ರೋಹಿತ್ ಶರ್ಮಾ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಬಿಸಿಸಿಐಗೆ ಈ ಬಗ್ಗೆ ಮಾಹಿತಿ ನೀಡಿರುವ ಕೊಹ್ಲಿ, ಮುಂಬರುವ ಇಂಗ್ಲೆಂಡ್ ಸರಣಿಯ ಮೊದಲು ನಿವೃತ್ತಿ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಮನವಿ ಮಾಡಲಾಗಿದೆ.
ನವದೆಹಲಿ: ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮತ್ತೋರ್ವ ತಾರಾ ಆಟಗಾರ ವಿರಾಟ್ ಕೊಹ್ಲಿ ಕೂಡಾ ಟೆಸ್ಟ್ ಮಾದರಿಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಇದರ ಬಗ್ಗೆ ಅವರು ಈಗಾಗಲೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಮಾಹಿತಿ ನೀಡಿದ್ದಾರೆ ಎಂದು ಪ್ರತಿಷ್ಠಿತ ಮಾಧ್ಯಮಗಳಲ್ಲಿ ವರದಿಯಾಗಿದೆ.
‘ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಕೊಹ್ಲಿ ನಿರ್ಧರಿಸಿದ್ದಾರೆ ಮತ್ತು ಅದರ ಬಗ್ಗೆ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳು ಮಹತ್ವದ ಇಂಗ್ಲೆಂಡ್ ಸರಣಿ ನಡೆಯಲಿರುವ ಕಾರಣ ತಮ್ಮ ನಿರ್ಧಾರ ಪುನರ್‌ಪರಿಶೀಲಿಸುವಂತೆ ಕೊಹ್ಲಿಗೆ ಬಿಸಿಸಿಐ ಮನವಿ ಮಾಡಿದೆ. ಅದರ ಬಗ್ಗೆ ಕೊಹ್ಲಿ ಇನ್ನೂ ನಿರ್ಧಾರ ತಿಳಿಸಿಲ್ಲ’ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.
ಕಳೆದ ವರ್ಷಾಂತ್ಯದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ನಿವೃತ್ತಿ ಬಗ್ಗೆ ವದಂತಿ ಹರಿದಾಡುತ್ತಿದ್ದರೂ, ಇಂಗ್ಲೆಂಡ್ ಸರಣಿ ಸೇರಿದಂತೆ ಒಂದೆರಡು ವರ್ಷ ಟೆಸ್ಟ್‌ನಲ್ಲಿ ಮುಂದುವರಿಯಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು. ಒಂದು ವೇಳೆ ಕೊಹ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಇಂಗ್ಲೆಂಡ್ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಗಳ ಕೊರತೆ ಎದುರಾಗಲಿದೆ. 36 ವರ್ಷದ ಕೊಹ್ಲಿ ಭಾರತ ಪರ 123 ಟೆಸ್ಟ್ ಆಡಿದ್ದು, 46.85ರ ಸರಾಸರಿಯಲ್ಲಿ 9,230 ರನ್ ಕಲೆಹಾಕಿದ್ದಾರೆ.
ಏಕದಿನ ವಿಶ್ವಕಪ್‌ಗಾಗಿ ಟೆಸ್ಟ್ ನಿವೃತ್ತಿ ನಿರ್ಧಾರ?
