ಮೊಣಕಾಲು ನೋವಿನಿಂದ ಮೊದಲ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದ ವಿರಾಟ್ ಕೊಹ್ಲಿ, ಎರಡನೇ ಪಂದ್ಯಕ್ಕೆ ಮರಳಲಿದ್ದಾರೆ ಎಂದು ಶುಭ್‌ಮನ್ ಗಿಲ್ ತಿಳಿಸಿದ್ದಾರೆ. ಕೊಹ್ಲಿ ಗಾಯ ಗಂಭೀರವಲ್ಲ, ಊತ ಕಡಿಮೆಯಾಗಿದೆ. ಇತ್ತ ಜಸ್‌ಪ್ರೀತ್ ಬುಮ್ರಾ ಗಾಯದ ವರದಿ ಇಂದು ಬಿಸಿಸಿಐಗೆ ಸಲ್ಲಿಕೆಯಾಗಲಿದ್ದು, ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಬಗ್ಗೆ ನಿರ್ಧಾರವಾಗಲಿದೆ.
ಕಟಕ್: ಮಂಡಿ ನೋವಿನಿಂದಾಗಿ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಭಾನುವಾರ ನಡೆಯಲಿರುವ ಎರಡನೇ ಪಂದ್ಯಕ್ಕೆ ಮರಳಲಿದ್ದಾರೆ ಎಂದು ಟೀಂ ಇಂಡಿಯಾದ ಉಪನಾಯಕ ಶುಭ್‌ಮನ್ ಗಿಲ್ ಹೇಳಿದ್ದಾರೆ.
ಕೊಹ್ಲಿ ಆರೋಗ್ಯದ ಬಗ್ಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಗಿಲ್, ‘ಕೊಹ್ಲಿಗೆ ಆಗಿರುವ ಗಾಯ ಗಂಭೀರವಾದುದಲ್ಲ. ಅವರು ಅಭ್ಯಾಸದ ವೇಳೆ ಚೆನ್ನಾಗಿದ್ದರು. ಆದರೆ ಗುರುವಾರ ಬೆಳಿಗ್ಗೆ ಸ್ವಲ್ಪ ಮೊಣಕಾಲಿನ ಊತ ಕಾಣಿಸಿಕೊಂಡಿತು. ಅವರು ಖಂಡಿತವಾಗಿಯೂ ಎರಡನೇ ಏಕದಿನ ಪಂದ್ಯಕ್ಕೆ ಮರಳಲಿದ್ದಾರೆ’ ಎಂದಿದ್ದಾರೆ.
ಏಕದಿನ ಕ್ರಿಕೆಟ್‌ಗೆ ಟೀಂ ಇಂಡಿಯಾ ಹೊಸ ಜೆರ್ಸಿ; ಮೊದಲ ಪಂದ್ಯದಲ್ಲೇ ಮಿಂಚಿದ ರೋಹಿತ್ ಪಡೆ
ಆರಂಭಿಕ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದ ವಿರಾಟ್, ತಂಡದಿಂದ ಹೊರಬಿದ್ದಿದ್ದು ಅಚ್ಚರಿಗೆ ಕಾರಣವಾಗಿತ್ತು. ಈ ಬಗ್ಗೆ ಟಾಸ್ ವೇಳೆ ಮಾಹಿತಿ ನೀಡಿದ್ದ ನಾಯಕ ರೋಹಿತ್ ಶರ್ಮಾ, ‘ಕೊಹ್ಲಿ ನಿನ್ನೆ ರಾತ್ರಿ ಮಂಡಿ ನೋವಿಗೆ ತುತ್ತಾಗಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಆಡುವುದಿಲ್ಲ’ ಎಂದಿದ್ದರು. ಪಂದ್ಯಕ್ಕೂ ಮುನ್ನ ಕೊಹ್ಲಿ ಮಂಡಿಗೆ ಬ್ಯಾಂಡೇಜ್ ಸುತ್ತಲಾಗಿತ್ತು. ಹೀಗಾಗಿ ಕೊಹ್ಲಿ ಚಿಕಿತ್ಸೆಗಾಗಿ ಬೆಂಗಳೂರಿನ ಎನ್‌ಸಿಎಗೆ ಆಗಮಿಸಲಿದ್ದಾರೊ ಅಥವಾ 2ನೇ ಪಂದ್ಯಕ್ಕಾಗಿ ತಂಡದ ಜೊತೆ ಕಟಕ್‌ಗೆ ತೆರಳಲಿದ್ದಾರೊ ಎಂಬ ಗೊಂದಲ ಎದುರಾಗಿತ್ತು.
ವೇಗಿ ಬುಮ್ರಾ ಗಾಯದ ವರದಿ ಇಂದು ಬಿಸಿಸಿಐಗೆ ಸಲ್ಲಿಕೆ ನಿರೀಕ್ಷೆ
ನವದೆಹಲಿ: ಭಾರತದ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಗಾಯದ ಬಗೆಗಿನ ವರದಿ ಶನಿವಾರ ಬಿಸಿಸಿಐಗೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಬೂಮ್ರಾರ ಗಾಯದ ವರದಿ ಅತಿ ಮಹತ್ವದ್ದಾಗಿದ್ದು, ಅವರು ಟೂರ್ನಿಗೆ ಲಭ್ಯವಿದ್ದಾರೊ ಅಥವಾ ಹೊರಬೀಳಲಿದ್ದಾರೊ ಎಂಬ ಕುತೂಹಲವಿದೆ.
ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಗಾಯದ ಪ್ರಮಾಣದ ಬಗ್ಗೆ ವೈದ್ಯಕೀಯ ತಂಡ ವರದಿ ಸಿದ್ಧಪಡಿಸಿದ್ದು, ಶನಿವಾರ ಬಿಸಿಸಿಐ ಮುಂದಿಡಲಿದೆ. ಆ ಬಳಿಕ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೂಮ್ರಾ ಆಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಆಸ್ಟ್ರೇಲಿಯಾಗೆ ತ್ರಿಪಲ್ ಶಾಕ್! ದಿಢೀರ್ ನಿವೃತ್ತಿ ಘೋಷಿಸಿದ ಆಲ್ರೌಂಡರ್
ಕೆಲ ದಿನಗಳ ಹಿಂದೆ ಇಂಗ್ಲೆಂಡ್ ಸರಣಿಗೆ ತಂಡ ಪ್ರಕಟಗೊಂಡಾಗ, ಬೂಮ್ರಾ 3ನೇ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಮೊದಲೆರಡು ಪಂದ್ಯಗಳಿಗೆ ಅವರು ಲಭ್ಯರಿರುವುದಿಲ್ಲ ಎಂದು ಪ್ರಧಾನ ಆಯ್ಕೆಗಾರ ಅಜಿತ್ ಅಗರ್ಕರ್ ತಿಳಿಸಿದ್ದರು. ಆದರೆ, 3ನೇ ಏಕದಿನ ಪಂದ್ಯದಿಂದಲೂ ಬೂಮ್ರಾ ಹೊರಬಿದ್ದಿದ್ದು, ಚಾಂಪಿಯನ್ಸ್ ಟ್ರೋಫಿ ವೇಳೆಗೆ ಸಂಪೂರ್ಣ ಫಿಟ್ ಆಗಲಿದ್ದಾರೆಯೇ ಎನ್ನುವ ಪ್ರಶ್ನೆ ಉದ್ಭವಿಸಿದೆ.
