Virat Kohli - Anushka Sharma buys luxurious farmhouse: ಐಶಾರಾಮಿ ಎಂಟು ಎಕರೆ ವಿಸ್ತೀರ್ಣದ ಫಾರ್ಮ್ ಹೌಸ್ ಖರೀದಿಸಿದ ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ ಜೋಡಿ. ಈ ಹಿಂದೆ ದೀಪಿಕಾ ಪಡುಕೋಣೆ - ರಣ್ವೀರ್ ಸಿಂಗ್ ಕೂಡ ಇದೇ ಪ್ರದೇಶದಲ್ಲಿ ಫಾರ್ಮ್ ಹೌಸ್ ಖರೀದಿಸಿದ್ದರು.
ನವದೆಹಲಿ: ಸದ್ಯ ಏಷ್ಯಾ ಕಪ್ ಸರಣಿಯಲ್ಲಿ ಬ್ಯುಸಿ ಇರುವ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಅಲಿಬಾಘ್‌ನಲ್ಲಿ ಫಾರ್ಮ್ ಹೌಸ್ ಒಂದನ್ನು ಖರೀದಿಸಿದ್ದಾರೆ. ಗಣೇಶ ಚತುರ್ಥಿ ಹಬ್ಬದ ದಿನವೇ ಈ ಫಾರ್ಮ್ ಹೌಸನ್ನು ಖರೀದಿ ಮಾಡಿದ್ದಾರೆ. ಇದರ ಪಕ್ಕದಲ್ಲೇ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕೂಡ ಈ ಹಿಂದೆ ಫಾರ್ಮ್ ಹೌಸ್ ಖರೀದಿಸಿದ್ದರು. ಅದ್ದೂರಿ ಕಾರುಗಳನ್ನು, ನಿವಾಸಗಳನ್ನು ಸ್ಟಾರ್ ದಂಪತಿಗಳು ಆಗಾಗ ಖರೀದಿಸುತ್ತಲೇ ಇರುತ್ತಾರೆ. ಇದೀಗ ಅಲಿಬಾಘ್‌ನ ರಿಯಲ್ ಎಸ್ಟೇಟ್‌ನಲ್ಲಿ ಕೊಹ್ಲಿ ದಂಪತಿ ಹೂಡಿಕೆ ಮಾಡಿದ್ದಾರೆ.
ಎಂಟು ಎಕರೆ ವ್ಯಾಪ್ತಿಯನ್ನು ಹೊಂದಿರುವ ಫಾರ್ಮ್ ಹೌಸ್ ಇದಾಗಿದ್ದು ಒಟ್ಟೂ ಮೌಲ್ಯ 19.24 ಕೋಟಿ ರೂಪಾಯಿಗಳಾಗಿದ್ದು, ರಿಜಿಸ್ಟ್ರೇಷನ್‌ಗೆಂದೇ ಕೊಹ್ಲಿ - ಅನುಷ್ಕಾ 1.15 ಕೋಟಿ ರೂ ಕಟ್ಟಿದ್ದಾರೆ. ಜತೆಗೆ ರೂ 3.35 ಲಕ್ಷ ಅಂಚೆ ಮೌಲ್ಯವನ್ನೂ ಪಾವತಿಸಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ತಿಳಿಸಿದೆ.
ಕಳೆದ ತಿಂಗಳು ಇದೇ ಪ್ರದೇಶದಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಫಾರ್ಮ್ ಹೌಸ್ ಗೃಹ ಪ್ರವೇಶ ಮಾಡಿದ್ದರು.
ಇದನ್ನೂ ಓದಿ: ವಿರಾಟ್-ಅನುಷ್ಕಾ ಮಧ್ಯೆ ಎಲ್ಲವೂ ಸರಿಯಾಗಿದೆಯಾ? ಮಗಳೊಂದಿಗೆ ಮುಂಬೈಗೆ ಮರಳಿದ ನಟಿ!
