Asianet Suvarna News Asianet Suvarna News

ಕುಂಬ್ಳೆ ಬಳಿಕ ತಾವೇಕೆ ಟೀಂ ಇಂಡಿಯಾ ಹೆಡ್ ಕೋಚ್ ಆಗಲಿಲ್ಲ? ಅಚ್ಚರಿಯ ಹೇಳಿಕೆ ನೀಡಿದ ವಿರೇಂದ್ರ ಸೆಹ್ವಾಗ್

* ತಾವೇಕೆ ಟೀಂ ಇಂಡಿಯಾ ಹೆಡ್ ಕೋಚ್ ಆಗಲಿಲ್ಲವೆಂದು ತುಟಿಬಿಚ್ಚಿದ ವಿರೇಂದ್ರ ಸೆಹ್ವಾಗ್
* ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾ ಹೆಡ್‌ ಕೋಚ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದ ಸೆಹ್ವಾಗ್
* ಮೊದಲ ಬಾರಿಗೆ ಕೋಚ್ ಆಗದೇ ಇದ್ದಿದ್ದಕ್ಕೆ ಕಾರಣ ತಿಳಿಸಿದ ವೀರೂ

Virender Sehwag reveals why he didnt take up Team India head coach post after Anil Kumble kvn
Author
First Published Mar 21, 2023, 10:47 AM IST

ನವದೆಹಲಿ(ಮಾ.21): 2017ರಲ್ಲಿ ಅನಿಲ್‌ ಕುಂಬ್ಳೆ ಭಾರತ ತಂಡದ ಪ್ರಧಾನ ಕೋಚ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಆ ಹುದ್ದೆಗೇರಲು ಮುಂಚೂಣಿಯಲ್ಲಿದ್ದವರ ಪೈಕಿ ವೀರೇಂದ್ರ ಸೆಹ್ವಾಗ್‌ ಹೆಸರು ಕೂಡಾ ಇತ್ತು. ಆದರೆ ಸೆಹ್ವಾಗ್‌ ಯಾಕೆ ಕೋಚ್‌ ಆಗಲಿಲ್ಲ ಎನ್ನುವ ವಿಷಯ ಇದೀಗ ಬಹಿರಂಗಗೊಂಡಿದೆ. ಸ್ವತಃ ಸೆಹ್ವಾಗ್‌ ಈ ಬಗ್ಗೆ ತುಟಿ ಬಿಚ್ಚಿದ್ದಾರೆ. 

‘ವಿರಾಟ್‌ ಕೊಹ್ಲಿ ಜೊತೆ ಹೊಂದಾಣಿಕೆ ಸಾಧ್ಯವಾಗದ ಕಾರಣ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದರು. ಈ ವೇಳೆ ವಿರಾಟ್ ಕೊಹ್ಲಿಯ ಮನವಿ ಮೇರೆಗೆ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದೆ. ನಾನು ಕೋಚ್‌ ಆಗಿ ನೇಮಕಗೊಳ್ಳುವುದೂ ಖಚಿತವಾಗಿತ್ತು. ಆದರೆ ನಾನು ನನಗೆ ಬೇಕಿದ್ದ ಸಹಾಯಕ ಸಿಬ್ಬಂದಿ ಕೊಡಬೇಕು ಎಂದು ಷರತ್ತು ವಿಧಿಸಿದ್ದೆ. ಅದಕ್ಕೆ ಬಿಸಿಸಿಐ ಒಪ್ಪದ ಕಾರಣ ಕೋಚ್‌ ಆಗಲು ನಿರಾಕರಿಸಿದೆ’ ಎಂದು ಸೆಹ್ವಾಗ್‌ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಕನ್ನಡಿಗ ಅನಿಲ್ ಕುಂಬ್ಳೆ, 2016ರಲ್ಲಿ ಟೀಂ ಇಂಡಿಯಾ ಹೆಡ್‌ ಕೋಚ್ ಆಗಿ ನೇಮಕವಾಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಬರುಬರುತ್ತಾ ಟೀಂ ಇಂಡಿಯಾ ನಾಯಕರಾಗಿದ್ದ ವಿರಾಟ್ ಕೊಹ್ಲಿ ಜತೆ ಹೆಡ್ ಕೋಚ್ ಅನಿಲ್ ಕುಂಬ್ಳೆ ನಡುವೆ ಸೂಕ್ತ ಹೊಂದಾಣಿಕೆ ಏರ್ಪಡಲಿಲ್ಲ. ಹೀಗಾಗಿಯೇ 2017ರಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಅನಿಲ್ ಕುಂಬ್ಳೆ ತಮ್ಮ ಹೆಡ್‌ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇನ್ನು ದಶಕಗಳ ಕಾಲ ಟೀಂ ಇಂಡಿಯಾದ ಭಾಗವಾಗಿದ್ದ ವಿರೇಂದ್ರ ಸೆಹ್ವಾಗ್, ತಂಡದ ನಾಯಕರಾಗದಿದ್ದಕ್ಕೆ ಹಾಗೂ ಕೋಚ್‌ ಹುದ್ದೆಯು ಕೈ ತಪ್ಪಿದ್ದರ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೆಹ್ವಾಗ್, "ನಾನು ಟೀಂ ಇಂಡಿಯಾ ನಾಯಕರಾಗಿಲ್ಲ ಎನ್ನುವುದರ ಬಗ್ಗೆ ನನಗ್ಯಾವ ಬೇಸರವೂ ಇಲ್ಲ. ನಾನೇನು ಸಾಧಿಸಿದ್ದೇನೋ ಅದರ ಬಗ್ಗೆ ನನಗೆ ತೃಪ್ತಿಯಿದೆ. ನಜಾಫ್‌ಘಢದ ಸಣ್ಣ ರೈತ ಕುಟುಂಬದಿಂದ ಬಂದು ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಿದ್ದು ಸಣ್ಣ ಸಾಧನೆಯೇನಲ್ಲ. ನಾನು ಟೀಂ ಇಂಡಿಯಾ ನಾಯಕನಾಗಿದ್ದರೆ ಅಭಿಮಾನಿಗಳಿಂದ ಎಷ್ಟು ಪ್ರೀತಿ ವಿಶ್ವಾಸ ಸಿಗುತ್ತಿತ್ತೋ ಅಷ್ಟು ವಿಶ್ವಾಸವನ್ನು ಫ್ಯಾನ್ಸ್‌, ನಾನು ಓರ್ವ ಆಟಗಾರನಾಗಿಯೇ ನೀಡಿದ್ದಾರೆ" ಎಂದು ಹೇಳಿದ್ದಾರೆ. 

