* ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಐಪಿಎಲ್ ಪ್ಲೇ ಆಫ್‌ ರೋಚಕತೆ* 52 ಲೀಗ್ ಪಂದ್ಯ ಮುಗಿದರೂ ಇನ್ನೂ ಒಂದು ತಂಡವು ಪ್ಲೇ ಆಫ್ ಪ್ರವೇಶಿಸಿಲ್ಲ* ರವಿಶಾಸ್ತ್ರಿ ಭವಿಷ್ಯ ನಿಜವಾಗುವ ಸಾಧ್ಯತೆ

ಬೆಂಗಳೂರು(ಮೇ.08): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ 52 ಪಂದ್ಯಗಳು ಯಶಸ್ವಿಯಾಗಿವೆ. ಹೀಗಿದ್ದೂ ಯಾವೊಂದು ತಂಡವು ಇನ್ನೂ ಅಧಿಕೃತವಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿಲ್ಲ ಹಾಗೆಯೇ ಟೂರ್ನಿಯೂ ಹೊರಬಿದ್ದಿಲ್ಲ. ಐಪಿಎಲ್‌ ಲೀಗ್ ಹಂತದ ಮುಕ್ಕಾಲು ಪಂದ್ಯಗಳು ಮುಕ್ತಾಯವಾಗಿದ್ದರೂ ಸಹ, ಪ್ಲೇ ಆಫ್‌ ಹಂತ ಪ್ರವೇಸಿಸಲಿರುವ ತಂಡಗಳು ಯಾವುವು ಎನ್ನುವ ರೋಚಕತೆ ಇನ್ನೂ ಹಾಗೆಯೇ ಉಳಿದಿದೆ. ಇನ್ನು ಇದೆಲ್ಲದರ ನಡುವೆ ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ ಎದುರು ಹಾರ್ದಿಕ್ ಪಾಂಡ್ಯ ನೇತೃತ್ವದ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಹೊಸ್ತಿಲಲ್ಲಿ ಬಂದು ನಿಂತಿದೆ. ಇದರ ಬೆನ್ನಲ್ಲೇ ಈ ಹಿಂದೆ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದ ಭವಿಷ್ಯ ನಿಜವಾಗುವ ಸೂಚನೆ ಸಿಗತೊಡಗಿದೆ.

ಹೌದು, ಚಾಂಪಿಯನ್‌ ಆಟ ಮುಂದುವರಿಸಿರುವ ಗುಜರಾತ್‌ ಟೈಟಾನ್ಸ್‌ ಪ್ಲೇ-ಆಫ್‌ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ. ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್‌ 56 ರನ್‌ ಜಯ ಸಾಧಿಸಿತು. 11 ಪಂದ್ಯಗಳಲ್ಲಿ 8ನೇ ಗೆಲುವಿನೊಂದಿಗೆ ತನ್ನ ಅಂಕ ಗಳಿಕೆಯನ್ನು 16ಕ್ಕೆ ಹೆಚ್ಚಿಸಿಕೊಂಡು ಅಗ್ರಸ್ಥಾನದಲ್ಲೇ ಮುಂದುವರಿದಿದೆ. ಇನ್ನುಳಿದ ಮೂರು ಪಂದ್ಯಗಳ ಪೈಕಿ ಒಂದು ಗೆಲುವು ಟೈಟಾನ್ಸ್ ತಂಡವನ್ನು ಅಧಿಕೃತವಾಗಿ ಪ್ಲೇ ಆಫ್‌ಗೆ ಪ್ರವೇಶ ಸಿಗುವಂತೆ ಮಾಡಲಿದೆ

ವೃದ್ಧಿಮಾನ್‌ ಸಾಹ ಹಾಗೂ ಶುಭ್‌ಮನ್‌ ಗಿಲ್‌ರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ಗುಜರಾತ್‌ 2 ವಿಕೆಟ್‌ಗೆ 227 ರನ್‌ ಕಲೆಹಾಕಿತು. ಇದು ಐಪಿಎಲ್‌ನಲ್ಲಿ ತಂಡದ ಗರಿಷ್ಠ ಮೊತ್ತ. ಮೊದಲ ವಿಕೆಟ್‌ಗೆ ಕೇವಲ 12.1 ಓವರಲ್ಲಿ ಸಾಹ ಹಾಗೂ ಗಿಲ್‌ 142 ರನ್‌ ಜೊತೆಯಾಟವಾಡಿದರು. ಗಿಲ್‌ 51 ಎಸೆತದಲ್ಲಿ 2 ಬೌಂಡರಿ, 7 ಸಿಕ್ಸರ್‌ನೊಂದಿಗೆ ಔಟಾಗದೆ 94 ರನ್‌ ಗಳಿಸಿದರೆ, ಸಾಹ 43 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್‌ನೊಂದಿಗೆ 81 ರನ್‌ ಗಳಿಸಿದರು. ಹಾರ್ದಿಕ್‌ 25, ಮಿಲ್ಲರ್‌ 21 ರನ್‌ ಕೊಡುಗೆ ನೀಡಿದರು.

