ಸಂಜು ಸ್ಯಾಮ್ಸನ್‌ರ ಸ್ಫೋಟಕ ಶತಕದ (115*) ನೆರವಿನಿಂದ ಚೆನ್ನೈ ಸೂಪರ್‌ ಕಿಂಗ್ಸ್‌ 212 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌, ಕ್ರೇಗ್‌ ಓವರ್ಟನ್‌ರ (4/18) ಮಾರಕ ಬೌಲಿಂಗ್ ದಾಳಿಗೆ ನಲುಗಿ 26 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಮೂಲಕ ಚೆನ್ನೈ 2026ರ ಐಪಿಎಲ್‌ನಲ್ಲಿ ಮೊದಲ ಜಯ ದಾಖಲಿಸಿತು.

ಚೆನ್ನೈ: ಸಂಜು ಸ್ಯಾಮ್ಸನ್‌ರ ಅಮೋಘ ಶತಕ, ಕ್ರೇಗ್‌ ಓವರ್ಟನ್‌ರ ಮಾರಕ ಬೌಲಿಂಗ್‌ ದಾಳಿ 2026ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಜಯ ತಂದುಕೊಟ್ಟಿದೆ. ಶನಿವಾರ ಇಲ್ಲಿನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಚೆನ್ನೈ 26 ರನ್‌ಗಳ ಗೆಲುವು ಸಾಧಿಸಿ, ಮೊದಲ ಅಂಕ ಗಳಿಸಿತು.

Add Asianetnews Kannada as a Preferred SourcegooglePreferred

ಮೊದಲು ಬ್ಯಾಟ್‌ ಮಾಡಿದ ಚೆನ್ನೈಗೆ ಸ್ಯಾಮ್ಸನ್‌ರ ಸ್ಫೋಟಕ ಆಟ ನೆರವಾಯಿತು. 56 ಎಸೆತದಲ್ಲಿ 15 ಬೌಂಡರಿ, 4 ಸಿಕ್ಸರ್‌ಗಳೊಂದಿಗೆ 115 ರನ್‌ ಗಳಿಸಿ ಸ್ಯಾಮ್ಸನ್‌ ಔಟಾಗದೆ ಉಳಿದರು. ಆಯುಷ್‌ ಮ್ಹಾತ್ರೆ 59, ಶಿವಂ ದುಬೆ ಔಟಾಗದೆ 20 ರನ್‌ ಗಳಿಸಿದರು. ಚೆನ್ನೈ 20 ಓವರಲ್ಲಿ 2 ವಿಕೆಟ್‌ಗೆ 212 ರನ್‌ ಗಳಿಸಿತು.

ಡೆಲ್ಲಿ ಉತ್ತಮ ಆರಂಭ ಪಡೆದರೂ, ಅದರ ಲಾಭವೆತ್ತಲು ಸಾಧ್ಯವಾಗಲಿಲ್ಲ. ನಿಸ್ಸಾಂಕ 41 ರನ್‌ ಗಳಿಸಿ ಔಟಾದ ಬಳಿಕ ತಂಡದ ರನ್‌ ಗಳಿಕೆ ನಿಧಾನಗೊಂಡಿತು. ಬಳಿಕ ಟ್ರಿಸ್ಟನ್‌ ಸ್ಟಬ್ಸ್‌ 38 ಎಸೆತದಲ್ಲಿ 60 ರನ್‌ ಸಿಡಿಸಿ ಹೋರಾಟ ನಡೆಸಿದರೂ, ಪಂದ್ಯ ಕೈಜಾರದಂತೆ ಚೆನ್ನೈ ಎಚ್ಚರ ವಹಿಸಿತು. ಓವರ್ಟನ್‌ 4 ಓವರಲ್ಲಿ ಕೇವಲ 18 ರನ್‌ ನೀಡಿ 4 ವಿಕೆಟ್ ಕಿತ್ತರು. ಡೆಲ್ಲಿ ಸತತ 2ನೇ ಸೋಲಿಗೆ ಗುರಿಯಾಯಿತು.

