ನವದೆಹಲಿ(ನ.18): ಭಾರತ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿರುವ ಬಾಂಗ್ಲಾದೇಶ ಇದೀಗ 2ನೇ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ತಂಡ ಮೊದಲ ಸೋಲಿನ ಆಘಾತದಿಂದ ಹೊರಬಂದಿಲ್ಲ. ಆದರೆ ಬಾಂಗ್ಲಾ ವೇಗಿ ಅಬು ಜಾಯೆದ್ ಆತ್ಮವಿಶ್ವಾಸ ಹೆಚ್ಚಾಗಿದೆ. ಇದಕ್ಕೆ ಕಾರಣ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಕಬಳಿಸಿದ ಕೊಹ್ಲಿ ವಿಕೆಟ್.

ಇದನ್ನೂ ಓದಿ: ಪಿಂಕ್‌ ಬಾಲ್‌ ಟೆಸ್ಟ್‌ಗೆ ಇಂದೋರ್‌ನಲ್ಲೇ ಅಭ್ಯಾ​ಸ

ವಿಶ್ವದ ಬೆಸ್ಟ್ ಬ್ಯಾಟ್ಸ್‌ಮನ್, ರನ್ ಮಶೀನ್ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದೇ ಉತ್ತಮ ಅನುಭವ. ಹೀಗಿರುವಾಗ ಕೊಹ್ಲಿ ವಿಕೆಟ್ ಕಬಳಿಸಿದರೆ ಇನ್ನೇನು ಬೇಕು. ನನ್ನ ಕನಸು ನನಸಾದಂತೆ ಎಂದು ಅಬು ಜಾಯೆದ್ ಹೇಳಿದ್ದಾರೆ. ಪ್ರತಿ ಪಂದ್ಯದಲ್ಲೂ ದಿಟ್ಟ ಹೋರಾಟ ನೀಡುವ ಕೊಹ್ಲಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವುದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದಿದ್ದಾರೆ.

ಇದನ್ನೂ ಓದಿ: ಟೆಸ್ಟ್ ರ‍್ಯಾಂಕಿಂಗ್‌: ಟಾಪ್‌ 10ಗೆ ಲಗ್ಗೆಯಿಟ್ಟ ಶಮಿ..!

ಮೊದಲ ಪಂದ್ಯದಲ್ಲಿ ಹಲವು ತಪ್ಪುಗಳನ್ನು ಮಾಡಿದ್ದೇವೆ. ಈಗ ಅದನ್ನು ಚರ್ಚಿಸಿ ಪ್ರಯೋಜನವಿಲ್ಲ. ಹಲವು ಅವಕಾಶಗಳನ್ನು ಕೈಚೆಲ್ಲಿದ್ದೇವೆ.  ಮುಂದಿನ ಪಂದ್ಯಕ್ಕಾಗಿ ಅಭ್ಯಾ, ರಣತಂತ್ರ ರೂಪಿಸಬೇಕಿದೆ. ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ರೀತಿಯಲ್ಲಿ ಬೌಲಿಂಗ್ ಮಾಡಲು ಇಚ್ಚಿಸುತ್ತೇನೆ. ಶಮಿ ಬೌಲಿಂಗ್‌ನ್ನು ಗಮನಿಸಿದ್ದೇನೆ. ವೇರಿಯೇಶನ್, ಪಿಚ್ ಕಂಡೀಶನ್‌ಗೆ ಅನುಗುಣವಾಗಿ ಶಮಿ ಅತ್ಯುತ್ತಮ ದಾಳಿ ಸಂಘಟಿಸುತ್ತಾರೆ. ಶಮಿ ಬೌಲಿಂಗ್ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ಜಾಯೆದ್ ಹೇಳಿದ್ದಾರೆ.

ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 130 ರನ್ ಗೆಲುವು ಸಾಧಿಸಿತ್ತು. ಕನ್ನಡಿಗ ಮಯಾಂಕ್ ಅಗರ್ವಾಲ್ ದ್ವಿಶತಕ ಸಿಡಿಸಿ ಮಿಂಚಿದ್ದರು. ನವೆಂಬರ್ 22 ರಿಂದ 2ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಈ ಪಂದ್ಯ ಹಗಲು-ರಾತ್ರಿ ನಡೆಯಲಿದೆ.