ತವರಿನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಲು ನಾಲ್ವರು ಆಟಗಾರರ ಪ್ರಮುಖ ಪಾತ್ರವಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಮತ್ತು ಜೋಶ್ ಹೇಜಲ್‌ವುಡ್ ಅವರ ಅಮೋಘ ಪ್ರದರ್ಶನ ತಂಡಕ್ಕೆ ಜಯ ತಂದುಕೊಟ್ಟಿತು.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ತವರಿನಲ್ಲಿ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ತವರಿನಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿ ಕಂಗಾಲಾಗಿದ್ದ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಇದೀಗ ರಾಜಸ್ಥಾನ ರಾಯಲ್ಸ್ ಎದುರು 11 ರನ್ ಅಂತರದ ರೋಚಕ ಜಯ ಸಾಧಿಸಿದೆ. ಇದರ ಜತೆಗೆ ಮತ್ತೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದೆ.
ತವರಿನಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಗೆಲ್ಲಲು ಆರ್‌ಸಿಬಿ ಸಂಘಟಿತ ಪ್ರದರ್ಶನ ತೋರಿತಾದರೂ, ಈ ನಾಲ್ವರು ಆಟಗಾರರು ಗೆಲುವಿನ ನಿಜವಾದ ರೂವಾರಿಗಳು ಎನಿಸಿಕೊಂಡರು. ಅಷ್ಟಕ್ಕೂ ಯಾರು ಆ 4 ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಇದನ್ನೂ ಓದಿ: ಹೌ ಈಸ್ ದ 'JOSH' ಚಿನ್ನಸ್ವಾಮಿಯಲ್ಲಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ!
1. ವಿರಾಟ್ ಕೊಹ್ಲಿ: ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ, ಕೊನೆಗೂ ತವರಿನ ಮೈದಾನದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾದರು. ಈ ಬಾರಿ ತವರಿನಾಚೆಯೇ ಹೆಚ್ಚು ಅಬ್ಬರಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಬ್ಯಾಟ್, ಇದೀಗ ತವರಿನ ಮೈದಾನದಲ್ಲಿ ಮಹತ್ವದ ಪಂದ್ಯದಲ್ಲಿ ಕೊಹ್ಲಿ ಆಕರ್ಷಕ ಫಿಫ್ಟಿ ಬಾರಿಸಿ ಮಿಂಚಿದರು. ಕೊಹ್ಲಿ ಕೇವಲ 42 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಮುಗಿಲೆತ್ತರದ ಬೌಂಡರಿ ಬಾರಿಸುವ ಅಮೂಲ್ಯ 70 ರನ್ ಗಳಿಸಿ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು.
2. ದೇವದತ್ ಪಡಿಕ್ಕಲ್: ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ದೇವದತ್ ಪಡಿಕ್ಕಲ್ ಮತ್ತೊಂದು ಸೊಗಸಾದ ಇನ್ನಿಂಗ್ಸ್ ಆಡುವಲ್ಲಿ ಯಶಸ್ವಿಯಾದರು. ಆರಂಭದಲ್ಲಿ ಕೊಂಚ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಎಡಗೈ ಬ್ಯಾಟರ್ ಪಡಿಕ್ಕಲ್, ಆ ಬಳಿಕ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಪಡಿಕ್ಕಲ್ 27 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ 50 ರನ್ ಸಿಡಿಸಿ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
3. ಜಿತೇಶ್ ಶರ್ಮಾ: ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ, ತಮ್ಮ ಮ್ಯಾಚ್ ಫಿನಿಶಿಂಗ್ ಬ್ಯಾಟಿಂಗ್ ಅಚ್ಚುಕಟ್ಟಾಗಿ ನಿಭಾಯಿಸಿದರು. ಕೇವಲ 10 ಎಸೆತಗಳನ್ನು ಎದುರಿಸಿದ ಜಿತೇಶ್ ಶರ್ಮಾ 4 ಬೌಂಡರಿ ಸಹಿತ ಅಜೇಯ 20 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇನ್ನು ವಿಕೆಟ್ ಹಿಂದೆ ಅದ್ಭುತ ಕೌಶಲ್ಯ ಪ್ರದರ್ಶಿಸಿದ ಜಿತೇಶ್ ಮೂರು ಕ್ಯಾಚ್ ಹಾಗೂ ಒಂದು ರನೌಟ್ ಮಾಡಿ ಗಮನ ಸೆಳೆದರು. ಅದರಲ್ಲೂ ಮಹತ್ವದ ಘಟ್ಟದಲ್ಲಿ ಧೃವ್ ಜುರೆಲ್ ಕ್ಯಾಚ್ ಡಿಆರ್‌ಎಸ್ ನಿರ್ಧಾರ ಪಂದ್ಯದ ದಿಕ್ಕೆ ಬದಲಿಸುವಂತೆ ಮಾಡಿತು.
ಇದನ್ನೂ ಓದಿ: ಬೆಂಗಳೂರಲ್ಲಿ ಜಾವೆಲಿನ್ ಕೂಟ: ನೀರಜ್ ಚೋಪ್ರಾ ಆಹ್ವಾನ ತಿರಸ್ಕರಿಸಿದ ಪಾಕಿಸ್ತಾನದ ನದೀಂ ಅರ್ಶದ್!
4. ಜೋಶ್ ಹೇಜಲ್‌ವುಡ್: ಆಸೀಸ್ ಮೂಲದ ಅನುಭವಿ ವೇಗಿ ಜೋಶ್ ಹೇಜಲ್‌ವುಡ್, ತಾವು ಯಾಕೆ ವರ್ಲ್ಡ್ ಕ್ಲಾಸ್ ಬೌಲರ್ ಎನ್ನುವುದನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಅನಾವರಣ ಮಾಡಿದರು. ಪವರ್ ಪ್ಲೇ ಓವರ್‌ಗಳಲ್ಲಿ ಕೊಂಚ ದುಬಾರಿಯಾದರೂ, ಆ ಬಳಿಕ ಯಶಸ್ವಿ ಜೈಸ್ವಾಲ್, ಶಿಮ್ರೊನ್ ಹೆಟ್ಮೇಯರ್, ಧೃವ್ ಜುರೆಲ್ ಹಾಗೂ ಜೋಫ್ರಾ ಆರ್ಚರ್ ವಿಕೆಟ್ ಕಬಳಿಸಿ ಮಿಂಚಿದರು. ಅದರಲ್ಲೂ ಕೊನೆಯ ಎರಡು ಓವರ್‌ನಲ್ಲಿ ರಾಜಸ್ಥಾನ ಗೆಲ್ಲಲು 18 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ 19ನೇ ಓವರ್ ಬೌಲಿಂಗ್ ಮಾಡಿ ಕೇವಲ ಒಂದು ರನ್ ನೀಡಿ ಎರಡು ವಿಕೆಟ್ ಕಬಳಿಸುವ ಮೂಲಕ ಪಂದ್ಯ ಆರ್‌ಸಿಬಿ ಕಡೆ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.
