ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪರ ಆಡುತ್ತಿರುವ ಆದಿತ್ಯ ಅಶೋಕ್ ತಮಿಳುನಾಡು ಮೂಲದವರು. ಬಾಲ್ಯದಲ್ಲೇ ನ್ಯೂಜಿಲೆಂಡ್‌ಗೆ ತೆರಳಿದ ಇವರು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಪ್ರಸಿದ್ಧ ಡೈಲಾಗ್ ಅನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ವಡೋದರ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಈ ಪಂದ್ಯದಲ್ಲಿ ಕಿವೀಸ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದ ಒಬ್ಬ ಆಟಗಾರನ ಹೆಸರು ಹೆಚ್ಚು ಗಮನ ಸೆಳೆಯುತ್ತಿದೆ. ಅದು ಮತ್ತ್ಯಾರು ಅಲ್ಲ, ಭಾರತೀಯ ಮೂಲದ ಲೆಗ್‌ಸ್ಪಿನ್ನರ್ ಆದಿತ್ಯ ಅಶೋಕ್.
ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದ ಆದಿತ್ಯ ಅಶೋಕ್ ತಮ್ಮ ನಾಲ್ಕನೇ ವಯಸ್ಸಿನವರೆಗೂ ಭಾರತದಲ್ಲೇ ಇದ್ದರು. ಆದರೆ ಇದಾದ ಬಳಿಕ ಅವರ ಪೋಷಕರು ಉದ್ಯೋಗ ಅರೆಸಿ ಆಕ್ಲೆಂಡ್‌ಗೆ ತೆರಳಿದರು. ಬಾಲ್ಯದಿಂದಲೇ ಕ್ರಿಕೆಟ್ ಬಗ್ಗೆ ಅಪಾರ ಒಲವು ಹೊಂದಿದ್ದ ಆದಿತ್ಯ, ಅಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಪರಿಣಾಮ 2020ರ ಅಂಡರ್-19 ವಿಶ್ವಕಪ್ ಟೂರ್ನಿಗೆ ಕಿವೀಸ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಆದಿತ್ಯ ಅಶೋಕ್ 2021ರಲ್ಲಿ ಆಕ್ಲೆಂಡ್ ಪರವಾಗಿ ವೃತ್ತಿಪರ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಕೆಲವೇ ಸಮಯದಲ್ಲಿ ಮೂರು ಮಾದರಿಯ ಕ್ರಿಕೆಟ್‌ನ ಅತ್ಯಂತ ನಂಬಿಗಸ್ಥ ಬೌಲರ್ ಆಗಿ ಆದಿತ್ಯ ಬೆಳೆದು ನಿಂತರು. ಇದಾದ ಬಳಿಕ 2022-23ರಲ್ಲಿ ನ್ಯೂಜಿಲೆಂಡ್‌ನ ವರ್ಷದ ಪ್ರತಿಭಾನ್ವಿತ ಯುವ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ:
ಆದಿತ್ಯ ಅಶೋಕ್, ಯುನೇಟೆಡ್ ಅರಬ್ ಎಮಿರಾಟ್ಸ್ ಎದುರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಕೆಲವೇ ತಿಂಗಳ ಬಳಿಕ ಬಾಂಗ್ಲಾದೇಶ ಎದುರು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ಗಾಯದ ಸಮಸ್ಯೆಯಿಂದ ಕೆಲಕಾಲ ತಂಡದಿಂದ ಹೊರಗುಳಿದಿದ್ದರು. ಇದುವರೆಗೂ ಮೂರು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಆದಿತ್ಯ ಅಶೋಕ್ ಎರಡು ವಿಕೆಟ್ ಕಬಳಿಸಿದ್ದಾರೆ.
ಆದಿತ್ಯ ಅಶೋಕ್ ಸೂಪರ್ ಸ್ಟಾರ್ ರಜಿನಿಕಾಂತ್ ಅಪ್ಪಟ ಅಭಿಮಾನಿ:
ತಮಿಳು ಸಿನಿಮಾ ರಂಗದ ಸೂಪರ್‌ಸ್ಟಾರ್ ರಜಿನಿಕಾಂತ್ ಎಂದರೆ ಆದಿತ್ಯ ಅಶೋಕ್‌ಗೆ ಎಲ್ಲಿಲ್ಲದ ಅಭಿಮಾನ. ಅವರು ಬೌಲಿಂಗ್ ಮಾಡುವ ಕೈ ಮೇಲೆ ತಮಿಳಿನಲ್ಲಿ ರಜಿನಿಕಾಂತ್ ಫೇಮಸ್ ಸಿನಿಮಾ ಪಡಿಯಪ್ಪದ ಡೈಲಾಗ್ 'ಎನ್ ವಿಝಿ, ತನ್ನಿ ವಿಝಿ'(ನನ್ನ ಹಾದಿ ವಿಶಿಷ್ಠ ಹಾದಿ) ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಭಾರತ ಎದುರಿನ ಸರಣಿಗೂ ಮುನ್ನ ಆದಿತ್ಯ ಅಶೋಕ್ ಚೆನ್ನೈ ಸೂಪರ್ ಕಿಂಗ್ಸ್ ಅಕಾಡೆಮಿಯಲ್ಲಿ ಕೆಲವು ವಾರಗಳ ಕಾಲ ಅಭ್ಯಾಸ ನಡೆಸಿದ್ದಾರೆ. ಇದೀಗ ಭಾರತ ಎದುರಿನ ಸರಣಿಯಲ್ಲಿ ಯಾವ ರೀತಿ ಬೌಲಿಂಗ್ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಉಭಯ ತಂಡಗಳು ಹೀಗಿವೆ:
ಭಾರತ: ರೋಹಿತ್ ಶರ್ಮಾ, ಶುಭಮನ್ ಗಿಲ್(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.
ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್, ಡೇರಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮಿಚೆಲ್ ಬ್ರೇಸ್‌ವೆಲ್(ನಾಯಕ), ಝಕಾರಿ ಫೌಲ್ಕ್ಸ್, ಕ್ರಿಸ್ಟಿನ್ ಕ್ಲಾರ್ಕ್, ಕೈಲ್ ಜೇಮಿಸನ್, ಆದಿತ್ಯ ಅಶೋಕ್.


