ಚೆನ್ನೈ ವಿರುದ್ಧ ಮುಂಬೈ ಸೋತರೂ, ವಿಘ್ನೇಶ್ ಪುತೂರ್ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಮಿಂಚಿದರು. ಕೇರಳದ ಈ ಸ್ಪಿನ್ನರ್, ಯಾವುದೇ ಸೀನಿಯರ್ ಕ್ರಿಕೆಟ್ ಆಡದಿದ್ದರೂ, ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದರು. ಮೊದಲಿಗೆ ವೇಗದ ಬೌಲರ್ ಆಗಿದ್ದ ಇವರು, ಬಳಿಕ ಸ್ಪಿನ್ನರ್ ಆದರು. ತಮ್ಮ ಸ್ಪಿನ್ ಕೌಶಲ್ಯದಿಂದಾಗಿ 3 ವಿಕೆಟ್ ಪಡೆದು ಗಮನ ಸೆಳೆದರು. ಮುಂಬೈ ಇವರನ್ನು ದಕ್ಷಿಣ ಆಫ್ರಿಕಾಗೆ ಕಳುಹಿಸಿ ತರಬೇತಿ ನೀಡಿತ್ತು.
ಚೆನ್ನೈ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಬದ್ದ ಎದುರಾಳಿ ಮುಂಬೈ ಇಂಡಿಯನ್ಸ್ ಎದುರು 4 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಈ ಪಂದ್ಯದಲ್ಲಿ ಪಂದ್ಯದ ಫಲಿತಾಂಶಕ್ಕಿಂತ, ತಾನಾಡಿದ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಮಿಂಚಿನ ಪ್ರದರ್ಶನ ತೋರಿದ ಯುವ ಸ್ಪಿನ್ನರ್ ವಿಘ್ನೇಶ್ ಪುತೂರ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದೆ. ರೋಹಿತ್ ಶರ್ಮಾ ಬದಲಿಗೆ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ವಿಘ್ನೇಶ್ ಪುತೂರ್, ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್‌ಕೆ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ್ದ ಸ್ಪರ್ಧಾತ್ಮಕ ಗುರಿಯನ್ನು ಸಿಎಸ್‌ಕೆ ತಂಡವು ಅನಾಯಾಸವಾಗಿ ತಲುಪಲಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಲಾರಂಭಿಸಿದರು. ಆದರೆ ಈ ವಿಘ್ನೇಶ್ ಪುತೂರ್ ಅವರ ಮಿಂಚಿನ ದಾಳಿಯ ನೆರವಿನಿಂದ ಪಂದ್ಯ ಕೊನೆಯ ಓವರ್‌ವರೆಗೂ ರೋಚಕತೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಮೊದಲ 3 ಓವರ್‌ನಲ್ಲಿ ವಿಘ್ನೇಶ್ ಪುತೂರ್ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್, ಶಿವಂ ದುಬೆ ಹಾಗೂ ದೀಪಕ್ ಹೂಡಾ ಅವರನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಒಂದು ವೇಳೆ ಮುಂಬೈ ಇಂಡಿಯನ್ಸ್ 10-15 ಜಾಸ್ತಿ ಕಲೆಹಾಕಿದ್ದರೇ ಬಹುಶಃ ಫಲಿತಾಂಶ ಬೇರೆಯದ್ದೇ ಆಗುತ್ತಿತ್ತೇನೋ. ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದ ವಿಘ್ನೇಶ್ 4 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿ ತಮ್ಮ ಪಾದಾರ್ಪಣೆ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಇದನ್ನೂ ಓದಿ: ಬಾಂಗ್ಲಾದೇಶ ದಿಗ್ಗಜ ಕ್ರಿಕೆಟಿಗನಿಗೆ ಹಾರ್ಟ್ ಅಟ್ಯಾಕ್! ಆಸ್ಪತ್ರೆಗೆ ದೌಡು!
