ಮುಂಬೈ ಎದುರು ಬೃಹತ್ ಮೊತ್ತ ಕಲೆಹಾಕಿದ ಸನ್‌ರೈಸರ್ಸ್ ಹೈದರಾಬಾದ್ಆಕರ್ಷಕ ಅರ್ಧಶತಕ ಸಿಡಿಸಿದ ಮಯಾಂಕ್ ಅಗರ್‌ವಾಲ್, ವಿವ್ರಾಂತ್ ಶರ್ಮಾ4 ವಿಕೆಟ್ ಕಬಳಿಸಿ ಮಿಂಚಿದ ಆಕಾಶ್ ಮದ್ವಾಲ್
ಮುಂಬೈ(ಮೇ.21): ಕನ್ನಡಿಗ ಮಯಾಂಕ್ ಅಗರ್‌ವಾಲ್(83) ಹಾಗೂ ವಿವ್ರಾಂತ್ ಶರ್ಮಾ(69) ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದ್ದು, ಮುಂಬೈ ಇಂಡಿಯನ್ಸ್‌ಗೆ ಕಠಿಣ ಗುರಿ ನೀಡಿದೆ. ರೋಹಿತ್ ಪಡೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೇ, ಶತಾಯಗತಾಯ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಕಳೆದ ಕೆಲ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ ಮಯಾಂಕ್ ಅಗರ್‌ವಾಲ್ ಹಾಗೂ ವಿವ್ರಾಂತ್ ಶರ್ಮಾ ಆಕರ್ಷಕ ಜತೆಯಾಟವಾಡುವ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಪವರ್ ಪ್ಲೇ ನಲ್ಲಿ ಈ ಜೋಡಿ 53 ರನ್‌ಗಳ ಜತೆಯಾಟವಾಡಿತು.
ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಈ ಜೋಡಿ, ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿಬಿಟ್ಟು ಬ್ಯಾಟ್ ಬೀಸಲಾರಂಭಿಸಿತು. ವಿವ್ರಾಂತ್ ಶರ್ಮಾ ತಾವಾಡಿದ ಮೊದಲ ಇನಿಂಗ್ಸ್‌ನಲ್ಲಿಯೇ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ವಿವ್ರಾಂತ್ 36 ಎಸೆತಗಳನ್ನು ಎದುರಿಸಿ ಚೊಚ್ಚಲ ಅರ್ಧಶತಕ ಪೂರೈಸಿದರು. ಮೊದಲ ವಿಕೆಟ್‌ಗೆ ವಿವ್ರಾಂತ್ ಶರ್ಮಾ ಹಾಗೂ ಮಯಾಂಕ್ ಅಗರ್‌ವಾಲ್ ಜೋಡಿ 13.5 ಓವರ್‌ಗಳಲ್ಲಿ 140 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟಿತು.
ಆಕರ್ಷಕ ಬ್ಯಾಟಿಂಗ್ ನಡೆಸಿದ ವಿವ್ರಾಂತ್ ಶರ್ಮಾ, 47 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 69 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಮಯಾಂಕ್ ಅಗರ್‌ವಾಲ್ ಕೂಡಾ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದರು. ಅಂತಿಮವಾಗಿ ಅಗರ್‌ವಾಲ್ 46 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್ ಬಾರಿಸಿ ಆಕಾಶ್ ಮದ್ವಾಲ್‌ಗೆ ಎರಡನೇ ಬಲಿಯಾದರು.
IPL 2023 ಸನ್‌ರೈಸರ್ಸ್ ಎದುರಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ
ಸನ್‌ರೈಸರ್ಸ್ ರನ್ ಗತಿಗೆ ಬ್ರೇಕ್ ಹಾಕಿದ ಮುಂಬೈ: ಸನ್‌ರೈಸರ್ಸ್ ಹೈದರಬಾದ್ ತಂಡವು 16 ಓವರ್ ಅಂತ್ತದ ವೇಳೆಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 168 ರನ್ ಬಾರಿಸಿತ್ತು. ಹೀಗಾಗಿ ಮುಂಬೈ ಎದುರು ಸನ್‌ರೈಸರ್ಸ್ ಹೈದರಾಬಾದ್ ತಂಡವು ಅನಾಯಾಸವಾಗಿ 200+ ರನ್ ದಾಖಲಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಆಕಾಶ್ ಮದ್ವಾಲ್ ಹಾಗೂ ಕ್ರಿಸ್ ಜೋರ್ಡನ್ ಮಾರಕ ದಾಳಿ ನಡೆಸುವ ಮೂಲಕ ಸನ್‌ರೈಸರ್ಸ್ ರನ್ ವೇಗಕ್ಕೆ ಬ್ರೇಕ್ ಹಾಕಿದರು. ಸನ್‌ರೈಸರ್ಸ್ ಹೈದರಾಬಾದ್ ತಂಡವು ಕೊನೆಯ 4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 32 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್ ಪರ ಆಕಾಶ್ ಮದ್ವಾಲ್ 37 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದರೆ, ಡೆತ್ ಓವರ್ ಸ್ಪೆಷಲಿಸ್ಟ್ ಕ್ರಿಸ್ ಜೋರ್ಡನ್ 42 ರನ್ ನೀಡಿ ಒಂದು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು.