2021ರಲ್ಲಿ ದೀಪಿಕಾ ಮತ್ತು ರಣ್ವೀರ್ ಜೋಡಿ ಐದು ಬಿಎಚ್‌ಕೆ ನಿವಾಸವನ್ನು ಬರೋಬ್ಬರಿ 22 ಕೋಟಿ ರೂ ಕೊಟ್ಟು ಖರೀದಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಮಪಗಾಂವ್ ಎಂಬ ಹಳ್ಳಿಯಲ್ಲಿ ಸುಮಾರು 9,000 ಸ್ಕ್ವೇರ್ ಮೀಟರ್ಸ್‌ನಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ವಿರಾಟ್ ಕೊಹ್ಲಿ - ಅನುಷ್ಕಾ ಅಷ್ಟೇ ಅಲ್ಲದೇ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ - ಗೌರಿ ಖಾನ್ ದಂಪತಿ ಕೂಡ ಅಲಿಬಾಘ್‌ನಲ್ಲಿ ಫಾರ್ಮ್ ಹೌಸ್ ಹೊಂದಿದ್ದಾರೆ.
ಅನುಷ್ಕಾ ಶರ್ಮಾ ಸದ್ಯ ಚಕ್ದಾ ಎಕ್ಸ್‌ಪ್ರೆಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಇಂಗ್ಲೆಂಡಿನ ಲೀಡ್ಸ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಕ್ದಾ ಎಕ್ಸ್‌ಪ್ರೆಸ್ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಜೂನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರವಾಗಿದೆ. ಇತ್ತೀಚೆಗಷ್ಟೇ ತಾಪ್ಸಿ ಪನ್ನು ಅವರು ಮಿಥಾಲಿ ರಾಜ್ ಅವರ ಜೀವನಾಧಾರಿತ ಶಭಾಷ್ ಮಿಥು ಚಿತ್ರ ಬಿಡುಗಡೆಯಾಗಿತ್ತು. ಚಕ್ದಾ ಎಕ್ಸ್‌ಪ್ರೆಸ್ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಸುಮಾರು ಮೂರು ವರ್ಷಗಳ ನಂತರ ಅನುಷ್ಕಾ ಶರ್ಮಾ ಚಿತ್ರ ತೆರೆಗೆ ಬರುತ್ತಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ಮತ್ತು ಹೆರಿಗೆ ಸಂಬಂಧ ಅವರು ಬ್ರೇಕ್ ತೆಗೆದುಕೊಂಡಿದ್ದರು. ಜೂಲನ್ಸ್ ಗೋಸ್ವಾಮಿ ಭಾರತ ಕಂಡ ಶ್ರೇಷ್ಟ ಕ್ರೀಡಾಪಟುಗಳಲ್ಲಿ ಒಬ್ಬರು. ಹಲವು ಅಡೆತಡೆಗಳನ್ನು ಧೈರ್ಯವಾಗಿ ಎದುರಿಸಿ ತಮ್ಮ ಕ್ರಿಕೆಟ್ ಕನಸನ್ನು ನನಸು ಮಾಡಿಕೊಂಡಿರುವವರು. ಈ ಚಿತ್ರ ಈಗಾಗಲೇ ಭಾರೀ ನಿರೀಕ್ಷೆಯನ್ನು ಹುಟ್ಟಿಸಿದೆ.
ಇದನ್ನೂ ಓದಿ: Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!
ಜೂಲನ್ ಗೋಸ್ವಾಮಿ ನೂರಾರು ಮಹಿಳಾ ಕ್ರೀಡಾಪಟುಗಳಿಗೆ ಆದರ್ಶವಾಗಿದ್ದಾರೆ. ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುನ್ನಡೆಸಿದ ಖ್ಯಾತಿ ಅವರದು. 2018ರಲ್ಲಿ ಜೂಲನ್ ಗೋಸ್ವಾಮಿ ಅವರ ಸ್ಟಾಂಪ್ ಅನ್ನು ಅಂಚೆ ಇಲಾಖೆ ಬಿಡುಗಡೆ ಮಾಡಿತ್ತು. ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆದಿರುವ ದಾಖಲೆ ಈಗಲೂ ಜೂಲನ್ ಅವರ ಹೆಸರಿನಲ್ಲಿದೆ. ಮೂರು ವರ್ಷಗಳ ನಂತರ ಅನುಷ್ಕಾ ಶರ್ಮಾ ಚಿತ್ರ ಪ್ರದರ್ಶನವಾಗುತ್ತಿದ್ದರೂ, ಅದು ಥಿಯೇಟರ್‌ಗೆ ಬರುತ್ತಿಲ್ಲ. ಈಗಾಗಲೇ ಒಟಿಟಿಯೊಂದಕ್ಕೆ ಹಕ್ಕು ಮಾರಾಟವಾಗಿದ್ದು, ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ವರ್ಷಾಂತ್ಯ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಸಿನೆಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.