ಚೈನಾಮನ್ ಸ್ಪಿನ್ನರ್ ಖ್ಯಾತಿಯ ಈ ವಿಘ್ನೇಶ್ ಪುತೂರ್ ಅವರ ಐಪಿಎಲ್ ಜರ್ನಿಯೇ ಒಂದು ರೀತಿ ರೋಚಕ ಕಥೆ. ಕೇರಳ ಮೂಲದ 24 ವರ್ಷದ ಈ ಯುವ ಸ್ಪಿನ್ನರ್ ಮಲಪ್ಪುರ ನಿವಾಸಿ. ಅವರ ತಂದೆ ಓರ್ವ ಸಾಮಾನ್ಯ ಆಟೋ ಚಾಲಕ. ಇನ್ನೂ ಇಂಟ್ರೆಸ್ಟಿಂಗ್ ಸಂಗತಿಯೆಂದರೇ, ಈ ವಿಘ್ನೇಶ್ ಪುತೂರ್ ಕೇರಳ ಪರ ಒಂದೇ ಒಂದು ಸೀನಿಯರ್ ಲೆವೆಲ್ ಕ್ರಿಕೆಟ್ ಪಂದ್ಯವನ್ನೂ ಆಡಿಲ್ಲ. ಮೊದಲಿಗೆ ಈ ವಿಘ್ನೇಶ್ ಪುತೂರ್ ಮಧ್ಯಮ ವೇಗದ ಬೌಲರ್ ಆಗಿದ್ದರು. ಅದರೆ ಕೇರಳ ಕ್ರಿಕೆಟಿಗ ಮೊಹಮ್ಮದ್ ಶೌರಿಫ್ ಇವರಿಗೆ ಸ್ಪಿನ್ ಬೌಲರ್ ಆಗಲು ಸಲಹೆ ನೀಡಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ವಿಘ್ನೇಶ್ ಪುತೂರ್, ಸ್ಪಿನ್ ಬೌಲರ್ ಆಗುವತ್ತ ಗಮನ ಹರಿಸಿದರು. ಎಡಗೈ ಸ್ಪಿನ್ನರ್ ಆಗಿರುವುದರಿಂದ ವಿಘ್ನೇಶ್‌ಗೆ ಮಾಸ್ಟರ್‌ಸ್ಟ್ರೋಕ್ ಎನಿಸಿಕೊಂಡಿತು. ಸ್ಥಳೀಯ ಲೀಗ್ ಹಾಗೂ ಕಾಲೇಜ್ ಟೂರ್ನಮೆಂಟ್‌ಗಳಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದರಿಂದ ಲೈನ್ ಹಾಗೂ ಲೆಂಗ್ತ್ ಮತ್ತಷ್ಟು ನಿಖರವಾಗತೊಡಗಿತು. ಇದಾದ ಬಳಿಕ ಸೇಂಟ್ ಥಾಮಸ್ ಕಾಲೇಜ್ ಹಾಗೂ ಜೋಲಿ ರೋವರ್ಸ್ ಕ್ರಿಕೆಟ್ ಕ್ಲಬ್ ನಡುವಿನ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರಿಂದ ಅವರು ಚೊಚ್ಚಲ ಆವೃತ್ತಿಯ ಕೇರಳ ಟಿ20 ಲೀಗ್‌ನಲ್ಲಿ ಅಳಪ್ಪೆ ರಿಪಲ್ಸ್ ತಂಡ ಕೂಡಿಕೊಂಡರು.
ಇದನ್ನೂ ಓದಿ: ಐಪಿಎಲ್‌ನಲ್ಲಿ ಸೊನ್ನೆ ಸುತ್ತುವುದರಲ್ಲೂ ರೋಹಿತ್ ಶರ್ಮಾ ಹೊಸ ದಾಖಲೆ!
ಆಯ್ಕೆ ಟ್ರಯಲ್ಸ್‌ನಲ್ಲಿ ಮುಂಬೈ ಕಣ್ಣಿಗೆ ಬಿದ್ದ ಕೇರಳದ ಮುತ್ತು:
ಪ್ರತಿ ಬಾರಿಯೂ ಸ್ಥಳೀಯ ಕ್ಲಬ್‌ಗಳಲ್ಲಿ ಆಡುತ್ತಿದ್ದ ಯುವಪ್ರತಿಭೆಗಳನ್ನು ಗುರುತಿಸಿ, ಅವರನ್ನು ವಿಶ್ವ ಶ್ರೇಷ್ಠ ಕ್ರಿಕೆಟಿಗರನ್ನಾಗಿ ರೂಪಿಸುವ ಮುಂಬೈ ಈ ಸಲವೂ ಯುವ ಆಟಗಾರರೊಬ್ಬರನ್ನು ಕ್ರೀಡಾ ಜಗತ್ತಿಗೆ ಪರಿಚಯಿಸಿದೆ. ಅವರ ಹೆಸರು ವಿಘ್ನೇಶ್ ಪುತೂರ್. ಕೇರಳದ 24 ವರ್ಷದ ವಿಶ್ಲೇಶ್ ಎಡಗೈ ಸ್ಪಿನ್ನರ್, ಕೇರಳ ಪ್ರೀಮಿಯರ್ ಲೀಗ್‌ನಲ್ಲಿ ಅಳಪ್ಪೆ ರಿಪಲ್ಸ್ ತಂಡದಲ್ಲಿದ್ದ ವಿಶ್ಲೇಶ್, 3 ಪಂದ್ಯಗಳಲ್ಲಿ ಕೇವಲ 2 ವಿಕೆಟ್ ಕಿತ್ತಿದ್ದರು. ಆದರೆ ಸ್ಪಿನ್ ದಾಳಿಯಲ್ಲಿನ ಕೌಶಲ್ಯ ಗುರುತಿಸಿದ್ದ ಮುಂಬೈ, ತಂಡದ ಟ್ರಯಲ್‌ಗೆ ಕರೆಸಿತ್ತು. ಹರಾಜಿನಲ್ಲಿ ₹30 ಲಕ್ಷ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.
ಇದನ್ನೂ ಓದಿ: IPL 2025: ಸನ್‌ರೈಸರ್ಸ್ ಆರ್ಭಟಕ್ಕೆ ರಾಯಲ್ಸ್ ಧೂಳೀಪಟ!
ವಿಘ್ನೇಶ್ ಪುತೂರ್ ಅವರ ಬೌಲಿಂಗ್ ಮತ್ತಷ್ಟು ನಿಖರತೆ ಸಾಧಿಸಲು ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದಕ್ಷಿಣ ಆಫ್ರಿಕಾಗೆ ಕಳಿಸಿತು. ಅಲ್ಲಿ SA20 ಲೀಗ್ ಟೂರ್ನಿಯಲ್ಲಿ ಈ ವಿಘ್ನೇಶ್ ಪುತೂರ್ MI ಕೇಪ್‌ಟೌನ್ ತಂಡದ ನೆಟ್‌ಬೌಲರ್ ಆಗಿ ಸೇರಿಕೊಂಡರು. ಅಲ್ಲಿ ರಶೀದ್ ಖಾನ್ ಅವರಂತಹ ವಿಶ್ವದರ್ಜೆಯ ಸ್ಪಿನ್ನರ್‌ಗಳ ಜತೆ ಬೆರೆಯಲು ಅವಕಾಶ ಸಿಕ್ಕಿತು. ವಿಶ್ವದ ಅದ್ಭುತ ಸ್ಪಿನ್ನರ್ ರಶೀದ್ ಖಾನ್ ಅವರ ಜತೆ ಬೆರೆತು ಹೊಸ ಹೊಸ ಕೌಶಲ್ಯಗಳನ್ನು ಕಲಿಯುವ ಅವಕಾಶವನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿಘ್ನೇಶ್‌ಗೆ ಒದಗಿಸಿಕೊಟ್ಟಿತು. ಇದರಿಂದ ವಿಘ್ನೇಶ್ ಅವರ ಆತ್ಮವಿಶ್ವಾಸವೂ ಹೆಚ್ಚಿತು. ಇದೀಗ ಮಿಲಿಯನ್ ಡಾಲರ್ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ತಾವೆಷ್ಟು ಅಪಾಯಕಾರಿ ಸ್ಪಿನ್ನರ್ ಎನ್ನುವ ವಾರ್ನಿಂಗ್ ರವಾನಿಸಿದ್ದಾರೆ.
