Asianet Suvarna News Asianet Suvarna News

IPL 2023 ಭಾವನಾತ್ಮಕ ಸಂದೇಶದೊಂದಿಗೆ ಗುಜರಾತ್ ಟೈಟಾನ್ಸ್ ತಂಡ ತೊರೆದ ಕೇನ್ ವಿಲಿಯಮ್ಸನ್‌..! ವಿಡಿಯೋ ವೈರಲ್

16ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಕೇನ್ ವಿಲಿಯಮ್ಸನ್ ಔಟ್
ಚೆನ್ನೈ ಎದುರಿನ ಪಂದ್ಯದ ವೇಳೆ ಗಾಯಗೊಂಡಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ
ಭಾವನಾತ್ಮಕ ಸಂದೇಶ ರವಾನಿಸಿದ ಗುಜರಾತ್ ಟೈಟಾನ್ಸ್ ಆಟಗಾರ

Sad to be leaving so soon I will miss the camp for sure says Kane Williamson video goes viral kvn
Author
First Published Apr 3, 2023, 2:24 PM IST

ನವದೆಹಲಿ(ಏ.03): 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಆದರೆ ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವು 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೇ ದೊಡ್ಡ ಆಘಾತ ಅನುಭವಿಸಿದ್ದು, ಅನುಭವಿ ಕ್ರಿಕೆಟಿಗ ಕೇನ್ ವಿಲಿಯಮ್ಸನ್‌ ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಬಿದ್ದಿದ್ದಾರೆ. ಸಿಎಸ್‌ಕೆ ಎದುರಿನ ಪಂದ್ಯದ ವೇಳೆ ಕೇನ್‌ ವಿಲಿಯಮ್ಸನ್‌ ಮೊಣಕಾಲಿನ ಗಾಯಕ್ಕೊಳಗಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದ ವೇಳೆ ಬೌಂಡರಿ ಗೆರೆಯಲ್ಲಿ ಕ್ಷೇತ್ರರಕ್ಷಣೆ ಮಾಡುತ್ತಿದ್ದ ಕೇನ್ ವಿಲಿಯಮ್ಸನ್, ಬೌಂಡರಿ ಗೆರೆ ದಾಟುತ್ತಿದ್ದ ಚೆಂಡನ್ನು ಹಿಡಿಯುವ ಯತ್ನದಲ್ಲಿ ಎತ್ತರಕ್ಕೆ ಜಿಗಿದು, ಚೆಂಡು ಬೌಂಡರಿ ಗೆರೆ ದಾಟದಂತೆ ತಡೆಯುವ ಯತ್ನ ನಡೆಸಿದರು. ಕಾಲು ಬೌಂಡರಿ ಗೆರೆಗೆ ತಾಗಿದ್ದರಿಂದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ತನ್ನ ಖಾತೆಗೆ 4 ರನ್ ಸೇರಿಸಿಕೊಂಡಿತು. ಆದರೆ ಇದೇ ಸಂದರ್ಭದಲ್ಲಿ ಕೇನ್‌ ವಿಲಿಯಮ್ಸನ್‌ ಮೊಣಕಾಲಿಗೆ ಬಲವಾದ ಪೆಟ್ಟು ಬಿದ್ದಿತ್ತು. ಆ ನಂತರ ಅವರು ಸರಿಯಾಗಿ ಕಾಲೂರಿ ನಿಲ್ಲಲು ಸಾಧ್ಯವಾಗಿರಲಿಲ್ಲ.  

