* ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ* ವಿರಾಟ್ ಕೊಹ್ಲಿಯನ್ನು ಗುಣಗಾನ ಮಾಡಿದ ಯುವರಾಜ್ ಸಿಂಗ್* ವಿರಾಟ್ ಕೊಹ್ಲಿ ಉಳಿದೆಲ್ಲಾ ಕ್ರೀಡಾಪಟುಗಳುಗಳಿಗೆ ಹೋಲಿಸಿದರೆ 4 ಪಟ್ಟು ಹೆಚ್ಚಿಗೆ ವೃತ್ತಿಬದ್ದತೆಯನ್ನು ಹೊಂದಿದ್ಧಾರೆ

ನವದೆಹಲಿ(ಜೂ.29): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಕೆಲದಿನಗಳ ಹಿಂದಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸೋಲಿನ ಬಳಿಕ ಟೀಂ ಇಂಡಿಯಾ ಬರೋಬ್ಬರಿ ಒಂದು ತಿಂಗಳು ವಿಶ್ರಾಂತಿಗೆ ಜಾರಿದ್ದು, ಮುಂದಿನ ತಿಂಗಳು ದ್ವಿಪಕ್ಷೀಯ ಸರಣಿಯನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದರ ಜತೆಗೆ ಇದೇ ವರ್ಷ ಮಹತ್ವದ ಏಷ್ಯಾಕಪ್ ಹಾಗೂ ತವರಿನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನಾಡಲಿದ್ದು, ಟೀಂ ಇಂಡಿಯಾ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ಕನವರಿಕೆಯಲ್ಲಿದೆ.

ಫಿಟ್ನೆಸ್‌ಗೆ ಸದಾ ಒತ್ತುಕೊಡುವ ವಿರಾಟ್ ಕೊಹ್ಲಿಯ ಬದ್ದತೆಗೆ ಅವರ ಅಭಿಮಾನಿಗಳು ಮಾರುಹೋಗಿದ್ದಾರೆ. ಭಾರತ ಕ್ರಿಕೆಟ್ ತಂಡದ ಸದೃಢ ಆಟಗಾರರಲ್ಲಿ ವಿರಾಟ್ ಕೊಹ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ವಿರಾಟ್ ಕೊಹ್ಲಿಯ ಫಿಟ್ನೆಲ್ ಲೆವೆಲ್‌ ಅನ್ನು ಹಲವು ಕ್ರಿಕೆಟ್ ಪಂಡಿತರು ಹಾಗೂ ವಿಶ್ಲೇಷಕರು ಈಗಾಗಲೇ ಗುಣಗಾನ ಮಾಡಿದ್ದಾರೆ. ಇದೀಗ ಈ ಪಟ್ಟಿಗೆ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ರೂವಾರಿ ಯುವರಾಜ್ ಸಿಂಗ್ ಸೇರ್ಪಡೆಯಾಗಿದ್ದಾರೆ.

ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯದಲ್ಲಿ ರಾಜಕೀಯದ ವಾಸನೆ..?

Sports18 ವಾಹಿನಿ ಜತೆಗೆ ಮಾತನಾಡಿದ ಯುವರಾಜ್ ಸಿಂಗ್, ಆಟಗಾರನಾಗಿ ಫಿಟ್ನೆಸ್‌ ಕುರಿತಾಗಿ ವಿರಾಟ್ ಕೊಹ್ಲಿ ಒಂದು ಬೆಂಚ್‌ ಮಾರ್ಕ್‌ ಸೆಟ್ ಮಾಡಿದ್ದಾರೆ. ಕಳೆದ 15 ವರ್ಷದಲ್ಲಿ ವಿರಾಟ್ ಕೊಹ್ಲಿ ಉಳಿದೆಲ್ಲಾ ಕ್ರೀಡಾಪಟುಗಳುಗಳಿಗೆ ಹೋಲಿಸಿದರೆ 4 ಪಟ್ಟು ಹೆಚ್ಚಿಗೆ ವೃತ್ತಿಬದ್ದತೆಯನ್ನು ಹೊಂದಿದ್ಧಾರೆ ಎಂದು ಯುವಿ ಹೇಳಿದ್ದಾರೆ.

"ನಾನು ವಿರಾಟ್ ಕೊಹ್ಲಿಯ ವೃತ್ತಿಬದ್ದತೆಯನ್ನು ಹತ್ತಿರದಿಂದ ಗಮನಿಸಿದ್ದೇನೆ. ಕಳೆದ 15 ವರ್ಷಗಳಲ್ಲಿ ನಾನು ನೋಡಿದ ಕ್ರೀಡಾಪಟುಗಳಿಗೆ ಹೋಲಿಸಿದರೆ ವಿರಾಟ್ ಕೊಹ್ಲಿಯ ವೃತ್ತಿಬದ್ದತೆ 4 ಪಟ್ಟು ಹೆಚ್ಚಿದೆ" ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡವು ಕೊನೆಯ ಬಾರಿಗೆ 2011ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ, ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪರ ಯುವರಾಜ್ ಸಿಂಗ್ ಆಲ್ರೌಂಡ್ ಆಟದ ಮೂಲಕ ಮಿಂಚಿದ್ದರು. ಯುವಿ ಬ್ಯಾಟಿಂಗ್‌ನಲ್ಲಿ 362 ರನ್ ಹಾಗೂ ಬೌಲಿಂಗ್‌ನಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು.