* ಮುಂಬೈ ಇಂಡಿಯನ್ಸ್ ಎದುರು ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಅಜೇಯ ಅರ್ಧಶತಕ ಸಿಡಿಸಿ ಆರ್‌ಸಿಬಿಗೆ ಗೆಲುವು ತಂದ ವಿರಾಟ್ ಕೊಹ್ಲಿ* ಐಪಿಎಲ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟ ಆರ್‌ಸಿಬಿ ಮಾಜಿ ನಾಯಕ ಕೊಹ್ಲಿ
ಬೆಂಗಳೂರು(ಏ.03): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್ ಭರ್ಜರಿ ಜಯ ಸಾಧಿಸಿದೆ. ನಾಯಕ ಫಾಫ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ವಿರಾಟ್ ಕೊಹ್ಲಿಯ ಕೆಚ್ಚೆದೆಯ ಬ್ಯಾಟಿಂಗ್, ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿತು. ಇನ್ನು ಇದೇ ವೇಳೆ ವಿರಾಟ್ ಕೊಹ್ಲಿ, ಐಪಿಎಲ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಕೇವಲ 49 ಎಸೆತಗಳಣ್ನು ಎದುರಿಸಿ 6 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 82 ರನ್ ಬಾರಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಇದರ ಜತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿ 50ನೇ ಬಾರಿಗೆ 50+ ರನ್ ಬಾರಿಸಿದ ಭಾರತದ ಮೊದಲ ಹಾಗೂ ಒಟ್ಟಾರೆ ವಿಶ್ವದ ಎರಡನೇ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಒಟ್ಟಾರೆ ಐಪಿಎಲ್‌ನಲ್ಲಿ ಅತಿಹೆಚ್ಚು ಬಾರಿ 50+ ರನ್ ಬಾರಿಸಿದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಡೇವಿಡ್ ವಾರ್ನರ್, ಐಪಿಎಲ್‌ನಲ್ಲಿ ಇದುವರೆಗೂ 60 ಬಾರಿ 50+ ರನ್ ಬಾರಿಸಿದ್ದಾರೆ. ಇನ್ನು ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ 49 ಬಾರಿ 50+ ರನ್ ಬಾರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 45 ಬಾರಿ ಅರ್ಧಶತಕ ಹಾಗೂ 5 ಶತಕಗಳನ್ನು ಬಾರಿಸಿ ಮಿಂಚಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವು ಮೊದಲು ಬ್ಯಾಟ್ ಮಾಡಿ, ಆರ್‌ಸಿಬಿಗೆ 172 ರನ್ ಸವಾಲಿನ ಗುರಿ ನೀಡಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಲು ಇಳಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡು ಪ್ಲೆಸಿ ಉತ್ತಮ ಆರಂಭ ಒದಗಿಸಿದರು. ಮೊದಲ 4 ಓವರಲ್ಲಿ 40 ರನ್ ಚಚ್ಚಿದ ಈ ಜೋಡಿ ಪವರ್-ಪ್ಲೇ ಮುಕ್ತಾಯಕ್ಕೆ 53 ರನ್ ಕಲೆಹಾಕಿತು. ಮುಂಬೈ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಡು ಪ್ಲೆಸಿ 29 ಎಸೆತದಲ್ಲಿ ಅರ್ಧಶತಕ ಪೂರೈಸಿದರೆ, ವಿರಾಟ್ ಐಪಿಎಲ್‌ನಲ್ಲಿ 46ನೇ ಅರ್ಧಶತಕ ಬಾರಿಸಿದರು.
IPL 2023 ಭಾವನಾತ್ಮಕ ಸಂದೇಶದೊಂದಿಗೆ ಗುಜರಾತ್ ಟೈಟಾನ್ಸ್ ತಂಡ ತೊರೆದ ಕೇನ್ ವಿಲಿಯಮ್ಸನ್..! ವಿಡಿಯೋ ವೈರಲ್
ಮೊದಲ ವಿಕೆಟ್‌ಗೆ ಇವರಿಬ್ಬರ ನಡುವೆ 14.5 ಓವರಲ್ಲಿ 148 ರನ್ ಜೊತೆಯಾಟ ಮೂಡಿಬಂತು. ಡು ಪ್ಲೆಸಿ 43 ಎಸೆತದಲ್ಲಿ 5 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 73 ರನ್ ಗಳಿಸಿ ಔಟಾದರು. 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ದಿನೇಶ್ ಕಾರ್ತಿಕ್ ಖಾತೆ ತೆರೆಯದೆ ಔಟಾದರೆ, ಮ್ಯಾಕ್ಸ್‌ವೆಲ್ 2 ಸಿಕ್ಸರ್ ಸಿಡಿಸಿ ತಂಡವನ್ನು ಜಯದ ಗೆರೆ ದಾಟಿಸಿದರು. ಮನಮೋಹಕ ಬ್ಯಾಟಿಂಗ್ ನಡೆಸಿದ ಕೊಹ್ಲಿ 49 ಎಸೆತದಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 82 ರನ್ ಸಿಡಿಸಿ ಔಟಾಗದೆ ಉಳಿದರು.
ಕ್ರೀಡಾಂಗಣ ಭರ್ತಿ!
ಆರ್‌ಸಿಬಿ 3 ವರ್ಷ ಬಳಿಕ ತವರು ಕ್ರೀಡಾಂಗಣದಲ್ಲಿ ಆಡುವುದನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಚಿನ್ನಸ್ವಾಮಿ ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು. ಪಂದ್ಯದುದ್ದಕ್ಕೂ ‘ಆರ್‌ಸಿಬಿ ಆರ್‌ಸಿಬಿ’ ಎನ್ನುವ ಕೂಗು ಕ್ರೀಡಾಂಗಣದಲ್ಲಿ ಪ್ರತಿಧ್ವನಿಸಿತು.
