ವಿರಾಟ್ ಕೊಹ್ಲಿ ಅವರ ಕುಟುಂಬದ ಕ್ರಿಕೆಟ್ ಸಂಪರ್ಕದ ಬಗ್ಗೆ ಈ ಲೇಖನ ಒಳನೋಟವನ್ನು ನೀಡುತ್ತದೆ. ಅವರ ಸೋದರಳಿಯ ಆರ್ಯವೀರ್ ಕೊಹ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ ಮತ್ತು ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಹೆಸರು ನೋಂದಾಯಿಸಿದ್ದಾರೆ. 

ಬೆಂಗಳೂರು: ವಿರಾಟ್ ಕೊಹ್ಲಿ ಜಾಗತಿಕ ಕ್ರಿಕೆಟ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿಯ ಸೋದರಳಿಯ ಕೂಡಾ ಕ್ರಿಕೆಟ್ ಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಸೋದರಳಿಯ ಆರ್ಯವೀರ್ ಕೊಹ್ಲಿ, ಎರಡನೇ ಆವೃತ್ತಿಯ ಡೆಲ್ಲಿ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಹೆಸರು ನೋಂದಾಯಿಸಿದ್ದಾರೆ.

ವಿರಾಟ್ ಕೊಹ್ಲಿಯ ತಂದೆ ಓರ್ವ ಪ್ರಸಿದ್ದ ಕ್ರಿಮಿನಲ್ ಲಾಯರ್ ಆಗಿದ್ದರು. ಕೊಹ್ಲಿ ತಂದೆಯ ನಿಧನದ ಬಳಿಕ ವಿರಾಟ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಬಾಲ್ಯದಿಂದಲೇ ವಿರಾಟ್ ಕೊಹ್ಲಿಯನ್ನು ವೃತ್ತಿಪರ ಕ್ರಿಕೆಟಿಗನನ್ನಾಗಿಸಲು ಅವರ ತಂದೆ ಸಾಕಷ್ಟು ಶ್ರಮಿಸಿದ್ದರು. ಇನ್ನು ವಿರಾಟ್ ಕೊಹ್ಲಿ ಅವರ ತಾಯಿ ಗೃಹಿಣಿಯಾಗಿದ್ದು, ಗುರುಗಾವ್‌ನಲ್ಲಿ ವಾಸವಾಗಿದ್ದಾರೆ.

ವಿಕಾಸ್ ಕೊಹ್ಲಿ(ವಿರಾಟ್ ಸಹೋದರ):

ವಿರಾಟ್ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ, ವಿರಾಟ್ ಅವರ ಸಂಪೂರ್ಣ ಬ್ಯುಸಿನೆಸ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಬಂದಿದ್ದಾರೆ. ಕೊಹ್ಲಿ ಅಣ್ಣ ವಿಕಾಸ್ ಒನ್‌8 ಕಮ್ಯೂಟ್ ಸೇರಿದಂತೆ ಕೊಹ್ಲಿಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಬಂದಿದ್ದಾರೆ. ವಿಕಾಸ್‌ ಕೊಹ್ಲಿ ಸಾಧ್ಯವಾದಷ್ಟರ ಮಟ್ಟಿಗೆ ಲೈಮ್‌ಲೈಟ್‌ನಿಂದ ದೂರವೇ ಉಳಿಯಲು ಹೆಚ್ಚು ಬಯಸುತ್ತಾರೆ.

ಭಾವನಾ ಕೊಹ್ಲಿ ದಿಂಗ್ರಾ(ವಿರಾಟ್ ಸಹೋದರಿ)

ಭಾವನಾ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿ ಗುರುತಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಆಡಿದರೆ, ಟೀಂ ಇಂಡಿಯಾ ಮಹತ್ವದ ಪಂದ್ಯಗಳನ್ನು ಜಯಿಸಿದರೆ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಾ ಗಮನ ಸೆಳೆಯುತ್ತಾರೆ.

ವಿರಾಟ್ ಕೊಹ್ಲಿ ಸೋದರಳಿಯ ಆರ್ಯವೀರ್:

ಎರಡನೇ ಅವೃತ್ತಿಯ ಡೆಲ್ಲಿ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ವಿರಾಟ್ ಕೊಹ್ಲಿ ಸೋದರಳಿಯ ಆರ್ಯವೀರ್ ಕೊಹ್ಲಿ ತಮ್ಮ ಹೆಸರು ನೋಂದಾಯಿಸುತ್ತಿದ್ದಂತೆಯೇ ಅವರು ಇದೀಗ ಲೈಮ್‌ಲೈಟ್‌ಗೆ ಬಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಐಪಿಎಲ್ ಒಂದೊಳ್ಳೆಯ ಪ್ಲಾಟ್‌ಫಾರಂ ಆಗಿದೆ. ಐಪಿಎಲ್‌ನಂತ ದೊಡ್ಡ ಟೂರ್ನಿಯಲ್ಲಿ ಆಯ್ಕೆಯಾಗುವ ಮೊದಲು ಆಟಗಾರರು ತಮ್ಮ ರಾಜ್ಯದ ಪರ ನಡೆಯಲಿರುವ ಟಿ20 ಲೀಗ್, ದೇಶಿ ಟೂರ್ನಿಯಲ್ಲಿ ಮಿಂಚಬೇಕಿದೆ. ಅಂದಹಾಗೆ ಆರ್ಯವೀರ್ ಕೊಹ್ಲಿಯ ವಯಸ್ಸು ಎಷ್ಟು? ಅವರು ಬ್ಯಾಟರ್, ಬೌಲರ್ ಅಥವಾ ಆಲ್ರೌಂಡರ್ ಎನ್ನುವ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಪತ್ನಿ ಪ್ರಡ್ಯೂಸರ್, ಎರಡು ಮಕ್ಕಳ ತಾಯಿ:

ಇನ್ನು ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಯಾರಿಗೆ ಗೊತ್ತಿಲ್ಲ ಹೇಳಿ. ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯ ಪತ್ನಿಯಾಗುವ ಮೊದಲೇ ಬಾಲಿವುಡ್‌ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಮಿಂಚಿದ್ದರು. 36 ವರ್ಷದ ಅನುಷ್ಕಾ ಶರ್ಮಾ ಹೆಸರು ಫಿಲ್ಮಂ ಪ್ರೊಡಕ್ಷನ್ ಕಂಪನಿಯ ಜತೆ ಥಳುಕು ಹಾಕಿಕೊಂಡಿದೆ. ವಿರುಷ್ಕಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು(ವಾಮಿಕಾ ಕೊಹ್ಲಿ) ಹಾಗೂ ಮಗ(ಅಕಾಯ್ ಕೊಹ್ಲಿ).

ವಿರಾಟ್ ಕೊಹ್ಲಿ ಸದ್ಯ ಎರಡು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, 2027ರ ಐಸಿಸಿ ಏಕದಿನ ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಇತ್ತೀಚೆಗೆ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ 17 ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೊಹ್ಲಿಗೆ ಐಪಿಎಲ್ ಟ್ರೋಫಿ ಮರಿಚಿಕೆ ಎನಿಸಿಕೊಂಡಿತ್ತು. ಆದರೆ 18ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿತ್ತು.