ಇಂಗ್ಲೆಂಡ್‌ನಲ್ಲಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ಗೆ ಟೀಂ ಇಂಡಿಯಾಗೆ ಭರ್ಜರಿ ಸಿದ್ದತೆ
* ಜೂನ್ 18ರಂದು ನಡೆಯಲಿದೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್
* ಸೌಥಾಂಪ್ಟನ್‌ನಲ್ಲಿ ಅಭ್ಯಾಸ ಆರಂಭಿಸಿದ ಭಾರತ ಕ್ರಿಕೆಟ್ ತಂಡ
ಸೌಥಾಂಪ್ಟನ್(ಜೂ.07): ಜೂನ್ 18ರಿಂದ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ತಂಡ ಭಾನುವಾರದಿಂದ ಅಭ್ಯಾಸ ಆರಂಭಿಸಿದೆ. 3 ದಿನಗಳ ಕಠಿಣ ಕ್ವಾರಂಟೈನ್ ಮುಕ್ತಾಯಗೊಳಿಸಿದ ಬಳಿಕ ಭಾನುವಾರ, ಇಲ್ಲಿನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು.
ರವೀಂದ್ರ ಜಡೇಜಾ ಮೊದಲಿಗರಾಗಿ ಮೈದಾನಕ್ಕಿಳಿದು ಬೌಲಿಂಗ್ ಅಭ್ಯಾಸ ನಡೆಸಿದರು. ಫೈನಲ್‌ಗೂ ಮುನ್ನ ಭಾರತ ತಂಡ ಕೆಲ ಅಭ್ಯಾಸ ಪಂದ್ಯಗಳನ್ನು ಆಡಲಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಸೋಮವಾರದಿಂದ ಕಠಿಣ ನೆಟ್ಸ್ ಅಭ್ಯಾಸ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
14ನೇ ಆವೃತ್ತಿಯ ಐಪಿಎಲ್ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಮುಕ್ತಾಯದ ಬಳಿಕ ಆತಿಥೇಯ ಇಂಗ್ಲೆಂಡ್ ವಿರುದ್ದ ಭಾರತ ಕ್ರಿಕೆಟ್ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
ಇಂಗ್ಲೆಂಡ್‌ನಲ್ಲಿ 3 ದಿನ ಭಾರತ ಕ್ರಿಕೆಟಿಗರ ಪರಸ್ಪರ ಭೇಟಿಗೆ ನಿಷೇಧ
ಇನ್ನೊಂದೆಡೆ ವಿರಾಟ್ ಕೊಹ್ಲಿ ಪಡೆ ಜತೆಗೆ ಇಂಗ್ಲೆಂಡ್‌ಗೆ ಬಂದಿಳಿದಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ಗೆ ಬಂದಿಳಿದಿದ್ದು, ಏಕೈಕ ಟೆಸ್ಟ್ ಹಾಗೂ ತಲಾ 3 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.