ಸ್ಕೋರ್‌: ಚೆನ್ನೈ 20 ಓವರಲ್ಲಿ 212/2 (ಸಂಜು 115*, ಆಯುಷ್‌ 59, ಅಕ್ಷರ್‌ 1-39)

ಡೆಲ್ಲಿ 20 ಓವರಲ್ಲಿ 189/10 (ಸ್ಟಬ್ಸ್‌ 60, ನಿಸ್ಸಾಂಕ 41, ಓವರ್ಟನ್‌ 4-18)

ಪವರ್‌-ಪ್ಲೇನಲ್ಲಿ 105 ರನ್‌ ಹೊಡೆದರೂ ಗೆಲ್ಲದ ಸನ್‌ರೈಸರ್ಸ್ ಹೈದರಾಬಾದ್ 

ಮುಲ್ಲಾನ್‌ಪುರ: ಐಪಿಎಲ್‌ನಲ್ಲೀಗ 200ಕ್ಕೂ ಹೆಚ್ಚು ರನ್‌ ಗಳಿಸಿದರೂ ಅದು ಸುರಕ್ಷಿತವಲ್ಲ ಎನ್ನುವುದು ಪದೇಪದೇ ಸಾಬೀತಾಗುತ್ತಿದೆ. ಶನಿವಾರದ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ 219 ರನ್‌ ಕಲೆಹಾಕಿದ ಹೊರತಾಗಿಯೂ ಪಂಜಾಬ್‌ ಕಿಂಗ್ಸ್‌ ವಿರುದ್ಧ 6 ವಿಕೆಟ್‌ಗಳಿಂದ ಸೋಲುಂಡಿತು.

ಅಭಿಷೇಕ್‌ ಶರ್ಮಾರ ಸ್ಫೋಟಕ ಆಟದ ನೆರವಿನಿಂದ ಪವರ್‌-ಪ್ಲೇ (ಮೊದಲ 6 ಓವರ್‌)ನಲ್ಲೇ ವಿಕೆಟ್‌ ನಷ್ಟವಿಲ್ಲದೆ 105 ರನ್‌ ಪೇರಿಸಿದರೂ, ಕೊನೆ 14 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 114 ರನ್‌ ಗಳಿಸಿದ ಸನ್‌ರೈಸರ್ಸ್‌, ಬೃಹತ್‌ ಮೊತ್ತ ಕಲೆಹಾಕಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಅವಕಾಶ ಕೈಚೆಲ್ಲಿತು.

ಭರ್ಜರಿ ಆರಂಭ ಪಡೆದ ಪಂಜಾಬ್ ಕಿಂಗ್ಸ್

ಪಂಜಾಬ್‌ ಕೂಡ ಪವರ್‌-ಪ್ಲೇನಲ್ಲಿ ಸಿಡಿಲಬ್ಬರದ ಆಟವಾಡಿತು. ಪ್ರಿಯಾನ್ಶ್‌ ಆರ್ಯಾ 16 ಎಸೆತದಲ್ಲಿ ಅರ್ಧಶತಕ ಸಿಡಿಸಿದರೆ, ಪ್ರಭ್‌ಸಿಮ್ರನ್‌ ಕೂಡ ಸನ್‌ರೈಸರ್ಸ್‌ ಬೌಲರ್‌ಗಳನ್ನು ಕಾಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 7 ಓವರಲ್ಲಿ 99 ರನ್‌ ಜೊತೆಯಾಟವಾಡಿದರು. ಪ್ರಿಯಾನ್ಶ್‌ 20 ಎಸೆತದಲ್ಲಿ 57, ಪ್ರಭ್‌ಸಿಮ್ರನ್‌ 25 ಎಸೆತದಲ್ಲಿ 51 ರನ್‌ ಚಚ್ಚಿ ಔಟಾದ ಬಳಿಕ ತಂಡಕ್ಕೆ ನಾಯಕ ಶ್ರೇಯಸ್‌ ಅಯ್ಯರ್‌ ಆಸರೆಯಾದರು. 33 ಎಸೆತದಲ್ಲಿ ಔಟಾಗದೆ 69 ರನ್‌ ಗಳಿಸಿ, ಇನ್ನೂ 7 ಎಸೆತ ಬಾಕಿ ಇರುವಾಗಲೇ ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 219/6 (ಅಭಿ 74, ಕ್ಲಾಸೆನ್‌ 39, ಶಶಾಂತ್‌ 2-20),

ಪಂಜಾಬ್‌ 18.5 ಓವರಲ್ಲಿ 223/4 (ಶ್ರೇಯಸ್‌ 69*, ಪ್ರಿಯಾನ್ಶ್‌ 57, ಪ್ರಭ್‌ಸಿಮ್ರನ್‌ 51, ಶಿವಾಂಗ್‌ 3-33)

ಪಂದ್ಯಶ್ರೇಷ್ಠ: ಶ್ರೇಯಸ್‌ ಅಯ್ಯರ್