ಮೊದಲ ಐಪಿಎಲ್ ಹರಾಜು ಮೆಲುಕು ಹಾಕಿದ ರೋಹಿತ್ ಶರ್ಮಾ2008ರಲ್ಲಿ ಡೆಕನ್ ಚಾರ್ಜರ್ಸ್ ತಂಡವನ್ನು ಪ್ರತಿನಿಧಿಸಿದ್ದ ಹಿಟ್‌ಮ್ಯಾನ್ಐಪಿಎಲ್‌ನ ಯಶಸ್ವಿ ನಾಯಕರಾಗಿ ಹೊರಹೊಮ್ಮಿರುವ ರೋಹಿತ್ ಶರ್ಮಾ

ಮುಂಬೈ(ಮಾ.20): 16ನೇ ಆವೃತ್ತಿಯ ಐಪಿಎಲ್‌ಗೆ ಕೆಲವೇ ದಿನಗಳು ಬಾಕಿ ಇದ್ದು, 5 ಬಾರಿ ಮುಂಬೈ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿರುವ ನಾಯಕ ರೋಹಿತ್‌ ಶರ್ಮಾ ಮೊದಲ ಬಾರಿಗೆ ತಾವು ಹರಾಜಿನಲ್ಲಿ ಬಿಕರಿಯಾದ ಕ್ಷಣವನ್ನು ನೆನೆದಿದ್ದಾರೆ. 

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ನಡೆಸಿರುವ ಕಾರ್ಯಕ್ರಮವೊಂದರಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ ರೋಹಿತ್‌, ‘2008ರ ಹರಾಜಿನಲ್ಲಿ ಡೆಕ್ಕನ್‌ ಚಾರ್ಜ​ರ್ಸ್‌ ತಂಡ 7.5 ಲಕ್ಷ ಅಮೆರಿಕನ್‌ ಡಾಲರ್‌ಗೆ ನನ್ನನ್ನು ಖರೀದಿಸಿತು. 7.5 ಲಕ್ಷ ಡಾಲರ್‌ ಅಂದರೆ ರುಪಾಯಿ ಮೌಲ್ಯದಲ್ಲಿ ಎಷ್ಟಾಗಲಿದೆ ಎಂದೂ ನನಗೆ ಗೊತ್ತಿರಲಿಲ್ಲ. ಆದರೆ ಐಪಿಎಲ್‌ ಹಣದಿಂದ ಯಾವ ಐಷಾರಾಮಿ ಕಾರು ಖರೀದಿಸಬಹುದು ಎಂದು ಯೋಚಿಸುತ್ತಿದ್ದೆ’ ಎಂದಿದ್ದಾರೆ.

ರೋಹಿತ್ ಶರ್ಮಾ ಮೊದಲ ಐಪಿಎಲ್ ಟೂರ್ನಿ ಆಡುವಾಗ ಅವರಿಗೆ ಕೇವಲ 20 ವರ್ಷಗಳಾಗಿತ್ತು. ತಮಗೆ ಹರಾಜಿನಲ್ಲಿ ಸಿಕ್ಕಿದ ಹಣವನ್ನು ಏನು ಮಾಡಬೇಕು ಎನ್ನುವ ಸಣ್ಣ ಕಲ್ಪನೆಯನ್ನು ಹೊಂದಿರಲಿಲ್ಲ. ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 2008ರಿಂದ 2010ರವರೆಗೆ ಡೆಕ್ಕನ್ ಚಾರ್ಜರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ 2011ರ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು 2 ಮಿಲಿಯನ್ ಡಾಲರ್ ನೀಡಿ ರೋಹಿತ್ ಶರ್ಮಾ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಕಳೆದೊಂದು ದಶಕದಿಂದ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕವಾದ ರೋಹಿತ್ ಶರ್ಮಾ, ಆ ಬಳಿಕ ತಮ್ಮ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಂತೆ ಮಾಡುವ ಮೂಲಕ ಐಪಿಎಲ್‌ನ ಯಶಸ್ವಿ ನಾಯಕರಾಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ.

ವಿಲ್ ಯು ಮ್ಯಾರಿ ಮಿ, ಅಭಿಮಾನಿಗೆ ಗುಲಾಬಿ ನೀಡಿ ಪ್ರಪೋಸ್ ಮಾಡಿದ ರೋಹಿತ್ ಶರ್ಮಾ!

ಇನ್ನು ಇದೇ ವೇಳೆ ರೋಹಿತ್ ಶರ್ಮಾ ನಾಯಕರಾಗಿದ್ದು ಹೇಗೆ ಎನ್ನುವುದನ್ನು ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಆಗಿದ್ದ ಅನಿಲ್ ಕುಂಬ್ಳೆ ವಿವರಿಸಿದ್ದಾರೆ. "2013ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭವನ್ನು ಪಡೆದುಕೊಂಡಿರಲಿಲ್ಲ. ಆಗ ರಿಕಿ ಪಾಂಟಿಂಗ್ ತಂಡದ ನಾಯಕರಾಗಿದ್ದರು. ನಾವು ನಾಯಕತ್ವದಲ್ಲಿ ಬದಲಾವಣೆಯನ್ನು ತರಲೇಬೇಕಿತ್ತು. ಯಾಕೆಂದರೆ ತಂಡದಲ್ಲಿ ಕೇವಲ 4 ಮಂದಿ ವಿದೇಶಿ ಆಟಗಾರರು ಆಡಲು ಮಾತ್ರ ಅವಕಾಶವಿತ್ತು. ಹೀಗಾಗಿ ರಿಕಿ ಪಾಂಟಿಂಗ್ ಬದಲಾಗಿ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡಿದೆವೆ. ಇದರ ಯಶಸ್ಸು ತಂಡದ ಕೋಚ್ ಆಗಿದ್ದ ಜಾನ್ ರೈಟ್ ಅವರಿಗೆ ಸಲ್ಲುತ್ತದೆ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.

ದುರಾದೃಷ್ಟವಶಾತ್ ರಿಕಿ ಪಾಂಟಿಂಗ್ ಅವರ ಬ್ಯಾಟಿಂಗ್ ಫಾರ್ಮ್ ಕೂಡಾ ಕೈಕೊಟ್ಟಿತ್ತು. ಮೊದಲ 5-6 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 4 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ನಾವಾಗ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕಿತ್ತು. ಆ ಸಂದರ್ಭದಲ್ಲಿ ನಾನು, ಜಾನ್‌ ರೈಟ್ ಹಾಗೂ ತಂಡದ ಮಾಲೀಕರು ಮಾತುಕತೆ ನಡೆಸಿ ತೀರ್ಮಾನಿಸಿದೆವು. ನಾನಾಗ ನೇರವಾಗಿ ರೋಹಿತ್ ಶರ್ಮಾ ಇದ್ದ ರೂಂಗೆ ತೆರಳಿ, ನೀವು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಳ್ಳುತ್ತೀರಾ ಎಂದು ಕೇಳಿದೆ. ಆಗ, ಖಂಡಿತವಾಗಿಯೂ ನಾನು ಸಿದ್ದನಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದರು ಎಂದು ಜಂಬೋ ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇದೀಗ ಮಾರ್ಚ್‌ 31ರಿಂದ ಆರಂಭವಾಗಲಿರುವ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಲು ಮುಂಬೈ ಇಂಡಿಯನ್ಸ್ ತಂಡವು ಎದುರು ನೋಡುತ್ತಿದೆ.