ಈ ತಂಡವೇ ಈ ಬಾರಿ IPL ಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ರವಿ ಶಾಸ್ತ್ರಿ

ಉತ್ತಮ ಆರಂಭ: ಬೃಹತ್‌ ಗುರಿ ಬೆನ್ನತ್ತಿದ ಲಖನೌಗೆ ಕೈಲ್‌ ಮೇಯ​ರ್‍ಸ್ ಹಾಗೂ ಕ್ವಿಂಟನ್‌ ಡಿ ಕಾಕ್‌ ಉತ್ತಮ ಆರಂಭ ಒದಗಿಸಿದರು. 6 ಓವರಲ್ಲಿ 72 ರನ್‌ ಕಲೆಹಾಕಿದ ಈ ಜೋಡಿ ಗುಜರಾತ್‌ ಪಾಳಯದಲ್ಲಿ ಭೀತಿ ಮೂಡಿಸಿತು. ಆದರೆ ರಶೀದ್‌ ಹಿಡಿತ ಅದ್ಭುತ ಕ್ಯಾಚ್‌ ಮೇಯ​ರ್‍ಸ್(48) ಆಟಕ್ಕೆ ತೆರೆ ಎಳೆಯಿತು. ಈ ಆವೃತ್ತಿಯಲ್ಲಿ ಮೊದಲ ಪಂದ್ಯವಾಡಿದ ಡಿ ಕಾಕ್‌ 41 ಎಸೆತದಲ್ಲಿ 70 ರನ್‌ ಗಳಿಸಿ ಔಟಾದರು. ಹೂಡಾ, ಸ್ಟೋಯ್ನಿಸ್‌, ಪೂರನ್‌ ಸಿಡಿಯಲಿಲ್ಲ. ಲಖನೌ 7 ವಿಕೆಟ್‌ಗೆ 171 ರನ್‌ ಗಳಿಸಲಷ್ಟೇ ಶಕ್ತವಾಯಿತು. 

ಇನ್ನು ಕೆಲ ದಿನಗಳ ಹಿಂದೆ ಅಂದರೆ ಮೇ 05ರಂದು ರಾಜಸ್ಥಾನ ರಾಯಲ್ಸ್ ಹಾಗೂ ಟೈಟಾನ್ಸ್ ನಡುವಿನ ಪಂದ್ಯಕ್ಕೂ ಮುನ್ನ ಮಾತನಾಡಿದ್ದ ರವಿಶಾಸ್ತ್ರಿ, " ಸದ್ಯದ ತಂಡದ ಪ್ರದರ್ಶನ ಹಾಗೂ ಅಂಕಪಟ್ಟಿಯನ್ನು ಗಮನಿಸಿದರೆ, ನನ್ನ ಪ್ರಕಾರ ಈ ಬಾರಿ ಕೂಡಾ ಗುಜರಾತ್ ಟೈಟಾನ್ಸ್ ತಂಡವು ಪ್ರಶಸ್ತಿ ಜಯಿಸಲಿದೆ. ತಂಡದಲ್ಲಿ ಪರಿಸ್ಥಿತಿಗನುಗುಣವಾಗಿ ಆಡುವ ಆಟಗಾರರಿದ್ದಾರೆ. ಅದರಲ್ಲೂ ಏಳರಿಂದ ಎಂಟು ಆಟಗಾರರು ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ತೋರುತ್ತಾ ಬಂದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಸಹ ಆಟಗಾರರ ಪ್ರದರ್ಶನವನ್ನು ಕೊಂಡಾಡುತ್ತಾರೆ ಎಂದು ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಜತೆ ಮಾತನಾಡುವ ವೇಳೆ ತಂಡದ ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟಿದ್ದರು. 

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌(2010, 2011) ಹಾಗೂ ಮುಂಬೈ ಇಂಡಿಯನ್ಸ್(2019,2020) ಸತತ ಎರಡು ಬಾರಿ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿವೆ. ಇದೀಗ ಈ ಆವೃತ್ತಿಯಲ್ಲಿ ಟೈಟಾನ್ಸ್ ಪಡೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ, ಸಿಎಸ್‌ಕೆ ಹಾಗೂ ಮುಂಬೈ ಸಾಲಿಗೆ ಸೇರಲಿದೆ. ಒಟ್ಟಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಸಂಘಟಿತ ಪ್ರದರ್ಶನ ತೋರುತ್ತಿರುವ ರೀತಿಯನ್ನು ಗಮನಿಸಿದರೆ ರವಿಶಾಸ್ತ್ರಿ ಭವಿಷ್ಯ ನಿಜವಾಗುವ ಸಾಧ್ಯತೆಯೇ ಹೆಚ್ಚು.