ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಲ್ಲಿ ಭಾರತ ತಂಡ ಉತ್ತುಂಗಕ್ಕೇರಿತ್ತು. ೬೮ ಪಂದ್ಯಗಳಲ್ಲಿ ೪೦ ಗೆಲುವು ಸಾಧಿಸಿ, ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸಿದ್ದರು. ೨೦೧೪-೨೨ರ ಅವಧಿಯನ್ನು ಭಾರತೀಯ ಟೆಸ್ಟ್‌ನ ಸ್ವರ್ಣಯುಗ ಎಂದು ಕರೆಯಲಾಗುತ್ತದೆ. ಕಳಪೆ ಫಾರ್ಮ್ ಹಾಗೂ ೨೦೨೭ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಟೆಸ್ಟ್ ನಿಂದ ನಿವೃತ್ತಿ ಘೋಷಿಸಿದರು.
ಬೆಂಗಳೂರು: ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ತಮ್ಮ ರನ್ ಸಾಧನೆ ಮೂಲಕ ಶ್ರೇಷ್ಠ ಆಟಗಾರನಾಗಿ ಗುರುತಿಸಿಕೊಂಡರೂ, ಟೆಸ್ಟ್‌ನಲ್ಲಿ ಅವರು ವಿಶೇಷ ಕಾರಣಕ್ಕೆ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. 2014-15ರಲ್ಲಿ ಟೆಸ್ಟ್ ನಾಯಕನಾಗಿ ನೇಮಕಗೊಂಡ ಕೊಹ್ಲಿ, ಕೆಲ ವರ್ಷಗಳಲ್ಲೇ ಭಾರತೀಯ ಟೆಸ್ಟ್ ತಂಡ ಸಾಗುತ್ತಿದ್ದ ದಿಕ್ಕನ್ನೇ ಬದಲಿಸಿಬಿಟ್ಟರು.
2014ರಿಂದ 2022ರ ವರೆಗಿನ ಅವರ ನಾಯಕತ್ವದ ಅವಧಿಯನ್ನು ಭಾರತೀಯ ಟೆಸ್ಟ್ ಸ್ವರ್ಣಯುಗ ಎಂದೇ ಕರೆಯಲಾಗುತ್ತದೆ. ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ (2018-19) ಗೆದ್ದ ಏಷ್ಯಾದ ಮೊದಲ ನಾಯಕ ಎನಿಸಿಕೊಂಡಿರುವ ಕೊಹ್ಲಿ, 2020 -21ರಲ್ಲಿ ಮತ್ತೊಮ್ಮೆ ಭಾರತಕ್ಕೆ ಸರಣಿ ಗೆಲ್ಲಿಸಿಕೊಟ್ಟಿದ್ದರು. ಇಂಗ್ಲೆಂಡ್, ದಕ್ಷಿಣ ಆಫ್ರಿಕಾದಲ್ಲೂ ಭಾರತ ಟೆಸ್ಟ್ ಪಂದ್ಯಗಳಲ್ಲಿ ಗೆದ್ದಿತ್ತು.
ಕೊಹ್ಲಿ ನಾಯಕತ್ವದಲ್ಲಿ ಭಾರತ 68 ಟೆಸ್ಟ್ ಆಡಿದ್ದು, 40ರಲ್ಲಿ ಗೆದ್ದಿದ್ದರೆ, ಕೇವಲ 17 ಪಂದ್ಯಗಳಲ್ಲಿ ಸೋತಿತ್ತು. ಈ ಮೂಲಕ ಭಾರತದ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ 60 ಟೆಸ್ಟ್‌ಗಳಲ್ಲಿ 27ರಲ್ಲಿ ಗೆದ್ದಿದ್ದರೆ, ಗಂಗೂಲಿ ಅವಧಿಯಲ್ಲಿ 49 ಟೆಸ್ಟ್‌ನಲ್ಲಿ 21ರಲ್ಲಿ ಜಯಗಳಿಸಿತ್ತು.
ಒಟ್ಟಾರೆ ವಿಶ್ವದಲ್ಲೇ 4ನೇ ಗರಿಷ್ಠ ಟೆಸ್ಟ್ ಪಂದ್ಯ ಗೆದ್ದ ಖ್ಯಾತಿ ಕೊಹ್ಲಿಗಿದೆ. ದಕ್ಷಿಣ ಆಫ್ರಿಕಾ ತಂಡ ಗ್ರೇಮ್ ಸ್ಮಿತ್ ನಾಯಕತ್ವದಲ್ಲಿ 109 ಟೆಸ್ಟ್‌ನಲ್ಲಿ 53ರಲ್ಲಿ ಗೆದ್ದಿದ್ದರೆ, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 77 ಪಂದ್ಯಗಳಲ್ಲಿ 48, ಸ್ಟೀವ್ ವಾ 57 ಪಂದ್ಯಗಳಲ್ಲಿ 41ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.
