Asia Cup 2022 ಟೂರ್ನಿಗೂ ಮುನ್ನ ಬಾಬರ್ ಅಜಂ ಕೈ ಕುಲುಕಿದ ವಿರಾಟ್ ಕೊಹ್ಲಿ..! ವಿಡಿಯೋ ವೈರಲ್
ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ
ಆಗಸ್ಟ್ 27 ರಿಂದ ಏಷ್ಯಾಕಪ್ ಟೂರ್ನಿ ಆರಂಭ
ಆಗಸ್ಟ್ 28 ರಂದು ಭಾರತ-ಪಾಕಿಸ್ತಾನ ನಡುವೆ ಪೈಪೋಟಿ
ದುಬೈ(ಆ.25): 2022ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಡೀ ಕ್ರಿಕೆಟ್ ಜಗತ್ತೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿವೆ. ಈಗಾಗಲೇ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ದುಬೈಗೆ ಬಂದಿಳಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ನಾಯಕ ಬಾಬರ್ ಅಜಂ ಮೈದಾನದಲ್ಲಿ ಮುಖಾಮುಖಿಯಾಗಿ ಕೈ ಕುಲುಕಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಾರಿ ಯುಎಇನಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯು ಆಗಸ್ಟ್ 27ರಿಂದ ಆರಂಭವಾಗಲಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಆಗಸ್ಟ್ 28ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉಭಯ ತಂಡಗಳ ಆಟಗಾರರು ಮೈದಾನದಲ್ಲಿ ಒಬ್ಬರನ್ನೊಬ್ಬರು ಭೇಟೆಯಾಗಿದ್ದಾರೆ.
ಈ ಕುರಿತಂತೆ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಟೀಂ ಇಂಡಿಯಾ ಆಟಗಾರರು ಆಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಆಟಗಾರರನ್ನು ಭೇಟಿಯಾಗಿ ಕೈಕುಲುಕಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಯುಜುವೇಂದ್ರ ಚಹಲ್, ಆಫ್ಘಾನಿಸ್ತಾನದ ಆಟಗಾರರಾದ ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಜತೆ ಮಾತುಕತೆ ನಡೆಸುತ್ತಿರುವ ದೃಶ್ಯಾವಳಿಗಳನ್ನು ಹಂಚಿಕೊಂಡಿದೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರ ಜತೆ ಕೈಕುಲುಕಿದ್ದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು ಎನಿಸಿಕೊಂಡಿತು.
Asia Cup: ಟೀಮ್ ಇಂಡಿಯಾಗೆ ವಿವಿಎಸ್ ಲಕ್ಷ್ಮಣ್ ಹಂಗಾಮಿ ಕೋಚ್
ಇತ್ತೀಚೆಗಿನ ದಿನಗಳಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಬ್ಯಾಟಿಂಗ್‌ನಲ್ಲಿ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದೆಡೆ ವಿರಾಟ್ ಕೊಹ್ಲಿ ಕಳೆದ ಕೆಲ ವರ್ಷಗಳಿಂದ ದೊಡ್ಡ ಇನಿಂಗ್ಸ್ ಕಟ್ಟಲು ಪರದಾಡುತ್ತಿದ್ದಾರೆ. ಈ ಮೊದಲಿನಿಂದಲೂ ಈ ಇಬ್ಬರು ಆಟಗಾರರ ನಡುವೆ ಹೋಲಿಕೆಗಳು ಕೇಳಿ ಬರುತ್ತಲೇ ಇವೆ. ಇದೆಲ್ಲದರ ನಡುವೆ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಈ ಇಬ್ಬರು ಆಟಗಾರರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ.
ಏಷ್ಯಾಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ದಾಖಲೆಯ 7 ಟ್ರೋಫಿ ಜಯಿಸಿದ್ದು, ಎಂಟನೇ ಏಷ್ಯಾಕಪ್ ಟ್ರೋಫಿಗೆ ಮುತ್ತಿಕ್ಕಲು ತುದಿಗಾಲಿನಲ್ಲಿ ನಿಂತಿದೆ. ಇನ್ನೊಂದೆಡೆ ಎರಡು ಬಾರಿ ಏಷ್ಯಾಕಪ್ ಟ್ರೋಫಿ ಜಯಿಸಿರುವ ಪಾಕಿಸ್ತಾನ ತಂಡವು, ಮತ್ತೊಮ್ಮೆ ಟ್ರೋಫಿ ಜಯಿಸಲು ಹಾತೊರೆಯುತ್ತಿದೆ