ಇಂಗ್ಲೆಂಡ್ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಬಾಂಗ್ಲಾದೇಶವೈಟ್‌ವಾಷ್‌ ಅನುಭವಿಸಿದ ಬೆನ್ನಲ್ಲೇ ಮೈಕೆಲ್ ವಾನ್ ಟ್ರೋಲ್ ಮಾಡಿದ ವಾಸೀಂ ಜಾಫರ್ಟಿ20 ಚಾಂಪಿಯನ್‌ ಇಂಗ್ಲೆಂಡ್‌ಗೆ ಬಾಂಗ್ಲಾದೇಶ ಎದುರು ಮುಖಭಂಗ

ಢಾಕಾ(ಮಾ.15): ಹಾಲಿ ಟಿ20 ವಿಶ್ವಕಪ್ ಚಾಂಪಿಯನ್‌ ಇಂಗ್ಲೆಂಡ್ ತಂಡಕ್ಕೆ ಬಾಂಗ್ಲಾದೇಶ ಪ್ರವಾಸದಲ್ಲಿ ಮುಖಭಂಗ ಎದುರಾಗಿದೆ. ಬಾಂಗ್ಲಾದೇಶ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯ ಪೈಕಿ ಮೂರೂ ಪಂದ್ಯಗಳಲ್ಲೂ ಹೀನಾಯ ಸೋಲು ಅನುಭವಿಸುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿದೆ. ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ಎದುರು ಬಾಂಗ್ಲಾದೇಶವು 3-0 ಅಂತರದಲ್ಲಿ ಟಿ20 ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿ ಬೀಗಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್‌, ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಅವರ ಕಾಲೆಳೆದಿದ್ದಾರೆ.

ವಾಸೀಂ ಜಾಫರ್‌, ಬಾಂಗ್ಲಾದೇಶ ತಂಡದ ಜೆರ್ಸಿ ತೊಟ್ಟಿರುವ ಫೋಟೋದೊಂದಿಗೆ, "ಹೆಲೋ ಮೈಕೆಲ್ ವಾನ್‌, ತುಂಬಾ ದಿನ ಆಯ್ತಲ್ಲ ನಿಮ್ಮನ್ನು ನೋಡಿ" ಎಂದು ಇಂಗ್ಲೆಂಡ್ ಮಾಜಿ ನಾಯಕನಿಗೆ ಟಾಂಗ್ ಕೊಟ್ಟಿದ್ದಾರೆ. ಈ ಟ್ವೀಟ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

Scroll to load tweet…

ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳನ್ನು ಜಯಿಸುವ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ಎದುರು ಬಾಂಗ್ಲಾದೇಶ ತಂಡವು ಟಿ20 ಸರಣಿ ಗೆದ್ದು ಬೀಗಿತ್ತು. ಇದೀಗ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು 158 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೆ ಶಕ್ತವಾಗಿತ್ತು.

ಬಾಂಗ್ಲಾದೇಶ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಕೇವಲ 57 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಆಕರ್ಷಕ 73 ರನ್ ಸಿಡಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟರ್‌ ರೋನಿ ತಾಲ್ಲೂಕ್ದಾರ್ 24 ರನ್‌ ಗಳಿಸಿ ಆದಿಲ್‌ ರಶೀದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಜ್ಮುಲ್ ಹೊಸೈನ್ ಶಾಂಟೋ ಅಜೇಯ 47 ರನ್ ಹಾಗೂ ನಾಯಕ ಶಕೀಬ್ ಅಲ್ ಹಸನ್ ಅಜೇಯ 4 ರನ್‌ ಬಾರಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು.

ಸಚಿನ್, ಪಾಂಟಿಂಗ್, ರೋಹಿತ್ ಶರ್ಮಾ ಮಾಡಲಾಗದ ಸಾಧನೆ ನಿರ್ಮಿಸಿದ ವಿರಾಟ್ ಕೊಹ್ಲಿ..!

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ಮೊದಲ ಓವರ್‌ನಲ್ಲೇ ಫಿಲ್ ಸಾಲ್ಟ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಡೇವಿಡ್ ಮಲಾನ್ ಹಾಗೂ ನಾಯಕ ಜೋಸ್ ಬಟ್ಲರ್‌ ಎರಡನೇ ವಿಕೆಟ್‌ಗೆ 95 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಡೇವಿಡ್ ಮಲಾನ್ 47 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 53 ರನ್ ಬಾರಿಸಿ ಮುಸ್ತಾಫಿಜುರ್ ರೆಹಮಾನ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಜೋಸ್ ಬಟ್ಲರ್ 40 ರನ್ ಬಾರಿಸಿ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಇಂಗ್ಲೆಂಡ್ ನಾಟಕೀಯ ಕುಸಿತ: ಇಂಗ್ಲೆಂಡ್‌ ತಂಡವು 100 ರನ್‌ಗಳವರೆಗೂ ಕೇವಲ ಒಂದು ವಿಕೆಟ್ ಕಳೆದುಕೊಂಡು ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಆದರೆ ಡೇವಿಡ್ ಮಲಾನ್ ವಿಕೆಟ್ ಪತನವಾಗುತ್ತಿದ್ದಂತೆಯೇ ಆಂಗ್ಲರ ಪಡೆ ನಾಟಕೀಯ ಕುಸಿತ ಕಂಡಿತು. ಕೇವಲ 28 ರನ್‌ ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತನ್ನ ಪ್ರಮುಖ 5 ವಿಕೆಟ್ ಕಳೆದುಕೊಂಡಿತು. ಬೆನ್ ಡುಕೆಟ್‌ 11 ರನ್ ಗಳಿಸಿದರೆ, ಮೋಯಿನ್ ಅಲಿ 9, ಸ್ಯಾಮ್ ಕರ್ರನ್ 4 ರನ್‌ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಕ್ರಿಸ್ ವೋಕ್ಸ್ ಅಜೇಯ 13 ರನ್‌ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.