ಚಾಂಪಿಯನ್ಸ್ ಟ್ರೋಫಿಗೆ ಆಸೀಸ್ ತಂಡಕ್ಕೆ ಹಿನ್ನಡೆ. ಮಾರ್ಷ್ ಗಾಯಗೊಂಡು ಹೊರಬಿದ್ದಿದ್ದಾರೆ. ಹೇಜಲ್‌ವುಡ್, ಕಮಿನ್ಸ್ ಅನುಮಾನ. ಇದೀಗ ಸ್ಟಾರ್ ಆಲ್ರೌಂಡರ್ ಸ್ಟೋನಿಸ್ ಏಕದಿನ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಟಿ20 ಕ್ರಿಕೆಟ್ ಮೇಲೆ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ. ಸ್ಟೋನಿಸ್ ಬದಲಿಗೆ ಯಾರು ಎಂಬುದು ಕುತೂಹಲ.
ಮೆಲ್ಬರ್ನ್: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಇದೇ ಫೆಬ್ರವರಿ 19ರಿಂದ ಆರಂಭವಾಗಲಿದೆ. ಈ ಟೂರ್ನಿಗೂ ಮುನ್ನವೇ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ. ಈಗಾಗಲೇ ಆಲ್ರೌಂಡರ್ ಮಿಚೆಲ್ ಮಾರ್ಷ್ ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಇನ್ನು ಅನುಭವಿ ವೇಗಿಗಳಾದ ಜೋಶ್ ಹೇಜಲ್‌ವುಡ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ ಕೂಡಾ ಫಿಟ್ನೆಸ್ ಕಾರಣದಿಂದಾಗಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ ಎನಿಸಿದೆ. ಈ ಶಾಕ್‌ನಿಂದ ಹೊರಬರುವ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಚಾಂಪಿಯನ್ಸ್ ಟ್ರೋಫಿಗೆ ಆಸೀಸ್ ತಂಡದಲ್ಲಿ ಸ್ಥಾನಪಡೆದಿದ್ದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ತಕ್ಷಣಕ್ಕೆ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ಹೊರಡಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಟಿ20 ಕ್ರಿಕೆಟ್‌ಗೆ ಹೆಚ್ಚಿನ ಗಮನ ಹರಿಸುವ ಉದ್ದೇಶದಿಂದ ನಿವೃತ್ತಿ ಘೋಷಿಸಿದ್ದಾರೆ ಎಂದು ತಿಳಿಸಿದೆ. 2015ರಲ್ಲಿ ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಸ್ಟೋನಿಸ್, ಕಾಂಗರೂ ಪಡೆ ಪರ 71 ಏಕದಿನ ಪಂದ್ಯಗಳನ್ನಾಡಿದ್ದಾರೆ.
ಟೀಂ ಇಂಡಿಯಾದ ಈ ಕ್ರಿಕೆಟಿಗನಿಗೆ ಸಿಕ್ಕಾಪಟ್ಟೆ ಸೊಕ್ಕು ಎಂದ ವಿಶ್ವಕಪ್ ಹೀರೋ ಕೃಷ್ಣಮಾಚಾರಿ ಶ್ರೀಕಾಂತ್!
ಇನ್ನು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿರುವ ಸ್ಟೋನಿಸ್, ಆಸ್ಟ್ರೇಲಿಯಾ ತಂಡದ ಪರ ಏಕದಿನ ಕ್ರಿಕೆಟ್ ಆಡಿದ್ದು ನಿಜಕ್ಕೂ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ನಾನು ಈ ಮಾದರಿಯಲ್ಲಿ ಕಳೆದ ಪ್ರತಿಕ್ಷಣಕ್ಕೂ ಆಭಾರಿಯಾಗಿದ್ದೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ಯಾವತ್ತಿಗೂ ಮರೆಯುವುದಿಲ್ಲ' ಎಂದು ಆಲ್ರೌಂಡರ್ ಸ್ಟೋನಿಸ್ ಹೇಳಿದ್ದಾರೆ.
ಇದೀಗ ಆಸ್ಟ್ರೇಲಿಯಾ ತಂಡವು ಮಾರ್ಕಸ್ ಸ್ಟೋನಿಸ್ ಬದಲಿಗೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಯಾರನ್ನು ಆಯ್ಕೆ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ವಿರಾಟ್ ಕೊಹ್ಲಿ ಮೊದಲ ಏಕದಿನ ಪಂದ್ಯದಿಂದ ಹೊರಬಿದ್ದಿದ್ದೇಕೆ? ಮೌನ ಮುರಿದ ನಾಯಕ ರೋಹಿತ್ ಶರ್ಮಾ
ಈ ಮೊದಲು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಘೋಷಿಸಿದ ಆಸ್ಟ್ರೇಲಿಯಾ ತಂಡ ಹೀಗಿದೆ:
ಪ್ಯಾಟ್ ಕಮಿನ್ಸ್(ನಾಯಕ), ಅಲೆಕ್ಸ್ ಕೇರಿ, ನೇಥನ್ ಎಲ್ಲಿಸ್, ಆ್ಯರೊನ್ ಹಾರ್ಡೀ, ಹೇಜಲ್‌ವುಡ್, ಹೆಡ್, ಜೋಶ್ ಇಂಗ್ಲಿಸ್, ಲಬುಶೇನ್, ಮಾರ್ಷ್, ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಸ್ಮಿತ್, ಸ್ಟಾರ್ಕ್, ಸ್ಟೋಯ್ನಿಸ್, ಆ್ಯಡಂ ಝಂಪಾ.
