದ 2ನೇ ಪಂದ್ಯದಲ್ಲಿ ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಪಂಜಾಬ್‌ 54 ರನ್‌ ಗೆಲುವು ಸಾಧಿಸಿತು. 6 ಪಂದ್ಯಗಳಲ್ಲಿ 5 ಜಯದೊಂದಿಗೆ ಒಟ್ಟು 11 ಅಂಕದೊಂದಿಗೆ ಪಂಜಾಬ್‌ ಅಗ್ರಸ್ಥಾನದಲ್ಲಿ ಮುಂದುವರಿದರೆ, ಲಖನೌ 8ನೇ ಸ್ಥಾನದಲ್ಲೇ ಉಳಿದಿದೆ.

ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌, ಪ್ರಿಯಾನ್ಶ್‌ ಆರ್ಯಾ ಹಾಗೂ ಕೂಪರ್‌ ಕೊನಲಿ ಅವರ ವಿಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 7 ವಿಕೆಟ್‌ಗೆ 254 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಇದು ಈ ಐಪಿಎಲ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತ ಎನಿಸಿತು. ಪ್ರಿಯಾನ್ಶ್‌ 37 ಎಸೆತದಲ್ಲಿ 4 ಬೌಂಡರಿ, 9 ಸಿಕ್ಸರ್‌ನೊಂದಿಗೆ 93, ಕೂಪರ್‌ 46 ಎಸೆತದಲ್ಲಿ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ 87 ರನ್‌ ಚಚ್ಚಿದರು. ಪಂಜಾಬ್‌ ಇನ್ನಿಂಗ್ಸಲ್ಲಿ ಒಟ್ಟು 21 ಸಿಕ್ಸರ್‌ಗಳಿದ್ದವು.

ಲಖನೌ ಹೋರಾಟ ಪ್ರದರ್ಶಿಸಿದರೂ ಗುರಿಯ ಸನಿಹಕ್ಕೂ ಬರಲು ಸಾಧ್ಯವಾಗಲಿಲ್ಲ. 5 ವಿಕೆಟ್‌ಗೆ 200 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸ್ಕೋರ್‌: ಪಂಜಾಬ್‌ 20 ಓವರಲ್ಲಿ 254/7 (ಪ್ರಿಯಾನ್ಶ್‌ 93, ಕೂಪರ್‌ 87, ಪ್ರಿನ್ಸ್‌ 2-25), ಲಖನೌ 20 ಓವರಲ್ಲಿ 200/5 (ಪಂತ್ 43, ಮಾರ್ಕ್‌ರಮ್‌ 42, ಯಾನ್ಸನ್‌ 2-37) ಪಂದ್ಯಶ್ರೇಷ್ಠ: ಪ್ರಿಯಾನ್ಶ್‌