"ಇಂಗ್ಲೆಂಡ್ ಈಗಲೂ ಕ್ವಾಲಿಫೈ ಆಗಬಹುದು...": ಮತ್ತೆ ಮೈಕಲ್ ವಾನ್ ಕಾಲೆಳೆದ ಜಾಫರ್..! ಟ್ವೀಟ್ ವೈರಲ್
ಇಂಗ್ಲೆಂಡ್ ತಂಡವು ಗ್ರೂಪ್ ಹಂತದಲ್ಲಿ ಇನ್ನುಳಿದ 3 ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಮೇಲೇರುವ ಮೂಲಕ ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.
ಬೆಂಗಳೂರು(ಅ.31): ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನವನ್ನು ಮುಂದುವರೆಸಿದ್ದು, ಬಹುತೇಕ ಸೆಮೀಸ್ ರೇಸ್‌ನಿಂದಲೂ ಹೊರಬಿದ್ದಂತೆ ಆಗಿದೆ. ಇದೀಗ ಭಾರತ ಎದುರು ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡವು 100 ರನ್ ಅಂತರದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಅವರನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್(Wasim Jaffer) ಟ್ರೋಲ್ ಮಾಡಿದ್ದಾರೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ.
ಭಾನುವಾರ ಲಖನೌದ ಏಕಾನಾ ಮೈದಾನದಲ್ಲಿ ಭಾರತ ಹಾಗೂ ಇಂಗ್ಲೆಂಡ್(India vs England) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ರೋಹಿತ್ ಶರ್ಮಾ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿತ್ತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಶಮಿ ಮಾರಕ ದಾಳಿಗೆ ತತ್ತರಿಸುವ ಮೂಲಕ ಕೇವಲ 129 ರನ್‌ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ಟೀಂ ಇಂಡಿಯಾ(Team India), ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 6 ಪಂದ್ಯಗಳನ್ನು ಜಯಿಸುವ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದು, ಸೆಮೀಸ್ ರೇಸ್‌ಗೆ ಈಗಾಗಲೇ ಒಂದು ಹೆಜ್ಜೆಯಿಟ್ಟಾಗಿದೆ. ಇನ್ನೊಂದೆಡೆ ಈ ಬಾರಿಯ ವಿಶ್ವಕಪ್‌ನಲ್ಲಿ ಸೆಮೀಸ್‌ಗೇರಬಲ್ಲ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್ ತಂಡವು ತಾನಾಡಿದ ಆರು ಪಂದ್ಯಗಳ ಪೈಕಿ ಕೇವಲ ಒಂದು ಗೆಲುವು ಹಾಗೂ 5 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿಯೇ ಉಳಿದುಕೊಳ್ಳುವ ಮೂಲಕ ಮುಖಭಂಗ ಅನುಭವಿಸಿದೆ.
'ಇದೇ ತಂಡ ವಿಶ್ವಕಪ್ ಗೆಲ್ಲಲಿದೆ': 2023ರ ಒನ್‌ಡೇ ವಿಶ್ವಕಪ್ ಫೈನಲ್ ಫಲಿತಾಂಶ ಭವಿಷ್ಯ ನುಡಿದ ನೇಥನ್ ಲಯನ್..!
ಇನ್ನು ಏಕದಿನ ವಿಶ್ವಕಪ್ ಟೂರ್ನಿ ನಡೆಯುತ್ತಿರುವ ವೇಳೆಯಲ್ಲಿಯೇ ಐಸಿಸಿ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಲ್ಗೊಳ್ಳುವ ತಂಡಗಳ ಅರ್ಹತೆಯನ್ನು ಪ್ರಕಟಿಸಿದೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ತಂಡಗಳ ಬಗ್ಗೆ ಐಸಿಸಿ ಸ್ಪಷ್ಟನೆ ನೀಡಿದ್ದು, ಈ ಬಾರಿ ಏಕದಿನ ವಿಶ್ವಕಪ್‌ನ ಲೀಗ್ ಹಂತದಲ್ಲಿ ಅಗ್ರ-7 ಸ್ಥಾನ ಪಡೆಯುವ ತಂಡಗಳು ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ ಎಂದು ತಿಳಿಸಿದೆ.
ಟೂರ್ನಿಗೆ ಆತಿಥ್ಯ ವಹಿಸಲಿರುವ ಕಾರಣ ಪಾಕಿಸ್ತಾನ ನೇರವಾಗಿ ಪ್ರವೇಶ ಪಡೆಯಲಿದೆ. ಉಳಿದಂತೆ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಲೀಗ್ ಹಂತದ ಮುಕ್ತಾಯಕ್ಕೆ ಅಗ್ರಸ್ಥಾನ ಪಡೆಯುವ ಇತರ 7 ತಂಡಗಳು ಚಾಂಪಿಯನ್ಸ್ ಟ್ರೋಫಿ ಟಿಕೆಟ್ ಪಡೆಯಲಿವೆ. ಪಾಕಿಸ್ತಾನ ಅಗ್ರ-7ರಲ್ಲಿ ಸ್ಥಾನ ಪಡೆದರೆ ಆಗ, 8ನೇ ಸ್ಥಾನ ಗಳಿಸುವ ತಂಡಕ್ಕೂ ಅರ್ಹತೆ ಸಿಗಲಿದೆ. ಈ ಬಾರಿಯ ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾಗಿರುವ ವೆಸ್ಟ್‌ಇಂಡೀಸ್, ಐರ್ಲೆಂಡ್, ಜಿಂಬಾಬ್ವೆ 2025ರ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡುವುದಿಲ್ಲ ಎನ್ನುವುದು ಖಚಿತವಾಗಿದೆ.
'ದೇಶಕ್ಕೆ ದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..?' ವೇಗಿ ಮೊಹಮ್ಮದ್ ಶಮಿಯ ಹೇಳಿಕೆ ಈಗ ವೈರಲ್..!
ಇನ್ನು ಐಸಿಸಿ ಈ ಪ್ರಕಟಣೆ ಹೊರಡಿಸಿದ ಬೆನ್ನಲ್ಲೇ ಟ್ವೀಟ್ ಮಾಡಿರುವ ವಾಸೀಂ ಜಾಫರ್, "ಚಿಯರ್ ಅಪ್ ಮೈಕಲ್ ವಾನ್. ನನ್ನ ಪ್ರಕಾರ ಇಂಗ್ಲೆಂಡ್ ಈಗಲೂ ಅರ್ಹತೆ ಪಡೆಯಬಹುದು.. ಅಂಕಪಟ್ಟಿಯಲ್ಲಿ ಟಾಪ್ ಸ್ಥಾನ ಪಡೆದು 2025ರ ಚಾಂಪಿಯನ್ಸ್ ಟ್ರೋಫಿಗೆ" ಎಂದು ಟ್ವೀಟ್ ಮಾಡಿ ಕಾಲೆಳೆದಿದ್ದಾರೆ.
ಇಂಗ್ಲೆಂಡ್ ತಂಡವು ಗ್ರೂಪ್ ಹಂತದಲ್ಲಿ ಇನ್ನುಳಿದ 3 ಪಂದ್ಯಗಳನ್ನು ಗೆದ್ದು, ಅಂಕಪಟ್ಟಿಯಲ್ಲಿ ಮೇಲೇರುವ ಮೂಲಕ ಪಾಕಿಸ್ತಾನದಲ್ಲಿ ನಡೆಯಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.