ವಾಂಖೇಡೆ ಮೈದಾನದಲ್ಲಿಂದು ಮುಂಬೈ-ಹೈದರಾಬಾದ್ ಮುಖಾಮುಖಿಟಾಸ್ ಗೆದ್ದ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆಉಭಯ ತಂಡಗಳಲ್ಲಿ ಮಹತ್ವದ ಬದಲಾವಣೆ

ಮುಂಬೈ(ಮೇ.21): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 69ನೇ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಈ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ

ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯಕ್ಕೆ ಇಲ್ಲಿನ ವಾಂಖೇಡೆ ಮೈದಾನ ಆತಿಥ್ಯವನ್ನು ವಹಿಸಿದೆ. ಮುಂಬೈ ಇಂಡಿಯನ್ಸ್ ಪರ ಈ ಪಂದ್ಯದಿಂದ ಹೃತ್ತಿಕ್ ಶೋಕಿನ್ ಹೊರಬಿದ್ದಿದ್ದು, ಕುಮಾರ ಕಾರ್ತಿಕೇಯ ತಂಡ ಕೂಡಿಕೊಂಡಿದ್ದಾರೆ. ಇನ್ನು ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿ ರಾಹುಲ್ ತ್ರಿಪಾಠಿ, ಅಭಿಷೇಕ್‌ ಶರ್ಮಾ ಅವರನ್ನು ಕೈಬಿಡಲಾಗಿದ್ದು, ಕನ್ನಡಿಗ ಮಯಾಂಕ್ ಅಗರ್‌ವಾಲ್ ಹಾಗೂ ವಿವ್ರಾಂತ್ ಶರ್ಮಾ ತಂಡ ಕೂಡಿಕೊಂಡಿದ್ದಾರೆ. ಇನ್ನು ಮಾರಕ ವೇಗಿ ಉಮ್ರಾನ್ ಮಲಿಕ್ ಕೂಡಾ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.

IPL 2023 ಪ್ಲೇ ಆಫ್‌ ಪ್ರವೇಶಿಸುತ್ತಾ ಮುಂಬೈ ಇಂಡಿಯನ್ಸ್..?

ಪ್ಲೇ ಆಫ್ ಹೊಸ್ತಿಲಲ್ಲಿ ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಸದ್ಯ 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲು ಸಹಿತ 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇನ್ನು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕೂಡಾ ಇಷ್ಟೇ ಗೆಲುವು ಹಾಗೂ ಸೋಲು ಅನುಭವಿಸಿದ್ದರೂ, ನೆಟ್‌ ರನ್‌ರೇಟ್ ಉತ್ತಮವಾಗಿದ್ದರಿಂದಾಗಿ ಅಂಕಪಟ್ಟಿಯಲ್ಲಿ ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿವೆ. ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡವು, ಇಂದು ಸನ್‌ರೈಸರ್ಸ್ ಎದುರು ಗೆಲುವು ಸಾಧಿಸಿ, ಆರ್‌ಸಿಬಿ ತಂಡವು ಗುಜರಾತ್ ಎದುರು ಮುಗ್ಗರಿಸಿದರೆ, ರೋಹಿತ್ ಶರ್ಮಾ ಪಡೆ 4ನೇ ತಂಡವಾಗಿ ಐಪಿಎಲ್ ಪ್ಲೇ ಆಫ್‌ಗೆ ಲಗ್ಗೆಯಿಡಲಿದೆ.

ಮುಂಬೈ ಇಂಡಿಯನ್ಸ್ ತಂಡವು ಆರ್‌ಸಿಬಿ ತಂಡವನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಲು ಕನಿಷ್ಠ 81+ಕ್ಕೂ ಅಧಿಕ ಅಂತರದ ಗೆಲುವು ಸಾಧಿಸಬೇಕಿತ್ತು. ಇದೀಗ ಬೌಲಿಂಗ್ ಆಯ್ದುಕೊಂಡಿರುವುದರಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ನೀಡುವ ಗುರಿಯನ್ನು ಕೇವಲ 11.4 ಓವರ್‌ಗಳಲ್ಲಿ ತಲುಪಿದರೆ, ಆರ್‌ಸಿಬಿಯನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಲು ಸಾಧ್ಯವಾಗಲಿದೆ. 

ತಂಡಗಳು ಹೀಗಿವೆ ನೋಡಿ

ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಕ್ರಿಸ್ ಜೋರ್ಡನ್‌, ಪೀಯೂಸ್ ಚಾವ್ಲಾ, ಜೇಸನ್ ಬೆಹನ್‌ಡ್ರಾಫ್, ಆಕಾಶ್ ಮದ್ವಾಲ್, ಕುಮಾರ್ ಕಾರ್ತಿಕೇಯ.

ಸನ್‌ರೈಸರ್ಸ್ ಹೈದರಾಬಾದ್:
ಮಯಾಂಕ್‌ ಅಗರ್‌ವಾಲ್, ವಿವ್ರಾಂತ್ ಶರ್ಮಾ, ಏಯ್ಡನ್ ಮಾರ್ಕ್‌ರಮ್(ನಾಯಕ), ಹೆನ್ರಿಚ್ ಕ್ಲಾಸೆನ್(ವಿಕೆಟ್ ಕೀಪರ್), ಹ್ಯಾರಿ ಬ್ರೂಕ್, ಗ್ಲೆನ್ ಫಿಲಿಫ್ಸ್, ಸನ್ವೀರ್ ಸಿಂಗ್, ಉಮ್ರಾನ್ ಮಲಿಕ್, ಮಯಾಂಕ್ ದಾಗರ್, ಭುವನೇಶ್ವರ್ ಕುಮಾರ್, ನಿತೀಶ್ ರೆಡ್ಡಿ.

ಪಂದ್ಯ ಆರಂಭ: ಮಧ್ಯಾಹ್ನ 3.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌/ಜಿಯೋ ಸಿನಿಮಾ