ಈ ಸಂದರ್ಭದಲ್ಲಿ ತಂಡದ ಫಿಸಿಯೋ ಹಾಗೂ ಬೆಂಚ್‌ನಲ್ಲಿದ್ದ ಆಟಗಾರರ ಸಹಾಯದಿಂದ ಕೇನ್ ವಿಲಿಯಮ್ಸನ್‌, ಡ್ರೆಸ್ಸಿಂಗ್‌ ರೂಂಗೆ ವಾಪಾಸ್ಸಾಗಿದ್ದರು. ಇದಾದ ಬಳಿಕ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು, ಕೇನ್ ವಿಲಿಯಮ್ಸನ್‌, ಕೆಲವು ದಿನಗಳ ಮಟ್ಟಿಗೆ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ತಿಳಿಸಿತ್ತು. ಇದೀಗ ಕೇನ್, ಇಂದು(ಏ.03) ಭಾರತವನ್ನು ತೊರೆದು ನ್ಯೂಜಿಲೆಂಡ್‌ಗೆ ವಾಪಾಸ್ಸಾಗುತ್ತಿದ್ದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಟೂರ್ನಿಯ ಪಾಲ್ಗೊಳ್ಳುವ ಅವಕಾಶ ಕಳೆದುಕೊಳ್ಳುತ್ತಿರುವುದರ ಬಗ್ಗೆ ಭಾವನಾತ್ಮಕ ಸಂದೇಶ ಸಾರಿದ್ದಾರೆ.

ಶುಭಾರಂಭ ಮಾಡಿದ ಗುಜರಾತ್ ಟೈಟಾನ್ಸ್‌ಗೆ ಶಾಕ್, ಐಪಿಎಲ್ ಟೂರ್ನಿಯಿಂದ ವಿಲಿಯಮ್ಸನ್ ಔಟ್!

" ಇಷ್ಟು ಬೇಗ ವಾಪಾಸ್ಸಾಗುತ್ತಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ. ನಾನು ಖಂಡಿತವಾಗಿಯೂ ಗುಜರಾತ್ ಟೈಟಾನ್ಸ್ ಪಡೆಯನ್ನು ಮಿಸ್ ಮಾಡಿಕೊಳ್ಳಲಿದ್ದೇನೆ. ಆದಷ್ಟು ಬೇಗ ಮತ್ತೆ ಭೇಟಿಯಾಗೋಣ" ಎಂದು ವಿಡಿಯೋದಲ್ಲಿ ಕೇನ್ ವಿಲಿಯಮ್ಸನ್, ಭಾವನಾತ್ಮಕವಾಗಿ ನುಡಿದಿದ್ದಾರೆ.

ಇನ್ನು ಏಪ್ರಿಲ್ 02ರಂದು, ಕೇನ್ ವಿಲಿಯಮ್ಸನ್‌, ಐಪಿಎಲ್ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿರುವುದರ ಬಗ್ಗೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅಧಿಕೃತವಾಗಿ ಮಾಹಿತಿ ನೀಡಿತ್ತು. ಈ ಕುರಿತಂತೆ ಸ್ವತಃ ಕೇನ್ ವಿಲಿಯಮ್ಸನ್, ಗುಜರಾತ್ ತಂಡಕ್ಕೆ ಶುಭ ಹಾರೈಸಿದ್ದರ ವಿಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟೈಟಾನ್ಸ್ ಶೇರ್ ಮಾಡಿತ್ತು.

"ಈ ಆವೃತ್ತಿಯ ಮುಂಬರುವ ಪಂದ್ಯಗಳಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ನನ್ನ ಶುಭ ಹಾರೈಕೆಗಳು. ನಾನು ನಿಮ್ಮ ಜತೆಗಿರಬೇಕು ಎಂದು ಅನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ನನ್ನನ್ನು ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಧನ್ಯವಾದಗಳು. ಆದಷ್ಟು ಬೇಗ ಗುಣಮುಖರಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು" ಎಂದು ಕೇನ್ ವಿಲಿಯಮ್ಸನ್‌ ಶುಭ ಹಾರೈಸಿದ್ದಾರೆ.

ಹಾಲಿ ಚಾಂಪಿಯನ್‌ ಗುಜರಾತ್ ಟೈಟಾನ್ಸ್ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೂ 13 ಪಂದ್ಯಗಳನ್ನು ಆಡಬೇಕಿದೆ. ಹೀಗಾಗಿ ಕೇನ್ ವಿಲಿಯಮ್ಸನ್ ಬದಲಿಗೆ ಯಾವ ವಿದೇಶಿ ಆಟಗಾರ ತಂಡ ಕೂಡಿಕೊಳ್ಳಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Follow Us:
Download App:
  • android
  • ios