ವಡೋದರಾದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿರುವ ಭಾರತ. ಕಿವೀಸ್ ಪರ ಕ್ರಿಸ್ಟಿನ್ ಕ್ಲಾರ್ಕ್ ಪಾದಾರ್ಪಣೆ ಮಾಡಿದ್ದಾರೆ.

ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಟೀಂ ಇಂಡಿಯಾ ಆಡುತ್ತಿರುವ ಹೊಸ ವರ್ಷದ ಮೊದಲ ಪಂದ್ಯ ಇದಾಗಿದೆ. ಇದು ವಡೋದರಾದ ಕೊಟಂಬಿ ಕ್ರೀಡಾಂಗಣದಲ್ಲಿ ಪುರುಷರ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಪಿಚ್ ಯಾವ ರೀತಿ ವರ್ತಿಸಲಿದೆ ಎನ್ನುವ ಕುತೂಹಲವಿದೆ.

ಭಾರತ ತಂಡವು ಈ ಪಂದ್ಯದಲ್ಲಿ ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿದ್ದು, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ ಬೌಲರ್‌ಗಳಾಗಿ ಕಣಕ್ಕಿಳಿದಿದ್ದರೇ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ ಹಾಗೂ ಕನ್ನಡಿಗ ಪ್ರಸಿದ್ದ್ ಕೃಷ್ಣ ವೇಗದ ಬೌಲರ್‌ಗಳಾಗಿ ಸ್ಥಾನ ಪಡೆದಿದ್ದಾರೆ.

Scroll to load tweet…

ಶ್ರೇಯಸ್‌ ಅಯ್ಯರ್ ಕಮ್‌ಬ್ಯಾಕ್‌:

ಭಾರತದ ಪರ ಕಳೆದ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಎದುರು ಕೊನೆ ಬಾರಿ ಏಕದಿನ ಪಂದ್ಯವಾಡಿದ್ದ ಶ್ರೇಯಸ್ ಅಯ್ಯರ್‌, ಗಾಯದಿಂದ ಚೇತರಿಸಿಕೊಂಡು ಸದ್ಯ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ಅವರು 4ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಶ್ರೇಯಸ್ ಅಯ್ಯರ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿರುವ ಏಕದಿನ ಮಾದರಿ ನಾಯಕ ಶುಭ್‌ಮನ್‌ ಗಿಲ್‌ ಕೂಡಾ ಈ ಸರಣಿ ದೊಡ್ಡ ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ.

ಕಿವೀಸ್ ಪರ ಕ್ರಿಸ್ಟಿನ್ ಕ್ಲಾರ್ಕ್ ಪಾದಾರ್ಪಣೆ: ಸಾಕಷ್ಟು ಯುವ ಆಟಗಾರರನ್ನೊಳಗೊಂಡ ಕಿವೀಸ್ ತಂಡವನ್ನು ಮಿಚೆಲ್ ಬ್ರೇಸ್‌ವೆಲ್ ತಂಡವನ್ನು ಮುನ್ನಡೆಸಲಿದ್ದು, ಕ್ರಿಸ್ಟಿನ್ ಕ್ಲಾರ್ಕ್ ತಂಡ ಕೂಡಿಕೊಂಡಿದ್ದಾರೆ. ಕ್ರಿಸ್ಟಿನ್ ಕಾರ್ಕ್ ಮಧ್ಯಮ ವೇಗದ ಬೌಲರ್ ಆಗಿದ್ದು, ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಚೆನ್ನೈ ಮೂಲದ ಕಿವೀಸ್ ಆಟಗಾರ ಆದಿತ್ಯ ಅಶೋಕ್ ನ್ಯೂಜಿಲೆಂಡ್ ತಂಡದ ಪ್ರಮುಖ ಲೆಗ್‌ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಉಭಯ ತಂಡಗಳು ಹೀಗಿವೆ:

ಭಾರತ: ರೋಹಿತ್ ಶರ್ಮಾ, ಶುಭಮನ್‌ ಗಿಲ್(ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.

ನ್ಯೂಜಿಲೆಂಡ್: ಡೆವೊನ್ ಕಾನ್‌ವೇ, ಹೆನ್ರಿ ನಿಕೋಲ್ಸ್, ವಿಲ್ ಯಂಗ್‌, ಡೇರಲ್ ಮಿಚೆಲ್, ಗ್ಲೆನ್ ಫಿಲಿಫ್ಸ್, ಮಿಚೆಲ್ ಹೇ(ವಿಕೆಟ್ ಕೀಪರ್), ಮಿಚೆಲ್ ಬ್ರೇಸ್‌ವೆಲ್(ನಾಯಕ), ಝಕಾರಿ ಫೌಲ್ಕ್ಸ್‌, ಕ್ರಿಸ್ಟಿನ್ ಕ್ಲಾರ್ಕ್‌, ಕೈಲ್ ಜೇಮಿಸನ್, ಆದಿತ್ಯ ಅಶೋಕ್.