ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ವಿಚಾರದಲ್ಲಿ ಅಪರೂಪದ ದಾಖಲೆ ಬರೆದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯಲ್ಲೂ 10+ ಪಂದ್ಯಶ್ರೇಷ್ಠ: ವಿರಾಟ್ ಕೊಹ್ಲಿ ಅಪರೂಪದ ದಾಖಲೆಅಹಮದಾಬಾದ್ ಟೆಸ್ಟ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ವಿರಾಟ್ ಕೊಹ್ಲಿ
ಅಹಮದಾಬಾದ್(ಮಾ.15): ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದು, ಎಲ್ಲಾ 3 ಮಾದರಿ ಕ್ರಿಕೆಟ್ನಲ್ಲೂ 10ಕ್ಕೂ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎನಿಸಿಕೊಂಡರು. ಸೋಮವಾರ ಮುಕ್ತಾಯಗೊಂಡ ಆಸ್ಪ್ರೇಲಿಯಾ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿಗೆ ದೊರೆತ 10ನೇ ಪಂದ್ಯಶ್ರೇಷ್ಠ ಪ್ರಶಸ್ತಿ. ಇದರೊಂದಿಗೆ ಅವರು ಮೂರು ಮಾದರಿಯಲ್ಲೂ 10 ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ 63 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಏಕದಿನದಲ್ಲಿ 38 ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರೆ, ಟಿ20ಯಲ್ಲಿ 15 ಬಾರಿ ಪ್ರಶಸ್ತಿ ಗೆದ್ದು ಅತಿಹೆಚ್ಚು ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಲ್ಲಿದೆ. ಅವರು 76 ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್ ಹಾಗೂ ರೋಹಿತ್ ಶರ್ಮಾ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 10ಕ್ಕೂ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಲು ವಿಫಲರಾಗಿದ್ದಾರೆ. ಆದರೆ ವಿರಾಟ್ ಕೊಹ್ಲಿ, ಇದೀಗ ಅಪರೂಪದ ಸಾಧನೆ ಮಾಡಿದ್ದಾರೆ.
ಸರಣಿಯಲ್ಲಿ ಆಡಿದ ಎಲ್ಲಾ 15 ಆಟಗಾರರ ವಿಕೆಟ್ ಕಬಳಿಸಿದ ಆರ್.ಅಶ್ವಿನ್!
ಅಹಮದಾಬಾದ್: ಭಾರತ ವಿರುದ್ಧದ 4 ಪಂದ್ಯಗಳ ಸರಣಿಯಲ್ಲಿ ಆಸ್ಪ್ರೇಲಿಯಾ ಒಟ್ಟು 15 ಆಟಗಾರರನ್ನು ಬಳಸಿತು. ಎಲ್ಲಾ 15 ಆಟಗಾರರು ಕನಿಷ್ಠ ಒಮ್ಮೆಯಾದರೂ ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್‌ಗೆ ಬಲಿಯಾಗಿದ್ದು ವಿಶೇಷ. ವಿಕೆಟ್ ಕೀಪರ್ ಅಲೆಕ್ಸ್ ಕೇರಿ ಅತಿಹೆಚ್ಚು ಅಂದರೆ 5 ಬಾರಿ ಅಶ್ವಿನ್‌ಗೆ ವಿಕೆಟ್ ನೀಡಿದರು.
ಟ್ರ್ಯಾವಿಸ್ ಹೆಡ್, ಉಸ್ಮಾನ್ ಖವಾಜ, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್‌ಕಂಬ್, ನೇಥನ್ ಲಯನ್, ಮ್ಯಾಟ್ ರೆನ್ಶಾ ತಲಾ 2 ಬಾರಿ, ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್, ಮಾರ್ನಸ್ ಲಬುಶೇನ್, ಕ್ಯಾಮರೂನ್ ಗ್ರೀನ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ಸ್ಕಾಟ್ ಬೋಲೆಂಡ್ ತಲಾ 1 ಬಾರಿ ಅಶ್ವಿನ್ ಬೌಲಿಂಗ್‌ನಲ್ಲಿ ಔಟಾದರು. ಅಶ್ವಿನ್ ಸರಣಿಯಲ್ಲಿ ಒಟ್ಟು 25 ವಿಕೆಟ್ ಉರುಳಿಸಿದರು. 2013ರಲ್ಲಿ ಆಸ್ಪ್ರೇಲಿಯಾ ಪರ ಆಡಿದ್ದ ಎಲ್ಲಾ 16 ಆಟಗಾರರ ವಿಕೆಟ್‌ಗಳನ್ನೂ ಅಶ್ವಿನ್ ಪಡೆದಿದ್ದರು.