ಬಯಸಿದ್ದಕ್ಕಿಂತ ನನಗೆ ಹೆಚ್ಚು ಸಿಕ್ಕಿದೆ
ನಾನು ಆಶಿಸಿದ್ದಕ್ಕಿಂತ ಹೆಚ್ಚಿನದನ್ನು ಟೆಸ್ಟ್ ಕ್ರಿಕೆಟ್ ನನಗೆ ನೀಡಿದೆ. ಕೃತಜ್ಞತೆ ತುಂಬಿದ ಹೃದಯದೊಂದಿಗೆ ನಿರ್ಗಮಿಸುತ್ತಿದ್ದೇನೆ. ನಾನು ಯಾವಾಗಲೂ ಟೆಸ್ಟ್ ವೃತ್ತಿ ಬದುಕನ್ನು ಖುಷಿಯೊಂದಿಗೆ ಸ್ಮರಿಸಿಕೊಳ್ಳುತ್ತೇನೆ - ವಿರಾಟ್ ಕೊಹ್ಲಿ ಕ್ರಿಕೆಟಿಗ
ನಿವೃತ್ತಿಗೆ ಕಾರಣಗಳೇನು?
1. ಕಳೆದ 5 ವರ್ಷಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ
2. ಒತ್ತಡ ನಿರ್ವಹಿಸಿ, 2027ರ ಏಕದಿನ ವಿಶ್ವಕಪ್‌ಗೆ ಗಮನಹರಿಸಲು
3. ಯುವಕರಿಗೆ ಟೆಸ್ಟ್ ತಂಡದಲ್ಲಿ ಅವಕಾಶ ಮಾಡಿಕೊಡುವ ಸಲುವಾಗಿ
ನಾಯಕನಾಗಿ ವಿರಾಟ್ ಕೊಹ್ಲಿ ಪ್ರಮುಖ ಸಾಧನೆ
1. ಭಾರತೀಯ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕ (67 ಪಂದ್ಯದಲ್ಲಿ 40 ಜಯ)
2. ವಿಶ್ವದಲ್ಲೇ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಗೆದ್ದ ನಾಯಕರಲ್ಲಿ ಕೊಹ್ಲಿಗೆ 4ನೇ ಸ್ಥಾನ.
3. ತವರಿನಲ್ಲಿ ಕೊಹ್ಲಿ ನಾಯಕತ್ವದಲ್ಲಿ ಅಡಿದ ಒಂದೂ ಟೆಸ್ಟ್ ಸರಣಿಯನ್ನು ಭಾರತ ಸೋತಿಲ್ಲ.
4. ಐಸಿಸಿ ದಶಕದ ಟೆಸ್ಟ್ ತಂಡಕ್ಕೆ ನಾಯಕನಾಗಿ ಆಯ್ಕೆ(2021)
5 ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ವಿರಾಟ್ ಕೊಹ್ಲಿ
3 ದಿಗ್ಗಜರ ವೃತ್ತಿಬದುಕಿಗೆ ಮುಳ್ಳಾದ 2 ಟೆಸ್ಟ್ ಸರಣಿ!
ನವದೆಹಲಿ: ಕಳೆದ 6 ತಿಂಗಳ ಅವಧಿಯಲ್ಲಿ ಭಾರತ ತಂಡದ ಮೂವರು ದಿಗ್ಗಜ ಕ್ರಿಕೆಟಿಗರು ನಿವೃತ್ತಿ ಪ್ರಕಟಿಸಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಟೆಸ್ಟ್‌ನಿಂದ ನಿವೃತ್ತಿಯಾಗಿದ್ದರೆ, ಆರ್.ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಮೂವರ ವೃತ್ತಿ ಬದುಕಿಗೂ ತಿರುವು ನೀಡಿದ್ದು ಕಳೆದ ವರ್ಷಾಂತ್ಯದಲ್ಲಿ ನಡೆದ 2 ಟೆಸ್ಟ್ ಸರಣಿ. ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ತವರಿನಲ್ಲಿ ಕ್ಲೀನ್‌ಸ್ವೀಪ್ ಮುಖಭಂಗಕ್ಕೊಳಗಾದ ಕೊಹ್ಲಿ, ರೋಹಿತ್ ತಮ್ಮ ಕಳಪೆ ಆಟದಿಂದ ಟೀಕೆಗೆ ಗುರಿಯಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲೂ ಇವರಿಬ್ಬರು ಮಿಂಚಲಿಲ್ಲ. ಕೊಹ್ಲಿ ಒಂದು ಶತಕ ಬಾರಿಸಿದ್ದರೂ ಇತರ ಪಂದ್ಯಗಳಲ್ಲಿ ವಿಫಲರಾಗಿದ್ದರು. ಇನ್ನು, ಅಶ್ವಿನ್ ಆಸ್ಟ್ರೇಲಿಯಾ ಸರಣಿ ನಡುವೆಯೇ ವಿದಾಯ ಪ್ರಕಟಿಸಿ ತವರಿಗೆ ಮರಳಿದ್ದರು.