ಕಳೆದ ವರ್ಷ ಟಿ20 ವಿಶ್ವಕಪ್ ಗೆಲುವಿನ ಬಳಿಕ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು. ಸದ್ಯ ಟೆಸ್ಟ್‌ಗೂ ವಿದಾಯ ಹೇಳಿ 2027ರ ವಿಶ್ವಕಪ್‌ನತ್ತ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇಷ್ಟು ಬೇಗ ಟೆಸ್ಟ್ ತಂಡ ತೊರೆಯಬೇಡಿ ಎಂದು ಲಾರಾ ಮನವಿ:
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಲು ಮುಂದಾಗಿದ್ದಾರೆ ಎನ್ನುವ ವದಂತಿ ವೈರಲ್ ಆಗುತ್ತಿದ್ದಂತೆಯೇ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಬ್ರಿಯನ್ ಲಾರಾ, ಕೊಹ್ಲಿಗೆ ಇಷ್ಟು ಬೇಗ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಲಾರಾ, ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ಬೇಕು. ಅವರನ್ನು ಮನವೊಲಿಸಲಿದ್ದೇವೆ. ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸುವುದಿಲ್ಲ. ಅವರನ್ನು ಇನ್ನುಳಿದ ಟೆಸ್ಟ್ ವೃತ್ತಿಜೀವನದಲ್ಲಿ ವಿರಾಟ್ ಕೊಹ್ಲಿ 60+ ಸರಾಸರಿಯಲ್ಲಿ ರನ್ ಗಳಿಸಲಿದ್ದಾರೆ ಎಂದು ಬ್ರಿಯನ್ ಲಾರಾ ಪೋಸ್ಟ್ ಮಾಡಿದ್ದಾರೆ.
ಅತಿಯಾದ ಒತ್ತಡದಿಂದಾಗಿ ನಾಯಕತ್ವ ತ್ಯಜಿಸಿದೆ: ಕೊಹ್ಲಿ
ಬೆಂಗಳೂರು: ನಾಯಕತ್ವ ತ್ಯಜಿಸಲು ಅತಿಯಾದ ಒತ್ತಡವೇ ಕಾರಣ ಎಂದು ಭಾರತ, ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಆರ್‌ಸಿಬಿಯ ಪಾಡ್‌ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ಕೊಹ್ಲಿ, ‘ಒಂದು ಹಂತದಲ್ಲಿ ಒತ್ತಡ ನಿರ್ವಹಣೆ ಬಹಳ ಕಷ್ಟವಾಯಿತು. ನನ್ನ ವೃತ್ತಿಬದುಕಿನಲ್ಲಿ ಸಾಕಷ್ಟು ಬೆಳವಣಿಗೆಗಳು ಏಕಕಾಲಕ್ಕೆ ನಡೆಯುತ್ತಿದ್ದವು. ಆಗ 7-8 ವರ್ಷದಿಂದ ನಾನು ಭಾರತ ತಂಡವನ್ನು ಮುನ್ನಡೆಸುತ್ತಿದ್ದೆ. 9 ವರ್ಷದಿಂದ ಆರ್‌ಸಿಬಿ ನಾಯಕನಾಗಿದ್ದೆ. ನಾಯಕತ್ವದ ಜೊತೆ ಪ್ರತಿ ಪಂದ್ಯದಲ್ಲೂ ನನ್ನ ಬ್ಯಾಟಿಂಗ್ ಮೇಲೆ ಬಹಳಷ್ಟು ನಿರೀಕ್ಷೆ ಇರುತ್ತಿತ್ತು. ಸುದೀರ್ಘ ಅವಧಿಗೆ ಎಲ್ಲವನ್ನೂ ಒಟ್ಟೊಟ್ಟಿಗೆ ನಿರ್ವಹಿಸುವುದು ದೊಡ್ಡ ಸವಾಲು. ಯಾವಾಗ ಆ ಸವಾಲು ಕೈಮೀರುತ್ತಿದೆ ಎಂದು ಅರಿವಾಯಿತೋ ಆಗ ನಾಯಕತ್ವ ತ್ಯಜಿಸಿದೆ. ಹೆಚ್ಚುವರಿ ಜವಾಬ್ದಾರಿಯ ಭಾಗ ಹೆಗಲ ಮೇಲಿಂದ ಕೆಳಗಿಳಿದ ಮೇಲೆ, ಖುಷಿಯಿಂದ ನನ್ನ ಆಟದ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ’ ಎಂದಿದ್ದಾರೆ.