Ind vs Aus ಕೊನೆಯ ಟೆಸ್ಟ್ ಡ್ರಾನಲ್ಲಿ ಅಂತ್ಯ, ಬಾರ್ಡರ್-ಗವಾಸ್ಕರ್ ಸರಣಿ ಗೆದ್ದ ಭಾರತ..!
ತವರಲ್ಲಿ ಸತತ 16ನೇ ಸರಣಿ ಗೆಲುವು!
ಕಳೆದೊಂದು ದಶಕದಿಂದ ತವರಿನಲ್ಲಿ ಪ್ರಾಬಲ್ಯ ಮುಂದುವರಿಸಿರುವ ಭಾರತಕ್ಕೆ ಇದು ಸತತ 16ನೇ ಸರಣಿ ಗೆಲುವು. 2013ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿ ಸೋತಿದ್ದ ಬಳಿಕ ಆ ಬಳಿಕ ಆಡಿರುವ ಎಲ್ಲಾ 16 ಸರಣಿಗಳಲ್ಲೂ ಜಯ ಸಾಧಿಸಿದೆ.
ಭಾರತಕ್ಕೆ ಸಿಗದ ನಂ.1 ಪಟ್ಟ!
ಈ ಟೆಸ್ಟ್‌ನಲ್ಲಿ ಭಾರತ ಗೆದ್ದಿದ್ದರೆ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರುತ್ತಿತ್ತು. ಜೊತೆಗೆ ಏಕಕಾಲದಲ್ಲಿ ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಮಾದರಿಗಳಲ್ಲಿ ಅಗ್ರಸ್ಥಾನ ಪಡೆದ ವಿಶ್ವದ 2ನೇ ತಂಡ ಎನ್ನುವ ಹಿರಿಮೆಗೆ ಪಾತ್ರವಾಗುತ್ತಿತ್ತು. ಭಾರತದ ಆ ಕನಸು ಈಡೇರಲಿಲ್ಲ.
4 ಸರಣಿ ಜಯ, 1 ಸೋಲು, 1 ಡ್ರಾ
ಭಾರತ 2021-23ರ ಅವಧಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಿದ 6 ಸರಣಿಗಳಲ್ಲಿ 4ರಲ್ಲಿ ಜಯಿಸಿದರೆ, ತಲಾ 1 ಸೋಲು, ಡ್ರಾ ಕಂಡಿತು. ತವರಿನಲ್ಲಿ ಆಸ್ಪ್ರೇಲಿಯಾ ವಿರುದ್ಧ 2-1, ನ್ಯೂಜಿಲೆಂಡ್ ವಿರುದ್ಧ 1-0, ಶ್ರೀಲಂಕಾ ವಿರುದ್ಧ 2-0ಯಲ್ಲಿ ಸರಣಿಗಳನ್ನು ಗೆದ್ದ ಭಾರತ, ಬಾಂಗ್ಲಾದೇಶದಲ್ಲಿ 2-0ಯಲ್ಲಿ ಸರಣಿ ವಶಪಡಿಸಿಕೊಂಡಿತು. ಇಂಗ್ಲೆಂಡ್‌ನಲ್ಲಿ ನಡೆದ 5 ಪಂದ್ಯಗಳ ಸರಣಿಯನ್ನು 2-2ರಲ್ಲಿ ಡ್ರಾ ಮಾಡಿಕೊಂಡ ಭಾರತ, ದಕ್ಷಿಣ ಆಫ್ರಿಕಾದಲ್ಲಿ ನಡೆದ 3 ಪಂದ್ಯಗಳ ಸರಣಿಯಲ್ಲಿ 1-2ರ ಸೋಲು ಕಂಡಿತ್ತು. ಒಟ್ಟು 18 ಟೆಸ್ಟ್‌ಗಳಲ್ಲಿ 10 ಜಯ, 5 ಸೋಲು, 3 ಡ್ರಾ ಕಂಡಿತು.
ವಿಶ್ವ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಶೇ.66.67 ಅಂಕಗಳೊಂದಿಗೆ ಆಸ್ಪ್ರೇಲಿಯಾಗೆ ಮೊದಲ ಸ್ಥಾನ ಪಡೆಯಿತು. ಆಸೀಸ್ ಆಡಿದ 19 ಪಂದ್ಯಗಳಲ್ಲಿ 11 ಜಯ, 3 ಸೋಲು, 5 ಡ್ರಾ ಸಾಧಿಸಿತು. ಇನ್ನು ಶೇ.58.80 ಅಂಕ ಪಡೆದ ಭಾರತಕ್ಕೆ 2ನೇ ಸ್ಥಾನ ದೊರೆಯಿತು.