IPL ಹಣದಿಂದ ಯಾವ ಕಾರು ಖರೀದಿಸಬೇಕೆಂದು ಯೋಚಿಸುತ್ತಿದ್ದೆ: ರೋಹಿತ್‌ ಶರ್ಮಾ!

ಇನ್ನೊಂದು ಮುಖ್ಯವಾದ ವಿಚಾರ, ನಾನಾಗಿಯೇ ಟೀಂ ಇಂಡಿಯಾ ಹೆಡ್ ಕೋಚ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಿರಲಿಲ್ಲ. ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ನನ್ನನ್ನು ಸಂಪರ್ಕಿಸಿದ್ದರಿಂದಾಗಿ ನಾನು ಕೋಚ್ ಹುದ್ದೆಗೆ ಅರ್ಜಿಯನ್ನು ಹಾಕಿದ್ದೆ. ನಾವಾಗ ಮಾತುಕತೆ ನಡೆಸಿದೆವು. ಆಗ ಅಮಿತಾಬ್ ಚೌಧರಿಯವರು, ನೋಡಿ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವೆ ಹೊಂದಾಣಿಕೆಯಾಗುತ್ತಿಲ್ಲ. ಹೀಗಾಗಿ ನೀವು ಟೀಂ ಇಂಡಿಯಾ ಕೋಚ್ ಆಗಿ ಎಂದು ಕೇಳಿಕೊಂಡರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಅನಿಲ್ ಕುಂಬ್ಳೆ ಅವರ ಒಪ್ಪಂದಾವಧಿ ಅಂತ್ಯವಾಗಲಿದೆ. ಇದಾದ ಬಳಿಕ ನೀವು ಭಾರತ ತಂಡದ ಜತೆ ವೆಸ್ಟ್‌ ಇಂಡೀಸ್‌ ಪ್ರವಾಸ ಮಾಡಿ ಎಂದು ಕೇಳಿಕೊಂಡಿದ್ದರು.

ನಾನಾಗ ಎಸ್ ಅಥವಾ ನೋ ಎಂದು ಹೇಳಲಿಲ್ಲ. ಆದರೆ ನಾನು ಒಂದು ವೇಳೆ ಭಾರತ ತಂಡದ ಜತೆ ವೆಸ್ಟ್ ಇಂಡೀಸ್ ಪ್ರವಾಸ ಮಾಡಬೇಕಿದ್ದರೇ, ನನಗೆ ಬೇಕಾದ ಸಹಾಯಕ ಸಿಬ್ಬಂದಿಗಳು ಬೇಕು. ಸಹಾಯಕ ಕೋಚ್, ಬೌಲಿಂಗ್ ಕೋಚ್, ಬ್ಯಾಟಿಂಗ್ ಕೋಚ್ ಹಾಗೂ ಫೀಲ್ಡಿಂಗ್ ಕೋಚ್‌ ನನಗೆ ಬೇಕಾದವರು ಇರಬೇಕು. ನಾನು ಬಯಸುವ ಸಹಾಯಕ ಸಿಬ್ಬಂದಿಗಳು ನನ್ನ ಜತೆಗಿದ್ದರೆ ಮಾತ್ರ ನಾನು ವಿಂಡೀಸ್ ಪ್ರವಾಸ ಮಾಡುತ್ತೇನೆ ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ನನ್ನಿಷ್ಟದ ಸಹಾಯಕ ಸಿಬ್ಬಂದಿಗಳನ್ನು ನೀಡಲು ಬಿಸಿಸಿಐ ಒಲವು ತೋರಲಿಲ್ಲ. ಹೀಗಾಗಿಯೇ ನಾನು ಟೀಂ ಇಂಡಿಯಾ ಹೆಡ್ ಕೋಚ್ ಆಗಲಿಲ್ಲ ಎಂದು ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

Follow Us:
Download App:
  • android
  • ios