ತಿರುವನಂತಪುರಂ(ಡಿ.08): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.  ಶಿವಂ ದುಬೆ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿದೆ. ಈ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ 171 ರನ್ ಟಾರ್ಗೆಟ್ ನೀಡಿದೆ.  

ಇದನ್ನೂ ಓದಿ: ಸಂಜುಗೆ ಅದ್ಧೂರಿ ಸ್ವಾಗತ; ಫ್ಯಾನ್ಸ್ ಅಭಿಮಾನ ಕಂಡು ದಂಗಾದ ಟೀಂ ಇಂಡಿಯಾ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದ ಕೆಎಲ್ ರಾಹುಲ್, 2ನೇ ಪಂದ್ಯದಲ್ಲಿ 11 ರನ್ ಸಿಡಿಸಿ ನಿರ್ಗಮಿಸಿದರು. ವಿರಾಟ್ ಕೊಹ್ಲಿ ಬದಲು ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದ ಶಿವಂ ದುಬೆ, ಸ್ಫೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಮುಂದಾದರು.

ರೋಹಿತ್ ಶರ್ಮಾ ಅಬ್ಬರಿಸಲಿಲ್ಲ. ಕೇವಲ 15 ರನ್ ಸಿಡಿಸಿ ಔಟಾದರು. ದುಬೆ ಸಿಕ್ಸರ್ ಮೂಲಕ ಘರ್ಜಿಸಿದರು. ದುಬೆ 30 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 54 ರನ್ ಚಚ್ಚಿದರು. ದುಬೆ ಔಟಾದ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಪತನಗೊಂಡಿತು . ಕೊಹ್ಲಿ 19 ರನ್‌ ಸಿಡಿಸಿ ಪೆವಿಲಿಯನ್ ಸೇರಿದರು. 

ರಿಷಬ್ ಪಂತ್ ಹೋರಾಟ ನೀಡಿದರೆ, ಶ್ರೇಯಸ್ ಅಯ್ಯರ್ 10 ರನ್ ಸಿಡಿಸಿ ಔಟಾದರು. ರವೀಂದ್ರ ಜಡೇಜಾ  9 ರನ್ ಸಿಡಿಸಿ ನಿರ್ಗಮಿಸಿದರು. ರಿಷಬ್ ಪಂತ್ ಅಜೇಯ 33 ರನ್  ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕ 170 ರನ್ ಸಿಡಿಸಿತು.